ನಷ್ಟದ ಕೂಪದಲ್ಲಿ ಮೂಡಿಗೆರೆ ಸಾರಿಗೆ ಘಟಕ
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.16
ಅಧಿಕಾರಿಗಳ ದೌರ್ಜನ್ಯ ಮತ್ತು ಹಗರಣಗಳ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರದಿಂದ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕ ದಿನಕ್ಕೆ ಸುಮಾರು 2 ಲಕ್ಷ ನಷ್ಟ ತಂದುಕೊಡುತ್ತಿದೆ. ವರ್ಷಕ್ಕೆ 8 ಕೋಟಿ ನಷ್ಟಕ್ಕೆ ಕಾರಣವಾಗುತ್ತಿದೆ.
ಈ ನಷ್ಟದ ಹಿಂದೆ ಘಟಕದಲ್ಲಿ ಚಾಲಕ, ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳು ನೀಡುತ್ತಿರುವ ಮಾನಸಿಕ ಕಿರುಕುಳ, ಕರ್ತವ್ಯದಿಂದ ಹಿಂದೆ ಸರಿಸಲು ಅನುಸರಿಸುತ್ತಿರುವ ದೌರ್ಜನ್ಯ!
ಹೌದು. ಮೂಡಿಗೆರೆ ಕೆಎಸ್ಆರ್ಟಿಸಿ ಘಟಕ ಡಕೋಟ ಬಸ್ಸುಗಳಿಂದ ತುಂಬಿಹೋಗಿದೆ. ಬಹುತೇಕ ಬಸ್ಗಳು ಕೆಲವೆಡೆ ಕೆಟ್ಟು ನಿಲ್ಲುತ್ತಿರುವುದರಿಂದ ತಳ್ಳಿ, ನೂಕಿ ಅವನ್ನು ಮುಂದೆ ಸಾಗಹಾಕುವ ಸಾಹಸ ನಡೆಯುತ್ತಿದೆ. ಅದರಲ್ಲೂ ಗುಡ್ಡಗಾಡು ಪ್ರದೇಶವಾದ ಮೂಡಿಗೆರೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳ ಜನರು ಇಂಥ ಸಮಸ್ಯೆಗೆ ಪದೇ ಪದೇ ಸಿಲುಕುತ್ತಿರುವ ಆರೋಪಗಳು ಕೇಳಿಬಂದಿವೆ. ಗ್ರಾಮೀಣ ಪ್ರದೇಶಕ್ಕೆ ಸಂಚರಿಸಲು ಉತ್ತಮ ಬಸ್ಸುಗಳು ಬೇಕೆಂದರೆ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕು. ಇಲ್ಲವಾದರೆ ಡಕೋಟ ಬಸ್ಸುಗಳನ್ನೇ ಕೊಂಡೊಯ್ಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಚಾಲಕ ಮತ್ತು ನಿರ್ವಾಹಕರ ಆರೋಪ.
ಘಟಕದಲ್ಲಿ 101 ಬಸ್ಸುಗಳಿವೆ. ಅವುಗಳಲ್ಲಿ 90 ಮಾರ್ಗಸೂಚಿಗಳನ್ನು ಹೊಂದಿದ್ದು, ಅಧಿಕಾರಿಗಳ ದಬ್ಬಾಳಿಕೆಯಿಂದ ಬೇಸತ್ತ ಚಾಲಕ ನಿರ್ವಾಹಕರು ಘಟಕದಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದರೆ, ಕೆಲವೊಂದು ಮಾರ್ಗಕ್ಕೆ 100, 200 ನೀಡಿದಲ್ಲಿ ಮಾರ್ಗಸೂಚಿ ನೀಡುತ್ತಿದ್ದು, ಉಳಿದ ಚಾಲಕ-ನಿರ್ವಾಹಕರಿಗೆ ಸಮಯಕ್ಕೆ ಸರಿಯಾಗಿ ಬಸ್ಸನ್ನು ನೀಡದೇ ಇರುವುದರಿಂದ ಆ ಮಾರ್ಗಗಳ ಬಸ್ಗಳಿಂದ ಬರುವ ಆಧಾಯ ಕಡಿಮೆಯಾಗುತ್ತಿದೆ. ದಿನದಲ್ಲಿ 8 ರಿಂದ 10 ಮಾರ್ಗಗಳಲ್ಲಿ ಬಸ್ಗಳು ಸಂಚರಿಸುವುದೇ ಇಲ್ಲ. ಮರುದಿನ ಆ ಮಾರ್ಗದಲ್ಲಿ ವಾಹನ ಓಡಿಸದೆ ನಿರೀಕ್ಷಿತ ಆದಾಯ ಗಳಿಸಲು ಸಾಧ್ಯವಾಗಿಲ್ಲ ಎಂದು ಸುಳ್ಳು ದಾಖಲೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಆ ಮೂಲಕ ಸಂಸ್ಥೆಯನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದ್ದಾರೆ ಎಂಬುದು ಕೆಲ ಚಾಲಕ, ನಿರ್ವಾಹಕರ ಆರೋಪ.
