ಎನ್ಆರ್ಪುರ ರೈತರ ಕೈ ಹಿಡಿದ ನೇಂದ್ರ ಬಾಳೆ
ಕ.ಪ್ರ.ವಾರ್ತೆ ನರಸಿಂಹರಾಜಪುರ ಡಿ.10
ಈ ವರ್ಷ ನೇಂದ್ರ ಬಾಳೆಗೆ ಉತ್ತಮ ಧಾರಣೆ ಬಂದಿದ್ದು ಬಾಳೆ ಬೆಳೆದ ರೈತರ ಮೊಗದಲ್ಲಿ ಹರ್ಷ ವ್ಯಕ್ತವಾಗಿದೆ.
ಕಳೆದ ವಾರದಲ್ಲಿ ನೇಂದ್ರ ಬಾಳೆ ಕೆ.ಜಿ.ಗೆ 36 ಏರಿಕೆ ಆಗಿ ಸಾರ್ವಕಾಲಿಕ ದಾಖಲೆ ಬೆಲೆ ಕಂಡಿತು. 2 ವರ್ಷಗಳ ಹಿಂದೆ ಮೇ ತಿಂಗಳಲ್ಲಿ 30 ಏರಿಕೆಯಾಗಿ ದಾಖಲೆ ನಿರ್ಮಿಸಿ ನಂತರ ಕುಸಿತ ಕಂಡಿತ್ತು. ಪ್ರತಿ 3 ವರ್ಷಕ್ಕೊಮ್ಮೆ ನೇಂದ್ರ ಬಾಳೆಯ ಬೆಲೆ ಏರಿಕೆ ಆಗಿ ಮತ್ತೆ ಕುಸಿಯುವ ಪದ್ಧತಿ ಹಿಂದಿನಿಂದಲೂ ನಡೆದಿದೆ.
ನರಸಿಂಹರಾಜಪುರದಲ್ಲಿ 25 ವರ್ಷಗಳ ಹಿಂದಿನಿಂದಲೂ ನೇಂದ್ರ ಬಾಳೆ ಬೆಳೆಯಲಾಗುತ್ತಿದೆ. ಕೇರಳದಿಂದ ವಲಸೆ ಬಂದ ಕೇರಳಿಗರು ರಬ್ಬರ್, ನೇಂದ್ರ ಬಾಳೆ, ಎಣ್ಣೆ ಹುಲ್ಲು ಮುಂತಾದ ಬೆಳೆಗಳನ್ನು ಸಹ ಇಲ್ಲಿಗೆ ತಂದು ಪರಿಚಯಿಸಿದ್ದಾರೆ. 25 ವರ್ಷಗಳ ಹಿಂದೆ ನೇಂದ್ರ ಬಾಳೆ ಕೆ.ಜಿ.ಗೆ ಕೇವಲ 3 ಇತ್ತು. ನಂತರದ ದಿನಗಳಲ್ಲಿ 8 ರಿಂದ 10 ರುಪಾಯಿಗೆ ಏರಿತ್ತು. ರೈತರು ಆಸಕ್ತಿಯಿಂದ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬಾಳೆ ಬೆಳೆದು ಮಾರುಕಟ್ಟೆಗೆ ತರುವಾಗ ಕೆಜಿಗೆ 3 ರಿಂದ 5 ರುಪಾಯಿಗೆ ಕುಸಿದು ರೈತರು ನಷ್ಚ ಅನುಭವಿಸಿದ್ದು ಈಗ ಇತಿಹಾಸ.
