ಚಿಕ್ಕಮಗಳೂರು

ಸರ್ಕಾರದ ನೀತಿಯಿಂದ ವರ್ತಕರ ಭವಿಷ್ಯ ಡೋಲಾಯಮಾನ

Published On :

ಚಿಕ್ಕಮಗಳೂರು: ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಎ) ಸೇರಿದಂತೆ ಸರ್ಕಾರಗಳ ವರ್ತಕ ವಿರೋಧಿ ನೀತಿಗಳಿಂದ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ವರ್ತಕರ ಭವಿಷ್ಯ ಡೋಲಾಯಮಾನವಾಗಿದೆ ಎಂದು ಚಿಕ್ಕಮಗಳೂರಿನ ವರ್ತಕರ ಸಂಘದ ಅಧ್ಯಕ್ಷ ಜಿ.ಎ. ದಿನೇಶ್ ಗುಪ್ತ ಹೇಳಿದ್ದಾರೆ.
ಎಫ್‌ಡಿಎನಂತಹ ಒಪ್ಪಂದಗಳ ಮೂಲಕ ಚಿಲ್ಲರೆ ಹಾಗೂ ಸಗಟು ವ್ಯಾಪಾರ, ಕೈಗಾರಿಕೆಗಳ ಬೆಳವಣಿಗೆಯಲ್ಲಿ ವರ್ತಕರು ಮತ್ತು ಇತರೆ ವಾಣಿಜ್ಯೋದ್ಯಮಿಗಳು ತೀವ್ರ ಸ್ವರೂಪದ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವರ್ತಕರು ತಮ್ಮ ವೃತ್ತಿಯಲ್ಲಿ ಹಲವು ಸವಾಲು ಎದುರಿಸುತ್ತಿದ್ದು, 2014 ರಿಂದ ವರ್ತಕರಿಗೆ ಆಗಬಹುದಾದ ಈ ರೀತಿಯ ಗುರುತರ ಸಮಸ್ಯೆಗಳ ಬಗ್ಗೆ ವೃತ್ತಿ ಬಾಂಧವರು ಒಂದೆಡೆ ಸೇರಿ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಕಷ್ಟಸಾಧ್ಯ: ಸರ್ಕಾರದ ಹಲವು ನೂತನ ನೀತಿಗಳು ವಿವಿಧ ಇಲಾಖೆಗಳಿಂದ ಆಗುತ್ತಿರುವ ಅನವಶ್ಯಕ ಕಟ್ಟುಪಾಡುಗಳಿಂದಾಗುವ ಕಿರಿಕಿರಿ, ವಹಿವಾಟಿನಲ್ಲಿ ಆಗುತ್ತಿರುವ ಚಿಲ್ಲರೆ ನಾಣ್ಯಗಳ ಹಾಗೂ ನೋಟಿನ ಸಮಸ್ಯೆ ಸೇರಿದಂತೆ ಹಲವಾರು ವಿಘ್ನಗಳನ್ನು ಎದುರಿಸುತ್ತಿರುವ ವರ್ತಕರು ಕಡಿಮೆ ಬಂಡವಾಳದಲ್ಲಿ ವ್ಯಾಪಾರ ವಹಿವಾಟು ನಡೆಸುವುದರ ಮೂಲಕ ಜೀವನ ಸಾಗಿಸುವುದೇ ಕಷ್ಟಸಾಧ್ಯವಾಗಿದೆ.
ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ತಲುಪಿಸುವ ಅತ್ಯಂತ ಕ್ಲಿಷ್ಟಕರ ಕಾರ್ಯ ನಿರ್ವಹಿಸಿ ರೈತರಿಗೆ ವರ್ತಕರು ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇತ್ತ ರೈತ ಹಾಗೂ ವರ್ತಕ ಇಬ್ಬರೂ ಆರ್ಥಿಕ ಸಬಲತೆ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮ: ಮುಂಬರುವ ಸವಾಲುಗಳ ಬಗ್ಗೆ ಹಾಗೂ ಆಗಬಹುದಾದ ಸಂದಿಗ್ಧ ಪರಿಸ್ಥಿತಿಯಲ್ಲಿ ವರ್ತಕರು ಎದುರಿಸಬಹುದಾದ ತೊಂದರೆಗಳ ಬಗ್ಗೆ ಪರಿಣಾಮಕಾರಿಯಾಗಿ ಚಿಂತಿಸಿ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಚಿಂತನೆಯ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ವರ್ತಕರ ಸಂಘವು ಡಿ. 29 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಚಿಕ್ಕಮಗಳೂರು ವಾಣಿಜ್ಯೋದ್ಯಮ- 2014 ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಚರ್ಚಾಗೋಷ್ಠಿ: ಪ್ರಸ್ತುತ ವಾಣಿಜೋದ್ಯಮಗಳ ಸವಾಲುಗಳು- ಸಾಧ್ಯತೆಗಳು- ಸಿದ್ಧತೆ ಎಂಬ ವಿಷಯ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನೇಕ ವಾಣಿಜ್ಯೋಧ್ಯಮಿಗಳು, ಕೈಗಾರಿಕೋದ್ಯಮಿಗಳು, ವರ್ತಕರು ಮತ್ತು ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಬೆಳಗ್ಗೆ 9 ಗಂಟೆಗೆ ನಗರದ ಹಳೆ ತಾಲೂಕು ಕಚೇರಿ ಆವರಣದಿಂದ ವರ್ತಕರ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯು ಎಂ.ಜಿ. ರಸ್ತೆ ಮಾರ್ಗವಾಗಿ ಕುವೆಂಪು ಕಲಾಮಂದಿರ ತಲುಪಲಿದೆ. ನಂತರ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಲೈಫ್ ಲೈನ್ ಸಂಸ್ಥೆಯ ಮುಖ್ಯಸ್ಥ ಕಿಶೋರ್‌ಕುಮಾರ್ ಹೆಗ್ಡೆ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಜಿ.ಎ. ದಿನೇಶ್ ಗುಪ್ತ ಅಧ್ಯಕ್ಷತೆ ವಹಿಸುವರು. ಸಂಘದ ವಿವಿಧ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು.
ಪ್ರಖ್ಯಾತ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ, ಹೂಡಿಕೆ ಮತ್ತು ಷೇರು ಪೇಟೆ ಸಲಹೆಗಳು ಎಂಬ ವಿಷಯದಲ್ಲಿ ವರ್ತಕರಿಗೆ ತಜ್ಞರು ಮಾಹಿತಿ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಸಿ.ಟಿ. ರವಿ, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಭಾಗವಹಿಸಲಿದ್ದಾರೆ.
 ನಂತರದಲ್ಲಿ ಗಂಗಾವತಿ ಪ್ರಾಣೇಶ್ ಮತ್ತು ಸಂಗಡಿಗರಿಂದ ನಗೆ ಹಬ್ಬ ಏರ್ಪಡಿಸಲಾಗಿದೆ ಎಂದುತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.