ಚಿಕ್ಕಮಗಳೂರು

ಅಡಕೆ; ಗೋರಕ್ ಸಿಂಗ್ ವರದಿ ಜಾರಿಗೆಯಾಗಲಿ: ತಮ್ಮಯ್ಯ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.19
ಅಡಕೆ ಹಾನಿಕಾರಕ ಎಂಬ ಪ್ರಮಾಣಪತ್ರ ವಾಪಸ್ ಪಡೆಯಬೇಕು ಹಾಗೂ ಗೋರಕ್ ಸಿಂಗ್ ವರದಿಯನ್ನು ಸಂಪೂರ್ಣ ಅನುಷ್ಠಾನಕ್ಕೆ ತರಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರ ಎಚ್.ಡಿ.ತಮ್ಮಯ್ಯ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ಕೇಂದ್ರ ಆರೋಗ್ಯ ಇಲಾಖೆಯಿಂದ ಸುಪ್ರೀಂಕೋರ್ಟ್‌ಗೆ  ಅಫಿಡೆವಿಟ್ ಸಲ್ಲಿಸಿದ್ದಾರೆ. ಇದರಿಂದ ಇಡೀ ದೇಶದ ಅಡಕೆ ಬೆಳೆಗಾರರಿಗೆ ಮರಣ ಶಾಸನ ವಿಧಿಸಿದಂತಾಗಿದೆ. ನಮ್ಮ ಜಿಲ್ಲೆಯಲ್ಲಿ ಬಹುತೇಕ ರೈತರು ಅಡಕೆ ಬೆಳೆಯನ್ನು ಜೀವನಾಡಿ ಬೆಳೆಯಾಗಿ ನಂಬಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್. ವಿಜಯಕುಮಾರ್ ಅವರು ಶಾಸಕ ಸಿ.ಟಿ. ರವಿ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅಡಕೆ ಬೆಳೆ ನಿಷೇಧದ ಗುಮ್ಮ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಡಕೆ ಬೆಳೆ ಆರೋಗ್ಯಕ್ಕೆ ಹಾನಿಕರ ಎಂಬ ಅಫಿಡೆವಿಟ್ ಅನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದಾಗಿ ಸರ್ಕಾರದ ಪರವಾಗಿ ಸಾಲಿಸಿಟಿರಿ ಜನರಲ್ ಅವರೇ ಒಪ್ಪಿದ್ದಾರೆ. ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರು ಪಕ್ಷದ ನೂತನ ಅಧ್ಯಕ್ಷರಾಗಿದ್ದಾರೆ. ಇದರಿಂದಾಗಿ ಅವರಿಗೆ ಸರಿಯಾದ ಮಾಹಿತಿ ಇಲ್ಲದೇ ಅಡಕೆ ಬೆಳೆಗಾರರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸಚಿವರನ್ನು ಕರೆಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಡಕೆ ಬೆಳೆಗಾರರಿಗೆ ಅನುಕೂಲವಾಗುವಂತ ಗೋರಕ್ ಸಿಂಗ್ ವರದಿಯನ್ನು ಸಂಪೂರ್ಣ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಗೋರಕ್ ಸಿಂಗ್ ವರದಿಯ ಎಷ್ಟು ಭಾಗ ಅನುಷ್ಠಾನಕ್ಕೆ ತಂದಿದ್ದಾರೆಂದು ರೈತರಿಗೆ ತಿಳಿದಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಗೋರಕ್ ಸಿಂಗ್ ವರದಿಯ ಶೇ.90 ಭಾಗ ಅನುಷ್ಠಾನಗೊಂಡಿದೆ ಎಂದಿದ್ದಾರೆ ಇದನ್ನು ದಾಖಲೆ ಸಮೇತ ತಿಳಿಸಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಎಚ್.ಎಚ್. ದೇವರಾಜ್ ಅವರು, ಶಾಸಕ ಸಿ.ಟಿ.ರವಿ ಬಿಜೆಪಿ ಸರ್ಕಾರವಿದ್ದಾಗ ಏನು ಮಾತನಾಡದೇ ಇದೀಗ ದತ್ತಪೀಠ ವಿಷಯದಲ್ಲಿ ತಾಳ್ಮೆ ಪರೀಕ್ಷೆ ಮಾಡಬಾರದು ಎಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ದತ್ತಪೀಠ ಅಭಿವೃದ್ಧಿಗೆ 12 ಕೋಟಿ ಅನುದಾನ ತಂದಿರುವುದು ಸಿ.ಟಿ.ರವಿ ಎನ್ನುವುದನ್ನು  ದೇವರಾಜ್ ಮರೆಯಬಾರದು. 25 ವರ್ಷಗಳ ನಿರಂತರ ದತ್ತಪೀಠ ಮುಕ್ತಿ ಹೋರಾಟದ ಸಂದರ್ಭದಲ್ಲಿ ಐ.ಡಿ.ಪೀಠ ಸ.ನಂ.195 ರಲ್ಲಿ 14 ಎಕರೆ, 11 ಗುಂಟೆ ದತ್ತಪೀಠಕ್ಕೆ ಸೇರಿದ್ದು ಹಾಗೂ ನಾಗೇನಹಳ್ಳಿ ಸ.ನಂ. 57ರಲ್ಲಿ ಬಾಬಾಬುಡನ್ ದರ್ಗಾ ಇದೆ. ಆಗಾಗಿ ಸ.ನಂ.195ರಲ್ಲಿ ಇರುವ ದತ್ತಾತ್ರೇಯ ಪೀಠ ಹಿಂದುಗಳಿಗೆ ಸೇರಿದ್ದು ಎನ್ನುವುದನ್ನು ಸಿ.ಟಿ.ರವಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಸ.ನಂ. 57ರಲ್ಲಿ ಬಾಬುಬುಡನ್ ದರ್ಗಾದಲ್ಲಿ ಉರುಸ್ ಆಚರಣೆ ಮಾಡುವುದು ಸೂಕ್ತ ಎಂದು ಪ್ರತಿಪಾದಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್, ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.