ಅರಣ್ಯ ಒತ್ತುವರಿ ಪ್ರದೇಶ ಸರ್ವೆಗೆ ವಿರೋಧ
ಚಿಕ್ಕಮಗಳೂರು: ಅರಣ್ಯ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಲೆನಾಡು ಭಾಗದಲ್ಲಿ ಆರಂಭಿಸಿರುವ ಜಂಟಿ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರು ಮತ್ತು ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರವಿರಾಜ್ ನಾರಾಯಣ್ ಅವರನ್ನು ಭೇಟಿ ಮಾಡಿದ ಹಿಡುವಳಿದಾರರು ಈ ಸಂಬಂಧ ಮನವಿ ಸಲ್ಲಿಸಿದರು.
ಸರ್ವೇಗೆ ವಿರೋಧ: ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಕಂದಾಯ ಹಾಗೂ ಅರಣ್ಯ ವ್ಯಾಪ್ತಿಯಲ್ಲಿ ವಾಸವಾಗಿರುವ ಭೂರಹಿತ ಅರಣ್ಯ ವಾಸಿಗಳನ್ನು ಗುರುತಿಸದೇ ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ದಿಡೀರ್ ಸರ್ವೇ ಆರಂಭಿಸಿರುವ ಕ್ರಮವನ್ನು ಆಕ್ಷೇಪಿಸಿದ ಅವರು, ಯಾವುದೇ ಕಾರಣಕ್ಕೂ ತಮ್ಮನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ಮಸಗಲಿ ಮೀಸಲು ಅರಣ್ಯದ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಸರ್ವೇ ಆಫ್ ಇಂಡಿಯಾ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಈ ಹಿಂದೆಯೇ ಜಂಟಿ ಸರ್ವೆ ನಡೆಸಿ 957 ಎಕರೆ ಕಂದಾಯ ಹಿಡುವಳಿ ಪ್ರದೇಶಗಳು ಹಾಗೂ ಅರಣ್ಯ ವಾಸಿ ಭೂರಹಿತರು ಹಿಡುವಳಿ ಮಾಡಿಕೊಂಡಿರುವ ಅಲ್ಪಸ್ವಲ್ಪ ಜಮೀನುಗಳ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ವರದಿ ನೀಡಿದೆ ಎಂದು ತಿಳಿಸಿದರು.
ಡಿ ಲೈನ್ ಗುರುತು: ಇದೀಗ ಸುಪ್ರೀಂ ಕೋರ್ಟ್ನ ಆದೇಶವನ್ನು ಮುಂದಿಟ್ಟುಕೊಂಡು ಸರ್ವೆ ಆಫ್ ಇಂಡಿಯಾ ತಂಡ ಸರ್ವೆ ನಡೆಸಿ ಸಲ್ಲಿಸಿದ್ದ ವರದಿಯನ್ನು ಕೈಬಿಟ್ಟು ಏಕಾಏಕಿ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಕೇವಲ ಡಿ ಲೈನ್ ಮಾತ್ರ ಗುರುತು ಮಾಡಿ ಆ ಲೈನ್ನಲ್ಲಿ ಬರುವ ಒತ್ತುವರಿಯನ್ನು ತೆರವು ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರಿಯಾಗಿ ಸರ್ವೆ ಮಾಡದೇ ತಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಅವಕಾಶಗಳಿದ್ದರೂ ಸಹ ಕೈಕಟ್ಟಿ ಕುಳಿತಿರುವ ಅಧಿಕಾರಿಗಳು ಮತ್ತು ಸರ್ಕಾರ ತಾವು ಮಾಡಿದ ತಪ್ಪಿಗೆ ಇದೀಗ ಹಿಡುವಳಿದಾರರನ್ನು ಅರಣ್ಯ ವಾಸಿಗಳನ್ನು ಬೀದಿಪಾಲು ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರು ಮತ್ತು ರೈತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಜಿ. ಗಿರೀಶ್, ಸಂಚಾಲಕ ಎಂ.ಎಲ್. ಬಸವರಾಜ್, ಹಿಡುವಳಿದಾರರಾದ ಬಿ.ಎ. ಮಹೇಶ್, ಡಿಸೋಜಾ, ಪ್ರಕಾಶ್, ಮನು ಸೇರಿದಂತೆ ಹಲವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

