ಚಿಕ್ಕಮಗಳೂರು

ಎಪಿಎಂಸಿಯಲ್ಲಿ ವಹಿವಾಟು ನಡೆಸಲು ಸಮಯ ನಿಗದಿ

Published On :

ಚಿಕ್ಕಮಗಳೂರು,: ನಗರದ ಎಪಿಎಂಸಿಯಲ್ಲಿ ವಹಿವಾಟು ನಡೆಸಲು ಜನವರಿ 1 ರಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಮಯ ನಿಗದಿಪಡಿಸಲಾಗಿದೆ.
ಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷ ಕೆ. ನಿಂಗೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಕೆ. ನಿಂಗೇಗೌಡ, ರೈತರು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದು 10 ಗಂಟೆಗಳ ಕಾಲ ವ್ಯಯ ಮಾಡಿದರೂ ಸರಿಯಾದ ಬೆಲೆ ಸಿಗುತ್ತಿರಲಿಲ್ಲ ಮತ್ತು ದಲ್ಲಾಳಿಗಳ ಹಾವಳಿ ಹೆಚ್ಚಿತ್ತು ಎಂಬ ದೂರು ವ್ಯಕ್ತವಾಗಿದ್ದವು. ಇದನ್ನು ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಬೇಕೆಂಬ ಉದ್ದೇಶ ಹೊಂದಿ ಎಲ್ಲ ಸದಸ್ಯರು ಮತ್ತು ಅಧಿಕಾರಿಗಳು ಚರ್ಚಿಸಿ ಮಾರುಕಟ್ಟೆಗೆ ನಿಗದಿತ ಸಮಯ ಜಾರಿ ಮಾಡಲಾಗಿದೆ ಎಂದರು.
ನ್ಯಾಯಯುತ ಬೆಲೆ: ದಿನವಿಡೀ ಮಾರುಕಟ್ಟೆ ಇದ್ದರೆ ದಲ್ಲಾಳಿಗಳ ಹಾವಳಿಯಿಂದ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಹೊತ್ತಿಗೆ ಒಂದೊಂದು ದರ ಏರುಪೇರಾಗುತ್ತದೆ. ಸಮಯ ನಿಗದಿಪಡಿಸಿದರೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸಮನಾದ, ಸೂಕ್ತವಾದ ಮತ್ತು ನ್ಯಾಯಯುತ ಬೆಲೆ ಸಿಗುತ್ತದೆ ಎಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಮಾರುಕಟ್ಟೆಗೆ ಅನುಕೂಲವಾಗಲಿ ಎಂಬ ದೃಷ್ಟಿ ಹೊಂದಿ ಈ ಹಿಂದೆ ಅನೇಕ ವರ್ತಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಿದ್ದರೂ ಪ್ರಾಂಗಣದ ಒಳಗೆ ವಹಿವಾಟು ನಡೆಸದೆ ನಗರಕ್ಕೆ ಸ್ಥಳಾಂತರ ಮಾಡಿಕೊಂಡಿದ್ದಾರೆಂಬ ದೂರುಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಂತಹ ವರ್ತಕರು ಜನವರಿ 1 ರೊಳಗೆ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ನಡೆಸಲು ಮುಂದಾಗದಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಮತ್ತು ಅನೇಕ ವರ್ತಕರು 2 ಕಟ್ಟೆ ಮಾಡಿಕೊಂಡಿದ್ದು, ಅಂಥವರು 1 ಕಟ್ಟೆ ಬಿಟ್ಟುಕೊಟ್ಟು ಸಹಕರಿಸಬೇಕು. ಇಲ್ಲವಾದಲ್ಲಿ ಅಕ್ರಮಿಸಿರುವ ಕಟ್ಟೆ ಬಿಡಿಸಿಕೊಂಡು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಪಾಧ್ಯಕ್ಷ ಈರಪ್ಪಗೌಡ, ಸದಸ್ಯರಾದ ಕೆ.ಪಿ. ವೆಂಕಟೇಶ್, ಚಂದ್ರೇಶ್, ಟಿ.ಇ. ಮಂಜುನಾಥ್, ಯೋಗಾನಂದ್, ಭದ್ರಿ, ಶಂಕರೇಗೌಡ, ಬೆಳವಾಡಿ ರವೀಂದ್ರ, ಪಾರ್ವತಮ್ಮ, ಶಾಂತಕುಮಾರ್, ಸುಂದರ್, ಕನ್ವರ್, ರಾಜೇಂದ್ರ ಕಾರ್ಯದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಮೋಹನ್ ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.