'ಹೆಬ್ಬೆ: ಕಾಂಗ್ರೆಸ್ನಿಂದ ತಪ್ಪು ಮಾಹಿತಿ'
ಕಡೂರು: ದಾಖಲೆಯಿಲ್ಲದೆ ಮಾತನಾಡುವ ಜಾಯಮಾನ ದತ್ತನದ್ದಲ್ಲ. ಹೆಬ್ಬೆ ತಿರುವು ಯೋಜನೆಗೆ ಯಾವುದೇ ಅನುದಾನ ಬಿಡುಗಡೆಯಾಗದಿದ್ದರೂ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಕೇಂದ್ರ ಸರ್ಕಾರದಿಂದ ರು. 48 ಕೋಟಿ ಬಿಡುಗಡೆಯಾಗಿದೆ ಎಂಬ ತಪ್ಪು ಮಾಹಿತಿ ನೀಡಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ವಿಷಾದಕರ ಎಂದು ದತ್ತ ವ್ಯಂಗ್ಯವಾಡಿದರು.
ಕಡೂರು ಕ್ಷೇತ್ರದ ಬಿಸಲೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1998 ರಲ್ಲಿ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿ ಪ್ರಯತ್ನಿಸಿದ ಈ ಹೆಬ್ಬೆ ಯೋಜನೆಗೆ ನಂತರದ ಶಾಸಕರೂ ಕೂಡ ಪ್ರಯತ್ನಿಸಿದ್ದು, ರು. 86 ಕೋಟಿ ಇದ್ದ ಈ ಯೋಜನೆ ಅಂದಾಜು ವೆಚ್ಚ ಇಂದು ರು. 140 ಕೋಟಿ ತಲುಪಿದೆ ಎಂದರು.
ಆಡಳಿತಾತ್ಮಕ ಯೋಜನೆ: ನಾನು ವಿಪ ಸದಸ್ಯನಾದ ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರ ಮೇಲೆ ಒತ್ತಡ ತಂದ ಪರಿಣಾಮ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಆದರೆ ಕಾಂಗ್ರೆಸ್ನ ಅನುಭವಿ ಮುಖಂಡ ಮಹೇಶ್ ಯೋಜನೆ ರಾಜ್ಯ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳಿ ಯಾವುದೇ ದಾಖಲೆ ಇಲ್ಲದೆ ರು. 48 ಕೋಟಿ ಬಿಡುಗಡೆಯಾಗಿದೆ ಎಂಬ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು. ವಾಸ್ತವವಾಗಿ ಯೋಜನೆಯ ಸರ್ವೆ ಕಾರ್ಯಕ್ಕೆ ಮೆ ಇನ್ಫಿಕಾನ್ ಪ್ರೈವೇಟ್ ಕಂಪನಿಗೆ ರು. 15 ಲಕ್ಷ ಬಿಡುಗೆಯಾಗಿದ್ದು, ಬಿಟ್ಟರೆ ಸರ್ವೆ ವರದಿ ಕೂಡ ಸರ್ಕಾರಕ್ಕೆ ಇನ್ನೂ ನೀಡದೇ ಇರುವಾಗ ಮಹೇಶ್ ಇದನ್ನು ತಿಳಿಯದೇ ಏಕಾಏಕಿ ರು. 48 ಕೋಟಿ ಬಿಡುಗಡೆಯಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಪಕ್ಷಾತೀತ ಹೋರಾಟ: ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ನೀರಾವರಿಗೆ ಆದ್ಯತೆ ನೀಡಲು ಪಕ್ಷಾತೀತವಾಗಿ ಹೋರಾಡುತ್ತೇನೆ. 30 ವರ್ಷದ ನಂತರ ಕ್ಷೇತ್ರದ ಬೀರೂರಿನಿಂದ ಶಾಣೆಗೆರೆವರೆಗೆ ಡಾಂಬರೀಕರಣ ಕೈಗೊಳ್ಳಲು ಬಿವೈಎಸ್ಎಸ್ ರಸ್ತೆ ರು. 3 ಕೋಟಿ ಮಂಜೂರಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಮುಖಂಡರಾದ ಸೀಗೇಹಡ್ಲು ಹರೀಶ್, ಸಂಕ್ಲಾಪುರ ಕುಮಾರ್, ಬಿಸಲೆರೆ ಕೆಂಪರಾಜು, ಪಿ.ಎಂ. ಬಾಬಣ್ಣ, ಎನ್. ಇಮಾಮ್, ಡಿ. ಪ್ರಶಾಂತ್,ಬಿ.ಟಿ. ಗಂಗಾಧರನಾಯ್ಕ, ಟಿ.ಆರ್. ಲಕ್ಕಪ್ಪ, ದೇವರಾಜ್, ಶಿವರುದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