ಕಿರುಕುಳ: ಇತ್ತೀಚೆಗೆ ಸಿಬ್ಬಂದಿ ಕೇಶವಮೂರ್ತಿ ಎಂಬವರಿಗೆ ಘಟಕದ ಸಂಚಾರ ನಿರೀಕ್ಷಕ ಬಿ.ಟಿ.ಕುಮಾರ್, ಸೀನಪ್ಪ ಮತ್ತು ನಟರಾಜು ಎಂಬವರು ಮಾನಸಿಕ ಕಿರುಕುಳ ನೀಡಿ, ಕೆಲಸ ಕೊಡುವುದಿಲ್ಲ. ಹೋಗಿ ರಾಜಿನಾಮೆ ನೀಡು ಎಂದು ನಿಂದಿಸಿದ್ದರು. ಘಟಕದ ಅಧಿಕಾರಿಗಳೇ ಲಂಚ ಕೊಡುವಂತೆ ಒತ್ತಾಯಿಸಿದ್ದರ ಕಾರಣ ಇವರ ವರ್ತನೆಯಿಂದ ಬೇಸತ್ತ ಕೇಶವಮೂರ್ತಿ ಡೆತ್ನೋಟ್ ಬರೆದು ಚಾಲನಾ ಸಮಯದಲ್ಲೇ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಚಾಲಕ, ನಿರ್ವಾಹಕರಿಗೆ ಮಾನಸಿಕ ಹಿಂಸೆ ನೀಡುವುದು ಮುಂದುವರಿದಿದೆ ಎಂದು ವರ್ಕರ್ಸ್ ಯೂನಿಯನ್ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಉತ್ತಮ ಆದಾಯಕ್ಕಾಗಿ ಪ್ರಶಸ್ತಿ ಪಡೆದ ರವಿಕುಮಾರ್ ಕೆ. ಎಂಬವರಿಗೆ ಕೆಲವು ಟ್ರಿಪ್ಗಳಲ್ಲಿ ಕಡಿಮೆ ಆದಾಯ ಎಂದು ಫಾರಂ ನಂ.4ರ ಉಲ್ಲಂಘನೆಯನ್ವಯ ಕೆಲಸದಿಂದ ವಜಾ ಮಾಡಿದ್ದು, ಉತ್ತಮ ಆದಾಯ ಪ್ರಶಸ್ತಿಗೆ ಬೆಲೆಯೇ ಇಲ್ಲದಂತಾಗಿದೆ.
ಘಟಕ ಸಂಚಾರಿ ನಿಯಂತ್ರಕ ಬಿ.ಟಿ.ಕುಮಾರ್ ಈ ಹಿಂದೆ ಬೇಲೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ 121 ವಿದ್ಯಾರ್ಥಿಗಳ ನಕಲು ಪಾಸುಗಳು ಬಿ.ಟಿ.ಕುಮಾರ್ ಸೇರಿದಂತೆ ಇಬ್ಬರು ಅಧಿಕಾರಿಗಳು ಸಂಸ್ಥೆಗೆ 26,90,510 ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪಾಸ್ಗಳ ವಿತರಣೆ ಮಾಡಿದ ಮೇಲೆ ಅವುಗಳಿಗೆ ಸಂಬಂಧಪಟ್ಟ ದಾಖಲೆ ವ್ಯವಸ್ಥಿತವಾಗಿ ನಿರ್ವಹಣೇ ಮಾಡದೇ ವಿಫಲರಾಗಿದ್ದಾರೆ. ಅವರ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಚಿಕ್ಕಮಗಳೂರು ವಿಭಾಗದ ವಿಭಾಗಿಯ ಭದ್ರತಾ ನಿರೀಕ್ಷಕ ಎಂ.ಎಲ್. ಶರತ್ ಮೇಲಧಿಕಾರಿಗಳಿಗೆ ದಾಖಲೆ ಸಲ್ಲಿಸಿದ್ದರು. ಅಧಿಕಾರಿಗಳು ಒಂದು ಇಂಕ್ರಿಮೆಂಟ್ ಕಟ್ ಮಾಡಿ ಮೂಡಿಗೆರೆ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ.
ಆದರೆ, ಸರ್ಕಾರಕ್ಕೆ ಮೋಸ ಮಾಡಿದ ಲಕ್ಷಾಂತರ ರು. ಗುಳುಂ ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡದೇ, ತುತ್ತು ಅನ್ನಕ್ಕೆ ದುಡಿಯುವ ಚಾಲಕ, ನಿರ್ವಾಹಕರಿಗೆ ಮಾನಸಿಕ ಹಿಂಸೆ ನೀಡಿ, ಕರ್ತವ್ಯದಿಂದ ದೂರ ಸರಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದು ವಿಷಾದನೀಯ. ಮೇಲಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಉತ್ತರ ಕಂಡುಹಿಡಿಯುವರೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

