ಚಿಕ್ಕಮಗಳೂರು

ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲ

Published On :

ಕಡೂರು: ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಣ್ಣ ಪುಟ್ಟ ತಪ್ಪುಗಳು ಇದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಸರ್ಕಾರದಿಂದ ಬರಗಾಲ ಪೀಡಿತ ಕಡೂರು ತಾಲೂಕು ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದರು.
ಕಡೂರು ಪಟ್ಟಣಕ್ಕೆ ಆಗಮಿಸಿದ್ದ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡ ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳು ಇದ್ದು ಅವುಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ಮುಖಂಡರ ಸಹಕಾರದಿಂದ ಮುಖ್ಯಮಂತ್ರಿಗೆ ಮನವರಿಕೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಬಿ. ಮಲಿಕಾರ್ಜುನ್ ಗೈರು ಹಾಜರಾಗಿರುವ ಬಗ್ಗೆ ಉತ್ತರಿಸಿದ ವಿಜಯಕುಮಾರ್, ಕೆಬಿಎಂ ಅವರು ತಮ್ಮ ಜೊತೆಯಲ್ಲೇ ಇದ್ದು ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರಿಂದ ಜೊತೆಯಲ್ಲಿ ಬರಲಿಲ್ಲ. ನನ್ನ ಮತ್ತು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಾಗ, ತಮ್ಮನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಬಿಎಂ ಸೌಜನ್ಯಕ್ಕಾದರೂ ತಮಗೆ ತಿಳಿಸಲಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ನಾನೂ ಸೇರಿದಂತೆ ಮೂವರು ಅಧ್ಯಕ್ಷ ಗಾದಿ ಪಟ್ಟಿಯಲ್ಲಿ ಇದ್ದೆವು. ಹೈಕಮಾಂಡ್ ನನ್ನನ್ನು ಆಯ್ಕೆ ಮಾಡಿದ್ದರಿಂದ ತಾವು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಹೊರತು ಮಾಜಿ ಶಾಸಕ ಮಲ್ಲಿಕಾರ್ಜುನ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟು ಹೋಗಿರುವ ಕಡೂರು ತಾಲೂಕನ್ನು ಸೇರ್ಪಡೆಗೊಳಿಸಲು ಕ್ಷೇತ್ರದ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ತಾವು ಕೂಡ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.
ಹೆಬ್ಬೆ ಯೋಜನೆ ಕುರಿತು ಕಾಂಗ್ರೆಸ್ ಎ.ಎನ್. ಮಹೇಶ್ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮಾತನಾಡಿದ ವಿಜಯಕುಮಾರ್, ಮುಂದೆ ತಾವು ಅಧಿಕೃತ ದಾಖಲೆಗಳೊಂದಿಗೆ ಮಾಧ್ಯಮಗಳಿಗೆ ಉತ್ತರಿಸುತ್ತೇನೆ. ಜಿಲ್ಲಾ ಸಚಿವರ ಕಾರ್ಯವ್ಯಾಪ್ತಿ ದೊಡ್ಡದು. ನಾವು ಸಮಸ್ಯೆಗಳನ್ನು ತೆಗೆದುಕೊಂಡು ಹೋದರೆ ಪರಿಹಾರಕ್ಕೆ ಸಚಿವ ಅಭಯಚಂದ್ರ ಜೈನ್ ಶ್ರಮಿಸುತ್ತಾರೆ. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಂದುಳಿದಿದೆ ಎಂಬ ಆರೋಪ ತಪ್ಪು, ನಾನು ಅಧ್ಯಕ್ಷನಾದ ನಂತರ ಜಿಲ್ಲಾ ಪ್ರವಾಸ ಆರಂಭಿಸಿದ್ದು, ಎಲ್ಲೆಲ್ಲಿ ಪಕ್ಷವು ಸಂಘಟನೆ ಹಿಂದುಳಿದಿದೆಯೋ ಅಲ್ಲಿಗೆ ಒತ್ತು ಕೊಟ್ಟು ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಕಾಂಗ್ರೆಸ್ ಜಯಭೇರಿಗೆ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಯುವ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್, ಮುಖಂಡರಾದ ಎಚ್.ಎಂ.ಲೋಕೇಶ್, ಕೆ.ಜಿ. ಶ್ರೀನಿವಾಸಮೂರ್ತಿ,ಚಂದ್ರಪ್ಪ, ವಿನಾಯಕ್, ಸಾವಿತ್ರಿ ಗಂಗಪ್ಪ, ಜಯಣ್ಣ, ಓಂಕಾರೇಗೌಡ, ಷಣ್ಮುಖ ಭೋವಿ, ಬಾಸೂರು ಚಂದ್ರಮೌಳಿ, ಎನ್. ಬಶೀರ್ ಸಾಬ್, ಕೆ.ಜಿ. ಲೋಕೇಶ್, ಮಿಂಚು, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.