ಚಿಕ್ಕಮಗಳೂರು

ಮಳೆಗೆ ಬೆಳೆ ಹಾನಿ: ಹೆಚ್ಚಿನ ಪರಿಹಾರಕ್ಕೆ ಆಗ್ರಹ

Published On :

ಚಿಕ್ಕಮಗಳೂರು: ಸತತ 2 ತಿಂಗಳು ಸುರಿದ ಭಾರೀ ಮಳೆಗೆ ರೈತರು ಹಾಗೂ ಬೆಳೆಗಾರರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದು, ಈಗ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಮೊತ್ತ ಸಾಕಾಗದು, ಎಕರೆವಾರು ರೈತರಿಗೆ ಕನಿಷ್ಠ ರು. 1ಲಕ್ಷ ಪರಿಹಾರ ನೀಡಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ನಷ್ಟದ ಅಂದಾಜು ಮಾಡಿ, ವರದಿ ನೀಡಬಾರದು. ತೋಟ ಹಾಗೂ ಹೊಲಕ್ಕೆ ಖುದ್ದು ಭೇಟಿ ನೀಡಿ, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನೈಜ ವರದಿ ನೀಡಬೇಕು ಎಂದು ಜಿಪಂನಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಆರಂಭದಲ್ಲಿ ಜಿಪಂ ಸದಸ್ಯ ಶೃಂಗೇರಿ ಶಿವಣ್ಣ ಮಾತನಾಡಿ, ಶೃಂಗೇರಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಅಡಕೆ, ಕಾಳು ಮೆಣಸು, ಏಲಕ್ಕಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳಿಗೆ ಕೋಟ್ಯಂತರ ರೂ. ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವನ ಹೇಳುವ ಕೆಲಸ ಈವರೆಗೆ ಮಾಡಿಲ್ಲ ಎಂದು ಹೇಳಿದರು.
ಸಮರ್ಪಕ ಸರ್ವೆ ಆಗಿದೆಯೇ?: ಸವಿತಾ ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ ಬಂದಿದೆ. ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಸರ್ವೇ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಸದಸ್ಯ ಕುಮಾರ್ ಮಾತನಾಡಿ, ಇತ್ತೀಚೆಗೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತರೀಕೆರೆ ತಾಲೂಕಿನ ಕೆಲವು ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಹಾನಿಯ ಬಗ್ಗೆ ಪರಿಶೀಲಿಸಿದರು.
ಆದರೆ ಈ ಕೆಲಸ ಸಮರ್ಪಕವಾಗಿ ಆಗಿಲ್ಲ ಎಂದು ಹೇಳಿದಾಗ ಇದಕ್ಕೆ ಹೇಮಾವತಿ ದೇವೇಗೌಡ ಧ್ವನಿ ಗೂಡಿಸಿ, ಅಧಿಕಾರಿಗಳು ಕೆಲವು ಕಡೆಗಳಿಗೆ ಭೇಟಿಯೇ ನೀಡಿಲ್ಲ ಎಂದು ಹೇಳುತ್ತಿದ್ದಂತೆ, ಬೆಳೆ ಹಾನಿಯಾಗಿರುವ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡದೆ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸರ್ಕಾರಕ್ಕೆ ವರದಿ ನೀಡುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿತ್ತು ಎಂದು ಜೆ.ಡಿ. ಲೋಕೇಶ್ ಹೇಳಿದರು.
ಅಲ್ಪ ಹಣ: ಸರ್ಕಾರ ಬೆಳೆ ಹಾನಿಗೆ ಈಗ ನಿಗದಿಪಡಿಸಿರುವ ಹಣ ಅತ್ಯಲ್ಪ. ಈ ಪರಿಹಾರಧನ ಹೆಚ್ಚಳ ಮಾಡಬೇಕು ಎಂದು ರಂಗನಾಥ್ ಆಗ್ರಹಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಒಂದೇ ದಿನದಲ್ಲಿ ಜಿಲ್ಲೆಯ ಏಳೂ ತಾಲೂಕುಗಳಿಗೆ ಭೇಟಿ ನೀಡಿದ್ದಾರೆ. ಅದುದರಿಂದ ಅವರಿಂದ ಸಮರ್ಪಕ ಮಾಹಿತಿ ಸರ್ಕಾರಕ್ಕೆ ನೀಡಲು ಹೇಗೆ ಸಾಧ್ಯ ಎಂದು ಸವಿತಾ ರಮೇಶ್ ಪ್ರಶ್ನಿಸಿದರು.
ಒಂದೇ ದಿನದಲ್ಲಿ ಏಳು ತಾಲೂಕುಗಳಲ್ಲಿ ಸಂಚರಿಸಿ ವರದಿ ನೀಡುವಂತೆ ಹೇಳಿರುವ ಸರ್ಕಾರಕ್ಕೆ, ಹಾಗೂ ಸಮೀಕ್ಷೆ ನಡೆಸಿ ವರದಿ ನೀಡಲು ಜಿಲ್ಲೆಗೆ ಬಂದಿರುವ ಅಧಿಕಾರಿಗಳಿಗೆ ತಲೆ ಇಲ್ವಾ ಎಂದು ಶೃಂಗೇರಿ ಶಿವಣ್ಣ  ಹೇಳುತ್ತಿದ್ದಾಗ, ಕಳೆದ ವರ್ಷದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿತ್ತು. ಆಗ ಯಾವ ಅಧಿಕಾರಿಗಳು ಜಿಲ್ಲೆಗೆ ಬಂದಿದ್ದರು ಎಂದು ಸವಿತಾ ರಮೇಶ್ ಪ್ರಶ್ನಿಸಿದರು.
