30 ರಂದು ಅಡಕೆ ಬೆಳೆಗಾರರ ಜಾಗೃತಿ ಸಮಾವೇಶ
ನರಸಿಂಹರಾಜಪುರ: ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸೀಟರ್ ಜನರಲ್ ಅವರು ಅಡಕೆ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಡಕೆ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ಪಕ್ಷತೀತವಾಗಿ ಶಿವಮೊಗ್ಗದಲ್ಲಿ ಅಡಕೆ ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶವನ್ನು ಡಿ. 30ರ ಸೋಮವಾರ ಏರ್ಪಡಿಸಲಾಗಿದೆ ಎಂದು ಮ್ಯಾಮ್ಕೋಸ್ ನಿರ್ದೇಶಕ ವೈ.ಎಸ್. ಸುಬ್ರಮಣ್ಯ ತಿಳಿಸಿದರು.
ಮಂಗಳವಾರ ಟಿಎಪಿಸಿಎಎಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಅಡಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ರಾಜ್ಯದ ಅಡಕೆ ಬೆಳೆಯುವ 11 ಜಿಲ್ಲೆಗಳ ಎಲ್ಲಾ ಶಾಸಕರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಸಚಿವರನ್ನು ಸಹ ಆಹ್ವಾನಿಸಲಾಗುವುದು.
ಮಲೆನಾಡು ಭಾಗದ ಎಲ್ಲಾ ಅಡಕೆ ಬೆಳೆಗಾರರು ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪರಿಹರಿಸಬೇಕು: ಸರ್ಕಾರವು ನ್ಯಾಯವಾದಿಗಳನ್ನು ನೇಮಿಸಬೇಕು, ದೇಶದಲ್ಲಿ ಅಡಕೆ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳನ್ನುಅಡಕೆಯ ಕಣಜ ಎಂದೇ ಕರೆಯಲಾಗುತ್ತದೆ.
ಇತ್ತೀಚಿಗೆ ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರ್ಕಾರವು ಅಡಕೆ ನಿಷೇದ ಮಾಡುವಂತೆ ಮನವಿ ಸಲ್ಲಿಸಿರುವುದರಿಂದ ಬೆಳೆಗಾರರಿಗೆ ಸಿಡಿಲು ಬಡಿದಂತಾಗಿದೆ. ಈ ಬಗ್ಗೆ ಇರುವ ಗೊಂದಲವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸತ್ಯ ತಿಳಿಸಲಿ: ರಾಜ್ಯ ಸರ್ಕಾರವು ಅಡಕೆ ನಿಷೇಧಿಸದಂತೆ ಬೆಳೆಗಾರರ ಪರವಾಗಿ ನಿಲ್ಲಬೇಕು. ಕೇಂದ್ರ ಸರ್ಕಾರವೂ ಸುಪ್ರೀಂ ಕೋರ್ಟಿನಲ್ಲಿ ಅಡಕೆ ಬೆಳೆಗಾರರ ಜೊತೆ ನಿಲ್ಲಬೇಕು. ಕೇಂದ್ರ ಸರ್ಕಾರವು ಅಡಕೆ ಹಾನಿಕರ ಅಲ್ಲ ಎಂಬ ನೈಜ ಸತ್ಯವನ್ನು ಸುಪ್ರೀಂ ಕೋರ್ಟಿಗೆ ತಿಳಿಸಬೇಕು.
ರಾಜ್ಯ ಸರ್ಕಾರವು ಅಡಕೆ ಬೆಳೆಗಾರರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಈ ಹಿಂದೆ ನೇಮಿಸಿದ್ದ ನ್ಯಾಯವಾದಿಗಳ ಸೇವೆ ಹಿಂದಕ್ಕೆ ಪಡೆದಿದ್ದು, ಕೂಡಲೇ ಸೂಕ್ತ ನ್ಯಾಯವಾದಿಗಳನ್ನು ಅಡಕೆ ಬೆಳೆಗಾರರ ಪರವಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗಳ ಮೂಲಕ ಅಡಕೆ ವಿಚಾರವಾಗಿ ಬರುತ್ತಿರುವ ಪರ ಹಾಗೂ ವಿರೋಧ ಹೇಳಿಕೆಗಳಿಂದ ಮಾರುಕಟ್ಟೆಯಲ್ಲಿ ಅಡಕೆ ಧಾರಣೆಯಲ್ಲಿ ಆಗುವ ವ್ಯತ್ಯಾಸಗಳು, ರೈತರ ಆರ್ಥಿಕ ದುಸ್ಥಿತಿಗೆ ಕಾರಣವಾಗುತ್ತಿದೆ.
ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಾಸಕ ಡಿ.ಎನ್. ಜೀವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಭದ್ರಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ. ದಿವಾಕರ, ಪಿಸಿಎಆರ್‌ಡಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ಸಂಪತ್‌ಕುಮಾರ್, ಸಂದೇಶ್, ಚಂದ್ರಶೇಖರ್ ಇತರರು ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.
'ಅಡಕೆ ರಕ್ಷಣೆಗೆ ಸರ್ಕಾರಗಳು ಮುಂದಾಗಲಿ'
ಶೃಂಗೇರಿ: ಅಡಕೆ ಬೆಳೆಗಾರರು ಈಗಾಗಲೇ ಹತ್ತು ಹಲವು ಸಂಕಷ್ಟಗಳಿಗೆ ಸಿಲುಕಿದ್ದು, ಬದುಕು ಶೋಚನೀಯವಾಗಿದೆ. ಈ ನಡುವೆ ಅಡಕೆ ಹಾನಿಕಾರ, ಅದನ್ನು ನಿಷೇಧಿಸುವ ಕುರಿತು ವರದಿ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿರುವ ಬಗ್ಗೆ ಅಡಕೆ ಬೆಳೆಗಾರರಲ್ಲಿ ಆತಂಕ ಉಂಟುಮಾಡಿದ್ದು, ಕೂಡಲೇ ಸರ್ಕಾರ ಈ ನಿರ್ಧಾರ ಬದಲಿಸಿ ವರದಿ ಹಿಂಪಡೆದುಕೊಳ್ಳಬೇಕು ಎಂದು ಮ್ಯಾಮ್ಕೋಸ್ ನಿರ್ದೇಶಕ ಸುರೇಶ್ಚಂದ್ರ ತಿಳಿಸಿದರು.
ಅವರು ಪಟ್ಟಣದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಅಡಕೆ ನಿಷೇಧ ಕುರಿತ ವರದಿ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ವರದಿ ನೀಡಿದ್ದು ಅಚ್ಚರಿಯೇ ಸರಿ: ಬಹುತೇಕ ರೈತರು ಅಡಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಹಿಂದೆ ಗುಟ್ಕಾ ನಿಷೇಧದ ವೇಳೆಯಲ್ಲಿ ಅಡಕೆ ಹಾನಿಕರಕ ವಸ್ತುವಲ್ಲ ಎಂಬ ವರದಿ ನೀಡಲಾಗಿದ್ದರೂ, ಕೇಂದ್ರ ಸರ್ಕಾರ ಅಡಕೆ ಹಾನಿಕರವೆಂದು ವರದಿ ನೀಡಿರುವುದು ಆಶ್ಚರ್ಯವಾಗಿದೆ. ಇದರ ಹಿಂದೆ ದೊಡ್ಡ ಲಾಬಿಯೇ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮ್ಯಾಮ್ಕೋಸ್ ಅಡಕೆ ಬೆಳೆ ನಿಷೇಧ ಕ್ರಮದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ವಕೀಲರನ್ನು ನೇಮಕ ಮಾಡಲಿದೆ. ಅಡಕೆ ಬೆಳೆಯನ್ನೇ ನಂಬಿರುವ ಲಕ್ಷಾಂತರ ರೈತರ ಹಿತ ಕಾಪಾಡಲು ಮ್ಯಾಮ್ಕೋಸ್ ಬದ್ಧವಾಗಿದೆ ಎಂದರು. ಅಂಬಳೂರು ರಾಮಕೃಷ್ಣ, ಪುರುಷೋತ್ತಮ ಮೊದಲಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

