ಚಿಕ್ಕಮಗಳೂರು

ಅಡಕೆ ನಿಷೇಧ ಯತ್ನಕ್ಕೆ ವಿರೋಧ

Published On :

ಕೊಪ್ಪ:  ಅಡಕೆ ಜೀವಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಡಕೆ ಬೆಳೆಗಾರರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿರುವುದು ಘೋರ ಅಪರಾಧ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಆರೋಪಿಸಿದರು.
ಕಳೆದ ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪಚುನಾವಣೆಯಲ್ಲಿ ಅಡಕೆ ಹಳದಿ ರೋಗ ಸಂತ್ರಸ್ತರಿಗೆ 1400 ಕೋಟಿ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ನ ಕೇಂದ್ರ ನಾಯಕರು ಭರವಸೆ ನೀಡಿ, ತಮ್ಮ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಿಕೊಂಡಿದ್ದರು. ಆದರೆ ಬೆಳೆಗಾರ ಸಾಲ ಮನ್ನಾ ಮಾಡುವ ಬದಲಾಗಿ ಕ್ಯಾನ್ಸರ್‌ಗೆ ಮಾರಕವಾದ ಸಿಗರೇಟ್, ಹೋಗೆ ಸೊಪ್ಪು ನಿಷೇಧಿಸದೇ ಅಡಕೆ ಬೆಳೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ರೈತರ ದೌರ್ಭಾಗವ್ಯವೇ ಸರಿ ಎಂದಿದ್ದಾರೆ.
ಐಟಿಸಿ ಲಾಬಿ:  ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಐಟಿಸಿ ಲಾಬಿಗೆ ಮಣಿದು ಅಡಕೆ ಸೇವನೆ ಜೀವಕ್ಕೆ ಹಾನಿಕರ. ಅದನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರಿಂದ ರೈತರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ ಅಡಿಕೆ ಮರಗಳಿಗೆ ಈಗ ತಮ್ಮ ಕೈಯ್ಯಾರೆ ಕೊಡಲಿ ಪೆಟ್ಟು ನೀಡಬೇಕಾದ ದುಸ್ಥಿತಿ ಎದುರಾಗಿದೆ. ಅಡಕೆ ಬೆಳೆ ನಂಬಿ ಜೀವನ ನಡೆಸುತ್ತಿದ್ದ ಬೆಳೆಗಾರು ಈಗ ಬೀದಿಪಾಲು ಆಗುವ ಭೀತಿ ಎದುರಿಸುತ್ತಿದ್ದಾರೆ ಎಂದರು.
ದೇಶದ 6 ರಾಜ್ಯಗಳು ಸೇರಿ ಪಶ್ಚಿಮಘಟ್ಟದ 1.63 ಲಕ್ಷ ಚ.ಕಿ.ಮೀ. ಅತಿ ಸೂಕ್ಷ್ಮ ಪ್ರದೇಶ ಎಂದು ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನಕ್ಕೆ ರಚನೆಯಾದ ಕಸ್ತೂರಿ ರಂಗನ್ ಕಾರ್ಯಪಡೆ 60 ಸಾವಿರ ಚ.ಕಿ. ಮೀ. ಅತೀ ಸೂಕ್ಷ್ಮ ಎಂದು ಶಿಫಾರ್ಸು ಮಾಡಿತ್ತು. ಇದನ್ನು ರಾಜ್ಯದಲ್ಲಿ ಬೋಪಯ್ಯ ಅವರು ಸಭಾಪತಿ ಆಗಿದ್ದಾಗ ವಿಧಾನಸಭೆಯಲ್ಲಿ ನಾವು ಪಕ್ಷಾತೀತವಾಗಿ ಸರ್ವಾನುಮತದಿಂದ ಕಸ್ತೂರಿ ರಂಗನ್ ಶಿಫಾರ್ಸು ವಿರೋಧಿಸಿ  ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕೇಂದ್ರ ಸರ್ಕಾರ 16.11.2013ರಲ್ಲಿ ತಾರ್ಕಿಕ ಒಪ್ಪಿಗೆ ನೀಡಿದೆ ಎಂದರು.
ಅಭಿವೃದ್ಧಿಗೆ ತಡೆ: ಶಿಫಾರ್ಸಿನ ಪ್ರಕಾರ ಕೊಪ್ಪ ತಾಲೂಕಿನಲ್ಲಿ 32 ಗ್ರಾಮ, ಎನ್.ಆರ್.ಪುರದಲ್ಲಿ 62 ಗ್ರಾಮ, ಶೃಂಗೇರಿ, ಮೂಡಿಗೆರೆ, ತರಿಕೇರೆ, ಚಿಕ್ಕಮಗಳೂರು ತಾಲೂಕಿನ ಬಹುಭಾಗ ಯೋಜನೆ ಈ ವ್ಯಾಪ್ತಿಗೆ ಒಳಪಡಲಿವೆ ಎಂದಿದೆ. ಇದರಿಂದ ಮರಳು, ಕಲ್ಲು, ಗಣಿಗಾರಿಕೆ, ಕಟ್ಟಡಗಳ ನಿರ್ಮಾಣ, ವಿದ್ಯುತ್ ಮಾರ್ಗಗಳ ರಚನೆಗಳಿಗೆ ಅಡ್ಡಿ ಆಗುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಪೂರ್ಣ ತಡೆ ಬೀಳಲಿದೆ. ಮಲೆನಾಡಿಗರ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಮಲೆನಾಡಿಗರ ಬದುಕು ಸಂಕಷ್ಟಕ್ಕೆ ಸಿಲುಕಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯಲಿದೆ ಎಂದು ತಿಳಿಸಿದರು.

'ನಿಷೇಧ ಕ್ರಮ ಸರಿಯಲ್ಲ'
ತರೀಕೆರೆ:  ಈಚಿನ ದಿನಗಳಲ್ಲಿ ಹಲವಾರು ಲಾಬಿಗಳಿಂದ ಅಡಕೆ ಬೆಳೆ ಮತ್ತು ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಈ ಮಧ್ಯೆ ಕೇಂದ್ರ ಅಡಕೆ ಬೆಳೆ ನಿಷೇಧಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ನಿರ್ದೇಶಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ದೇವಾನಂದ್ ತಿಳಿಸಿದ್ದಾರೆ.
ಆರೋಗ್ಯಕ್ಕೆ ಮಾರಕವಾಗಿರುವ ಬೀಡಿ ಸಿಗರೇಟು, ಚುಟ್ಟಾ, ತಂಬಾಕು ಮದ್ಯ ಇನ್ನೂ ಹಲವಾರು ಉತ್ಪನ್ನಗಳನ್ನು ನಿಷೇಧಿಸದ ಕೇಂದ್ರ ಸರ್ಕಾರ ಪ್ರಭಾವಕ್ಕೆ ಒಳಗಾದಂತಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.