ಚಿಕ್ಕಮಗಳೂರು

ಶರಣೆ ನಾಗಲಾಂಬಿಕೆ ಆತ್ಮವಿಶ್ವಾಸದ ಪ್ರತೀಕ

Published On :

ಚಿಕ್ಕಮಗಳೂರು: ಕಲ್ಯಾಣ ಕ್ರಾಂತಿ ನಂತರ ವಚನ ಸಾಹಿತ್ಯವನ್ನು ಬೆನ್ನಿಗೇರಿಸಿಕೊಂಡು ಕುದುರೆ ಮೇಲೆ ಪ್ರಯಾಣ ಬೆಳೆಸಿ ಶರಣ ಸಾಹಿತ್ಯವನ್ನು ಪ್ರಚುರಪಡಿಸಲು ಶ್ರಮಿಸಿದ ಅಕ್ಕ ನಾಗಲಾಂಬಿಕೆ ಅದಮ್ಯ ಚೇತನ ಎಂದು ಬಸವನಹಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕಿ ಸಿ. ಪ್ರತಿಭಾ ವಿನಯ್ ಹೇಳಿದ್ದಾರೆ.
ಅಕ್ಕಮಹಾದೇವಿ ಮಹಿಳಾ ಸಂಘದ ವಿಜಯಪುರ ವಿಭಾಗದ ಶರಣೆ ಅಕ್ಕನಾಗಲಾಂಬಿಕೆ ತಂಡವು ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಆಯೋಜಿಸಿದ್ದ ಹೊಸ್ತಿಲ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನಲ್ಲಿ ಅನೇಕ ಕಷ್ಟಗಳನ್ನು ಧೃತಿಗೆಡದೆ ಧೈರ್ಯದಿಂದ ಎದುರಿಸಿ ಒಳ್ಳೆಯ ವಿಚಾರಕ್ಕಾಗಿ ತುಂಬು ಜೀವನ ನಡೆಸಿದ ಶರಣೆ ನಾಗಲಾಂಬಿಕೆ, ಆತ್ಮವಿಶ್ವಾಸದ ಪ್ರತೀಕ ಎಂದರು.
ಕ್ರಿ.ಶ. 1116 ರಲ್ಲಿ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯರ ಮಗಳಾಗಿ ಜನಿಸಿದ ಅಕ್ಕನಾಗಮ್ಮ, ತಮ್ಮ ಬಸವಣ್ಣನ ಎಲ್ಲ ಹೋರಾಟಗಳಿಗೂ ಪ್ರೇರಕಳಾಗಿದ್ದಳು. ಅನುಭವಮಂಟಪ ಸೇರಿದಂತೆ ಸಾಮಾಜಿಕ, ಧಾರ್ಮಿಕ ಸತ್ಕಾರ್ಯಗಳಿಗೆ ತೊಡಗಿಸಿಕೊಂಡವಳು. ಕಲ್ಯಾಣಕ್ರಾಂತಿ ಸಂದರ್ಭದಲ್ಲಿ ಬಸವಣ್ಣ, ಮಗ ಚನ್ನಬಸವಣ್ಣ ಸೇರಿದಂತೆ ಅಪಾರ ಶರಣ ಬಳಗವನ್ನು ಕಳೆದುಕೊಂಡರೂ ಧೃತಿಗೆಡದೆ 90ನೇ ಇಳಿವಯಸ್ಸಿನಲ್ಲೂ ವಚನಸಾಹಿತ್ಯವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡಿದ ಧೀರವನಿತೆ. ಶತ-ಶತಮಾನ ಕಳೆದರೂ ಅವರ ಧೈರ್ಯ, ಸ್ಥೈರ್ಯ, ಸ್ವಾಭಿಮಾನ ಬದ್ಧತೆಗಳು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಹೇಳಿದರು.
ಶರಣರ ವಚನಗಳಲ್ಲಿ ಸಕಾರಾತ್ಮ ಚಿಂತನೆ ಇದೆ. ಮಹಿಳೆಯರು ಮಕ್ಕಳು ಮತ್ತು ಮನೆಯನ್ನು ಸಂಸ್ಕಾರ- ಸಂಸ್ಕೃತಿಯ ಕೇಂದ್ರವಾಗಿಸಿದರೆ ಇಂದಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಮಕ್ಕಳಲ್ಲಿ ಸದ್ಗುಣಗಳನ್ನು ಭಿತ್ತಬೇಕು. ಪರಿಸರ ಸಂರಕ್ಷಿಸಬೇಕು. ವಿದ್ಯುತ್ ಹಾಗೂ ನೀರನ್ನು ಮಿತವಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದ ಪ್ರತಿಭಾ, ಸ್ವಾವಲಂಬಿಗಳಾಗಿ  ಸಂಸ್ಕೃತಿಯ ಹರಿಕಾರರಾಗಿ ಮಹಿಳೆಯರು ಬಾಳಬೇಕೆಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಲತಾ, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಹ ಖಜಾಂಚಿ ರೇಖಾ ಉಮಾಶಂಕರ್, ತಂಡದ ಉಪಾಧ್ಯಕ್ಷೆ ಸುಧಾರಾಜ ಶೇಖರ್ ವೇದಿಕೆಯಲ್ಲಿದ್ದರು.   ಶಿಲ್ಪಾ ಹರೀಶ್ ಸ್ವಾಗತಿಸಿದರು, ಚೇತನಾ ಪ್ರಮೋದ ಮತ್ತು ಆಶಾಸುರೇಶ್ ಪ್ರಾರ್ಥಿಸಿದರು, ಸುಧಾ ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾಕ್ಷಾಯಣಿ ನೀಲಕಂಠ ಕಾರ್ಯಕ್ರಮ ನಿರೂಪಿಸಿ, ಚಂಪಕಾ ಬಸವರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.