ತಾಲೂಕುವಾರು ಮಾಹಿತಿ ನೀಡಿ: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಹಾನಿ ಬಗ್ಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡುತ್ತಿದ್ದಂತೆ, ತಾಲೂಕುವಾರು ಮಾಹಿತಿ ನೀಡಿ ಎಂದು ಸದಸ್ಯರು ಹೇಳಿದರು. ಎಂಎಲ್ಎ ಮತ್ತು ಎಂಎಲ್ಸಿ ಹೇಳಿದರೆ ಮಾತ್ರ ಕೇಳಬೇಕೆನ್ನುವ ಮನಸ್ಥಿತಿಯಲ್ಲಿ ಅಧಿಕಾರಿಗಳು ಇದ್ದಾರೆ ಎಂದು ರೇಖಾ ಹುಲಿಯಪ್ಪಗೌಡ ಹೇಳುತ್ತಿದ್ದಂತೆ ಅಂತಹ ಅಧಿಕಾರಿಗಳನ್ನು ಬೇರೆಡೆಗೆ ಕಳುಹಿಸಿ ಎಂದು ಸವಿತಾ ರಮೇಶ್ ಹೇಳಿದರು. ಅದಕ್ಕೆ ನೀವು (ಸರ್ಕಾರ) ಬಿಡಬೇಕಲ್ಲಾ ಎಂದು ತಿರುಗೇಟು ನೀಡಿದರು.
ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ನೀವು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಫಲರಾಗಿದ್ದೀರಾ ಎಂದು ಹೇಳಿದ ಸವಿತಾ ರಮೇಶ್, ಮಾಹಿತಿ ಇಲ್ಲದೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ಅದುದರಿಂದ ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿದರು.
ತುರ್ತು ವರದಿ: ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆಯ ನಂತರ ಉತ್ತರಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಮಳೆಯಿಂದ ಏನಾಗಿದೆ ಎಂಬುದರ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದ್ದರಿಂದ ಕಡಮೆ ಅವಧಿಯಲ್ಲಿ ಸರ್ಕಾರಕ್ಕೆ ತುರ್ತಾಗಿ ವರದಿ ನೀಡಲಾಗಿದೆ.
ಸಭೆಯಲ್ಲಿ ಮಾಹಿತಿಯ ಮೇಲೆ ಚರ್ಚೆ ನಡೆಸಬೇಕು ಎಂದು ಹೇಳುತ್ತಿದ್ದಂತೆ, ಅಧಿಕಾರಿಗಳು, ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಮಾಹಿತಿ ನೀಡಿಲ್ಲ ಎಂದು ಕಲ್ಮರಡಪ್ಪ ಹೇಳಿದರು.
ಮಾಹಿತಿ ನೀಡದಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಿ, ಸರ್ಕಾರಿ ಕಾರ್ಯಕ್ರಮ ಅನುಷ್ಟಾನ ಮಾಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಜಿಲ್ಲೆಯಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಸವಿತಾ ರಮೇಶ್ ಪ್ರಶ್ನಿಸಿದಾಗ, ಅಧ್ಯಕ್ಷರು ಗೊತ್ತಿಲ್ಲ ಎನ್ನುತ್ತಿದ್ದಂತೆ, ಸರ್ಕಾರ ಮೂರುವರೆ ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಇದು ತಿಳಿದಿಲ್ಲವೆಂದರೆ ಜಿಲ್ಲಾಡಳಿತ, ಜಿಪಂ ನಡುವೆ ಹೊಂದಾಣಿಕೆ ಇಲ್ಲ ಎಂಬುದು ತಿಳಿಯುತ್ತದೆ ಎಂದರು.
ಸರ್ಕಾರ ಬಿಡುಗಡೆ ಮಾಡಿರುವ ಹಣದ ಬಗ್ಗೆ ಜಿಪಂಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆಯಾಗುತ್ತದೆ. ಆ ಹಣ ತಾಲೂಕು ಟಾಸ್ಕ್ಪೋರ್ಸ್ಗೆ  ಹೋಗಿ, ಅಲ್ಲಿಂದ ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.
ಗಾಯದ ಮೇಲೆ ಬರೆ: ಹಳದಿ ಎಲೆ ರೋಗದಿಂದ ಅಡಕೆ ತೋಟಗಳಿಗೆ ಹಾನಿಯಾಗಿದೆ. ಕೊಳೆ ರೋಗ ಬಂದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಸರ್ಕಾರ ಗೋರಕ್ ಸಿಂಗ್ ವರದಿ ಅನುಷ್ಟಾನಕ್ಕೆ ತರಬೇಕು. ಮಳೆಯಿಂದ ಹಾನಿಯಾದ ತೋಟಗಳಿಗೆ ಎಕರೆವಾರು ಪರಿಹಾರ ನೀಡಬೇಕು. ಈ ಸಂಬಂಧ ಸರ್ಕಾರದ ಬಳಿ ನಿಯೋಗ ತೆರಳಬೇಕು. ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಜಿಪಂನ ಕೆಲವು ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.