ಚಿಕ್ಕಮಗಳೂರು

ಕೇರಳ ಮಾದರಿಯಲ್ಲಿ ರಾಜ್ಯ ರೈತರಿಗೆ ಪರಿಹಾರ ನೀಡಿ

Published On :

ಕ.ಪ್ರ.ವಾರ್ತೆ  ಕಡೂರು  ಡಿ.17
ತೆಂಗು ಮತ್ತು ಅಡಕೆ ಬೆಳೆ ಹಾಳಾಗಿರುವ ಕುರಿತು ಕೃಷಿ ಸಚಿವ ಶರದ್ ಪವಾರ್ ಅವರಿಗೆ ಪತ್ರ ಬರೆದು, ಕರ್ನಾಟಕದ ರೈತರ ಸ್ಥಿತಿಗತಿ  ವಿವರಿಸಿ, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಷ್ಟ ಹೊಂದಿದ ರೈತರ ತೆಂಗು ಮತ್ತು ಅಡಕೆ ಬೆಳೆಗೆ ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಅವರು ಕಡೂರು ವಿಧಾನಸಭಾ ಕ್ಷೇತ್ರದ ಕಲ್ಕೆರೆ ಗ್ರಾಪಂ ವ್ಯಾಪ್ತಿಯ ಎಚ್. ತಿಮ್ಮಾಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ದೇಶದ ಜನರು ಮತ್ತು ರೈತರ ಸಂಕಷ್ಟವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲೀ ಕೇಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಐಸಿಯುನಲ್ಲಿ ಮಸೂದೆ: ತಾವು ಪ್ರಧಾನಿಯಾದ್ದಾಗ ಲೋಕಪಾಲ್ ಮಸೂದೆಗೆ ಪ್ರಯತ್ನಿಸಿದ್ದು, ಇದೀಗ ಅಣ್ಣ ಹಜಾರೆ ಗುಂಪಿನಲ್ಲಿ ಒಡಕುಂಟಾಗಿ ಲೋಕಪಾಲ್ ಮಸೂದೆ ಐಸಿಯುನಲ್ಲಿದೆ. ಆದರೆ ಇದರ ಕ್ರೆಡಿಟ್ ಪಡೆಯಲು ಕಾಂಗ್ರೆಸ್, ಬಿಜೆಪಿ ಹಾತೊರೆಯುತ್ತದೆ ಎಂದು ಆರೋಪಿಸಿದರು.
ಮೊದಲ ಬಾರಿಗೆ ಲೋಕಾಯುಕ್ತ ಜಾರಿಗೆ ತಂದವರು ರಾಮಕೃಷ್ಣ ಹೆಗಡೆ ಎಂಬುದು ಇತಿಹಾಸ. ರಾಜ್ಯದ ರೈತರ ನೆರವಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದರೆ, ಸಿದ್ದರಾಮಯ್ಯ ಇನ್ನು ಮುಂದೆ ದೇವೇಗೌಡರ ಪತ್ರದಂತೆ ಆಡಳಿತ ನಡೆಸಬೇಕಾಗಿದೆ ಎಂದು ಲೇವಡಿಯ ಮಾತುಗಳಾಡಿದ್ದಾರೆ ಎಂದರು.
ರು. 3,000 ಕೋಟಿ: ಕಬ್ಬಿನ ಕಾರ್ಖಾನೆ ಮಾಲೀಕರಿಗೆ ಕೇಂದ್ರ ಸರ್ಕಾರ  ರು. 3,000 ಕೋಟಿ ನೀಡುತ್ತಿದೆ. ಕಬ್ಬು ಕಾರ್ಖಾನೆ ಮಾಲೀಕರ ಉಳಿವಿಗಾಗಿ ಕೇಂದ್ರ ಹಣ ನೀಡಿದರೆ ಅದರಿಂದ ನಮ್ಮ ರೈತರಿಗೆ ಆಗುವ ಉಪಯೋಗವಾದರೂ ಏನು? ಇದು ಕಾರ್ಖಾನೆ ಮಾಲೀಕರನ್ನು ಉಳಿಸುವ ತಂತ್ರ ಮಾತ್ರ ಎಂದು ಟೀಕಿಸಿದರು.
ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ರು. 450 ಕೋಟಿಯನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರಾತಿ ನೀಡಿದ್ದು ನನ್ನ ತಪ್ಪೇ? ಹಾಸನ ಲೋಕಸಭಾ ಸಂಸದನಾಗಿ ಆಯ್ಕೆಯಾದ 5 ವರ್ಷದಲ್ಲಿ ಕೋಟ್ಯಂತರ ರೂ. ಅನುದಾನ ನೀಡಿ, ಕಡೂರು ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಲೋಕಸಭಾ ಚುನಾವಣೆಗಳು ಅನಿವಾರ್ಯ. ನನ್ನ ಉಸಿರು ಇರುವವರೆಗೂ ಕೂಡ ರೈತರ ಪರವಾಗಿ ಹೋರಾಡುತ್ತಲೇ ಇರುತ್ತೇನೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ, ಶಾಸಕ ವೈ.ಎಸ್.ವಿ. ದತ್ತ ,ಜೆಡಿಎಸ್ ಮುಖಂಡ  ಬಿ. ಗುರುಸ್ವಾಮಿ, ಎಚ್. ಎಚ್. ದೇವರಾಜ್, ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಸೀಗೇಹಡ್ಲು ಹರೀಶ್, ಎನ್. ಇಮಾಮ್, ಬಿಸಲೆರೆ ಕೆಂಪರಾಜು, ಸಂಕ್ಲಾಪುರ ಕುಮಾರ್, ಮುಕ್ತಿಯಾರ್, ಹಾಲಸಿದ್ದಪ್ಪ,ಪದ್ಮಾ ತಿಮ್ಮೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.