ಹುಲಿ ಮೀಸಲು ಅರಣ್ಯಕ್ಕೆ ಪ್ರವೇಶ: ಜೈಲು
ಚಿಕ್ಕಮಗಳೂರು: ಭದ್ರಾ ಹುಲಿ ಮೀಸಲು ನಿರ್ಬಂಧಿತ ಅರಣ್ಯ ಪ್ರದೇಶವನ್ನು ಪ್ರವೇಶ ಮಾಡಿದ ವ್ಯಕ್ತಿಯೋರ್ವನಿಗೆ ಜೆ.ಎಂ.ಎಫ್.ಸಿ ನ್ಯಾಯಾಲಯವು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 2012 ರ ಡಿಸೆಂಬರ್ 12 ರಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಸನ್ನಿಬಾಬು ಎಂಬುವವರು ಭದ್ರಾ ಹುಲಿ ಮೀಸಲು ನಿರ್ಬಂಧಿತ ಪ್ರದೇಶವಾದ ಕೆಸವೆಯಿಂದ ಹಿಪ್ಲಾ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು. ಈ ಸಂಬಂಧ ಅವರ ವಿರುದ್ಧ ಮುತ್ತೋಡಿ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ದಯಾನಂದ ವಿ. ಹಿರೇಮಠ ಅವರು, ಅಪರಾಧ ಸಾಬೀತಾಗಿರುವುದರಿಂದ ಆರೋಪಿ ಸನ್ನಿಬಾಬುವಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ರಸ್ತೆ ಅಪಘಾತ: ದಂಪತಿ ಸಾವು
ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ. ಪ್ರವೀಣ್ (30), ಅವರ ಪತ್ನಿ ಉಮಾ (26) ಮೃತಪಟ್ಟವರು. ಅರಸಿಕೆರೆ ತಾಲೂಕಿನ ಮದ್ರಹಳ್ಳಿವರಾದ ಪ್ರವೀಣ್ ಪತ್ನಿ ಉಮಾ ಜತೆ ಬೈಕಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ವೇಳೆ ನಗರ ಹೊರ ವಲಯದ ಕಣಿವೆ ಬಳಿ ಎದುರಿಗೆ ಬಂದ 407 ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ದಂಪತಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಪ್ರವೀಣ್ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಉಮಾ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ಆಕಸ್ಮಿಕ ಗುಂಡು ಹಾರಿ ಪತ್ನಿ ಸಾವು
ಚಿಕ್ಕಮಗಳೂರು: ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿ ಮರಣಕ್ಕೆ ಕಾರಣನಾದ ಆರೋಪಿಗೆ ಜೆ.ಎಂ.ಎಫ್.ಸಿ. ನ್ಯಾಯಾಲಯವು ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿದೆ. 2005 ಮಾರ್ಚ್ 2 ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ತಾಲೂಕಿನ ಮಹಲ್ ಗ್ರಾಮದ ಕುರ್ಚಿನ ಬಾಗಿಲು ಎಸ್ಟೇಟ್ನ ಕಾಫಿ ತೋಟದ ಕೂಲಿ ಲೈನ್ ವಾಸವಿರುವ ಆರೋಪಿ ದುರ್ಗಾನಾಯ್ಕ ಎಸ್.ಬಿ.ಎಂ.ಎಲ್. ಬಂದೂಕನ್ನು ಲೋಡ್ ಮಾಡಿ ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಎದುರಿಗೆ ಇದ್ದ ಆತನ ಪತ್ನಿ ಮಂಜುಳ ಇವರ ಕುತ್ತಿಗೆ ಮತ್ತು ತಲೆಗೆ ಗುಂಡು ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ದಯಾನಂದ ವಿ. ಹಿರೇಮಠ ಅವರು ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ದುರ್ಗಾನಾಯ್ಕನಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಮೊಕದ್ದಮೆ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