ಸೀಜನ್ ಆರಂಭ: ತಾಲೂಕಿನಲ್ಲಿ ಅಂದಾಜು 1500 ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ ಬೆಳೆಯಲಾಗುತ್ತಿದೆ. 1 ಎಕರೆಯಲ್ಲಿ 800 ನೇಂದ್ರ ಬಾಳೆ ನೆಡಬಹುದು. 11 ರಿಂದ 12 ತಿಂಗಳಲ್ಲಿ ನೇಂದ್ರ ಬಾಳೆ ಕೊನೆ ಬೆಳೆಯಲಿದೆ. 1 ಕೊನೆಯು 8 ರಿಂದ 20 ಕೆ.ಜಿ.ವರೆಗೂ ತೂಗಬಲ್ಲದು. ಸಾಮಾನ್ಯವಾಗಿ ಡಿಸೆಂಬರ್, ಜನವರಿ,ಫೆಬ್ರವರಿ, ಮಾರ್ಚ್ನಲ್ಲಿ ಕೊನೆ ಬೆಳೆಯುತ್ತದೆ. ಆ ತಿಂಗಳಲ್ಲಿ ಬಾಳೆಕಾಯಿ ಧಾರಣೆ ಏರಿದರೆ ಮಾತ್ರ ರೈತರಿಗೆ ಲಾಭವಾಗಲಿದೆ. ಈ ವರ್ಷ ವಿಶೇಷವಾಗಿ ಡಿಸೆಂಬರ್ ಮೊದಲ ವಾರದಲ್ಲೇ 36 ಏರಿಕೆ ಉಂಟಾಗಿ ರೈತರಿಗೆ ಹರ್ಷ ತಂದಿದೆ. ಆದರೆ, ಒಂದೇ ವಾರದಲ್ಲಿ 6 ಇಳಿಕೆ ಕಂಡಿದೆ. ಮುಂದಿನ ಜನವರಿ, ಫೆಬ್ರವರಿ ತಿಂಗಳಲ್ಲಿ ಕೆ.ಜಿ.ಗೆ 30 ಸಿಕ್ಕಿದರೆ ಬಾಳೆ ಬೆಳೆದ ರೈತರಿಗೆ ಬಂಪರ್ ಬೆಲೆ ಸಿಕ್ಕಿದಂತೆ ಆಗಲಿದೆ. ಮಾರುಕಟ್ಟೆಗೆ ಜಾಸ್ತಿ ಪ್ರಮಾಣದಲ್ಲಿ ಬಾಳೆ ಬಂದಾಗಲೆಲ್ಲಾ ಧಾರಣೆ ಕುಸಿಯುವುದು ವಾಡಿಕೆ. ಸಾಮಾನ್ಯವಾಗಿ ಜನವರಿಯಲ್ಲಿ 25ಕ್ಕೆ ಕುಸಿಯಬಹುದು ಎನ್ನುತ್ತಾರೆ ನೇಂದ್ರ ಬಾಳೆ ಬೆಳೆ ರೈತ ಪೌಳಿ.
ತಮಿಳುನಾಡಿನಲ್ಲಿ ಇಲ್ಲ: ಈ ವರ್ಷ ನೇಂದ್ರ ಬಾಳೆ ಮಾರುಕಟ್ಟೆಗೆ ಬರುವ ಸೀಜನ್ ತಿಂಗಳಾದ ಡಿಸೆಂಬರ್ನಲ್ಲಿ ದಾಖಲೆ ಬೆಲೆ ಏರಿಕೆ ಉಂಟಾಗಲು ತಮಿಳುನಾಡಿನಲ್ಲಿ ನೇಂದ್ರ ಬಾಳೆ ಇಳುವರಿ ಕುಸಿತ ಕಾರಣ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ತಮಿಳುನಾಡಿನಲ್ಲಿ ಅತಿ ಹೆಚ್ಚು ನೇಂದ್ರ ಬಾಳೆ ಬೆಳೆಯುತ್ತಿದ್ದು, ಅಲ್ಲಿನ ಬಾಳೆಕಾಯಿಯಿಂದಲೇ ಬಹುತೇಕ ಚಿಪ್ಸ್ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಅತಿ ಮಳೆಯಿಂದಾಗಿ ನೇಂದ್ರ ಬಾಳೆಗೆ ರೋಗ ತಗುಲಿ ನೇಂದ್ರ ಬಾಳೆ ಬಹುತೇಕ ನಾಶವಾಗಿದೆ. ಮಿತಿ ಮೀರಿದ ಮಂಗಗಳ ಹಾವಳಿಯಿಂದಲೂ ನೇಂದ್ರ ಬಾಳೆ ಇಳುವರಿ ಕಡಿಮೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಪರಿಣಾಮವಾಗಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಬಾರದೆ ಡಿಸೆಂಬರ್ನಲ್ಲಿ ನೇಂದ್ರ ಬಾಳೆ ಬೆಲೆ ಏರಿಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೈಮರದ ಮಾರುಕಟ್ಟೆ: ನರಸಿಂಹರಾಜಪುರದಿಂದ 3 ಕಿ.ಮೀ. ದೂರದ ಬಿ.ಎಚ್. ಕೈಮರದಲ್ಲಿ ನೇಂದ್ರ ಬಾಳೆಕಾಯಿಗಳ ಅತಿ ದೊಡ್ಡ ಮಾರುಕಟ್ಟೆ ಇದೆ. ಸುತ್ತಮುತ್ತಲಿನ ಎಲ್ಲಾ ರೈತರು ಬಾಳೆಕಾಯಿಗಳನ್ನು ಇಲ್ಲಿಗೆ ತಂದು ಮಾರುತ್ತಾರೆ. ಇಲ್ಲಿ 7 ಅಂಗಡಿಗಳಲ್ಲಿ ನೇಂದ್ರ ಬಾಳೆಕಾಯಿಗಳನ್ನು ಕೊಳ್ಳುತ್ತಿದ್ದು, ಇಲ್ಲಿಂದ ಪ್ರತಿದಿನ 20 ರಿಂದ 40 ಟನ್ ನೇಂದ್ರ ಬಾಳೆಕಾಯಿ ನಾಗಪುರ, ಕೇರಳ, ಮಂಗಳೂರಿಗೆ ರವಾನಿಸಲಾಗುತ್ತದೆ. ನಾಗಪುರದಿಂದ ನೇಂದ್ರ ಬಾಳೆಕಾಯಿ ಚಿಪ್ಸ್ ತಯಾರಿಕೆ ಕಾರ್ಖಾನೆಗಳಿಗೆ ಕಳಿಸಲಾಗುತ್ತದೆ. ಕೇರಳ, ಮಂಗಳೂರಿನಲ್ಲಿ ನೇಂದ್ರ ಬಾಳೆಕಾಯಿಯನ್ನು ಹಣ್ಣು ಮಾಡಿ ಮಾರಾಟ ಮಾಡಲಾಗುತ್ತದೆ.
ತಾಲೂಕಿನ ರೈತರು ಹೊಸದಾಗಿ ರಬ್ಬರ್ ತೋಟ ಮಾಡುವ 5 ವರ್ಷದವರೆಗೆ ಎಡೆ ಬೆಳೆಯಾಗಿ ನೇಂದ್ರ ಬಾಳೆ ಬೆಳೆಯುತ್ತಾರೆ. ಜೊತೆಗೆ ನೀರಿನ ಸೌಕರ್ಯ ಇರುವ ಖುಸ್ಕಿ ಭೂಮಿ, ಗದ್ದೆ ಹಾಗೂ ಹೊಸ ಅಡಿಕೆ ತೋಟಗಳಲ್ಲಿ ನೇಂದ್ರ ಬಾಳೆ ಬೆಳೆದಿದ್ದಾರೆ. 12 ತಿಂಗಳಲ್ಲೇ ಹಾಕಿದ ಹಣ ಲಾಭದಾಯಿಕವಾಗಿ ವಾಪಾಸು ಬರುವ ನೇಂದ್ರ ಬಾಳೆ ಬೆಳೆಯತ್ತ ರೈತರು ಗಮನಹರಿಸಿದ್ದಾರೆ. ಆದರೆ, ಮಾರುಕಟ್ಟೆಯ ಏಳುಬೀಳು, ಹವಮಾನ ವೈಪರೀತ್ಯದಿಂದ ಮಲೆನಾಡಿನ ಭಾಗದ ರೈತರಿಗೆ ಎಲ್ಲಾ ವರ್ಷದಲ್ಲಿ ನೇಂದ್ರ ಬಾಳೆ ಲಾಭ ಆಗುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

