ವಹಿವಾಟು ಸಮಯ ನಿಗದಿ
ಚಿಕ್ಕಮಗಳೂರು: ರೈತರು ಮತ್ತು ವರ್ತಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬರುವ ಜನವರಿಯಿಂದ ಚಿಕ್ಕಮಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟಿಗೆ ಸಮಯ ನಿಗದಿಪಡಿಸಲು ಸದ್ಯದಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕೆ. ನಿಂಗೇಗೌಡ ಹೇಳಿದ್ದಾರೆ.
ನಗರದ ಎಪಿಎಂಸಿಯಲ್ಲಿ ಸೋಮವಾರ ನಡೆದ ಮಾರುಕಟ್ಟೆ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಎಪಿಎಂಸಿಯಲ್ಲಿ ವಹಿವಾಟು ನಡೆಸಲು ಸಮಯ ನಿಗದಿಪಡಿಸಲಾಗುವುದು. ಪ್ರತಿ ಸೋಮವಾರದಂದು ಮಾರುಕಟ್ಟೆಗೆ ರಜೆ ನೀಡಿ ಅಂದು ಆವರಣವನ್ನು ಸ್ವಚ್ಛತೆಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.
ಸಂಸ್ಥೆ ಏಳಿಗೆಗೆ ಸಹಕಾರಿ: ನಿತ್ಯ 12 ಗಂಟೆಯ ನಂತರ ರೈತರ ಹೊಲಗಳಲ್ಲಿ ವರ್ತಕರು ತರಕಾರಿಗಳನ್ನು ತುಂಬಲು ಅವಕಾಶವಿದ್ದು, ತಾಲೂಕಿನಲ್ಲಿ ಯಾವುದೇ ವರ್ತಕರು ನೇರವಾಗಿ ಗದ್ದೆಗಳಿಗೆ ತೆರಳಿ ವಾಹನಗಳಿಗೆ ತರಕಾರಿಗಳನ್ನು ತುಂಬಿ ಸಾಗಿಸುವಾಗ ಆರ್ಎಂಸಿಗೆ ಶುಲ್ಕ ಕಟ್ಟಿರಬೇಕು.
ಕಾನೂನು ಉಲ್ಲಂಘಿಸಿದ ವಾಹನಗಳನ್ನು ಯಾರ ಒತ್ತಡಕ್ಕೂ ಮಣಿಯದೆ ಎಪಿಎಂಸಿಗೆ ತರಲಾಗುವುದು, ರೈತರಿಂದ ವರ್ತಕರು ತರಕಾರಿಗಳನ್ನು ಖರೀದಿಸುವಾಗ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ರೈತರು ಮತ್ತು ವರ್ತಕರಿಗೆ ಯಾವುದೇ ರೀತಿ ಅನ್ಯಾಯವಾಗದೆ ಸಂಸ್ಥೆಯ ಏಳಿಗೆಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ರೈತರು ಮತ್ತು ವರ್ತಕರಿಗೆ ಅನುಕೂಲವಾಗುವ ಉದ್ದೇಶ ಹೊಂದಿ ಈ ಪ್ರಾಂಗಣ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಮಾರುಕಟ್ಟೆಗೆ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಳೆದ ವರ್ಷದಲ್ಲಿ ತಾಲೂಕಿನಲ್ಲಿ 100ರಿಂದ 500 ಲೋಡ್ಗಳಷ್ಟು ಶುಂಠಿ ಮತ್ತು 10ರಿಂದ 15 ಕ್ವಿಂಟಲ್ಗಳಷ್ಟು ಜೋಳ ಬೆಳೆದಿರುವುದಾಗಿ ಅಧಿಕೃತ ಮಾಹಿತಿ ಇದೆ. ಆದರೆ, ಶೇ.10ರಷ್ಟು ಭಾಗವು ಎಪಿಎಂಸಿಗೆ ಶುಲ್ಕ ಬಾರದಿರುವುದು ಅಸಮಾದಾನ ತಂದಿದೆ ಎಂದರು.
ಎಪಿಎಂಸಿ ಸುಧಾರಣೆ ನೀತಿ?: ಉಪ ಪ್ರಧಾನ ವ್ಯವಸ್ಥಾಪಕ ದೀನ್ ದಯಾಳ್ ಮಾತನಾಡಿ, ರೈತರು ಬೆಳೆದ ಬೆಳೆಗೆ ಉತ್ತಮ ಧಾರಣೆ ದೊರಕಬೇಕೆಂಬ ಉದ್ದೇಶ ಹೊಂದಿ ಬೆಳಗಾವಿ ಅದಿವೇಶನದಲ್ಲಿ ಒಪ್ಪಿಗೆಯಾದರೆ ಈ ವರ್ಷ ಎಪಿಎಂಸಿ ಸುಧಾರಣೆ ನೀತಿ ಜಾರಿಗೆ ಬರಲಿದೆ. ಆಗ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿ ಮಾರುಕಟ್ಟೆಗೂ ವೇರ್ ಹೌಸ್ ಅಗತ್ಯವಿದ್ದು, ರಾಜ್ಯ ಮತ್ತು ಕೇಂದ್ರದ ಉಗ್ರಾಣ ನಿಗಮಗಳಿಗೆ ಪ್ರತ್ಯೇಕ ಇಲಾಖೆಗಳಿವೆ. ಅವುಗಳಿಗೂ ಎಪಿಎಂಸಿಗೂ ಯಾವುದೇ ಸಂಬಂಧವಿಲ್ಲ. ವೇರ್ ಹೌಸ್ ನಿರ್ಮಿಸಲು ಅದರದೇ ಆದ ತಂತ್ರಜ್ಞಾನ ಅಳವಡಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ವೀರಪ್ಪಗೌಡ, ಸದಸ್ಯರಾದ ಬೆಳವಾಡಿ ರವೀಂದ್ರ, ಕೆ.ಪಿ. ವೆಂಕಟೇಶ್, ಭದ್ರೀನಾಥ್, ರಾಜೇಂದ್ರ, ಯೋಗಾನಂದ್, ಶಾಂತಕುಮಾರ್, ಶಂಕರೇಗೌಡ, ಪಾರ್ವತಮ್ಮ, ಸಹಾಯಕ ನಿರ್ದೇಶಕಿ ಶೈಲಜಾ, ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

