ಅಡಕೆ ನಿಷೇಧ ಪ್ರಸ್ತಾವನೆ ಹಿಂಪಡೆಯಲು ಆಗ್ರಹ
ಕ.ಪ್ರ.ವಾರ್ತೆ, ತರೀಕೆರೆ, ಡಿ.27
ಕೆಜೆಪಿ ತಾಲೂಕು ಘಟಕದ ವತಿಯಿಂದ ಅಡಕೆ ಬೆಳೆಗಾರರು, ಕಾರ್ಮಿಕರು ಮತ್ತು ವರ್ತಕರ ಸಹಯೋಗದೊಂದಿಗೆ ಶುಕ್ರವಾರ ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ನೇತೃತ್ವದಲ್ಲಿ ಅಡಕೆ ನಿಷೇಧ ಪ್ರಸ್ತಾವನೆ ಹಿಂಪಡೆಯಲು ಹಾಗೂ ಗೋರಖ್ಸಿಂಗ್ ವರದಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಎಪಿಎಂಸಿ ಯಾರ್ಡ್ನಿಂದ ಮಿನಿವಿಧಾನ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಮಹಾತ್ಮಾಗಾಂಧಿ ವೃತ್ತದ ಬಳಿ ಧರಣಿ ಕುಳಿತು, ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು.
ನಂತರ ಮಿನಿವಿಧಾನ ಸೌಧದ ಬಳಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಮಾತನಾಡಿ, 5 ಲಕ್ಷ ಕುಟುಂಬಗಳಿಗೆ ಅಡಕೆ ಜೀವನಾಧಾರ, ಅಡಕೆ ನಿಷೇಧ ಪ್ರಸ್ತಾವನೆ ನಮಗೆ ಮರಣ ಶಾಸನವಿದ್ದಂತೆ. ಕೇಂದ್ರದ ಆರೋಗ್ಯ ಸಚಿವರ ಅಡಕೆ ನಿಷೇಧದ ಪ್ರಸ್ತಾವನೆ ಬಗ್ಗೆ ಪ್ರಧಾನ ಮಂತ್ರಿಗಳು ತುಟಿಪಿಟಕ್ ಅಂದಿಲ್ಲ. ದೇಶ ವಿದೇಶಗಳಲ್ಲಿ ಅಡಕೆ ಬಗ್ಗೆ ಪೂಜ್ಯ ಭಾವನೆ ಇದೆ ಎಂದು ತಿಳಿಸಿದರು.
ಷಡ್ಯಂತ್ರ: ಎಪಿಎಂಸಿ ನಿರ್ದೇಶಕ ಬೇಲೇನಹಳ್ಳಿ ಸೋಮಶೇಖರ್ ರಾಜ್ಯದ ಅನೇಕ ಭಾಗಗಳಲ್ಲಿ ಬರಗಾಲ ಬಂದಿದೆ. ರೈತರ ಕಡೆ ಗಮನ ಕೊಟ್ಟಿಲ್ಲ. ಕೇಂದ್ರ ಸರ್ಕಾರವು ಅಡಕೆ ನಿಷೇಧದ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ ಅಡಗಿದ್ದು, ಸಿಗರೇಟ್ ಸೇರಿದಂತೆ ಇತರೆ ಮಾದಕ ವಸ್ತುಗಳ ಉತ್ಪನ್ನ ಮಾರುಕಟ್ಟೆಯ ಉದ್ದೇಶ ಅಡಗಿದೆ. ಕೂಡಲೇ ಎಚ್ಚೆತ್ತುಕೊಂಡು ರೈತರ ಹಿತ ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರವು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ವಿದ್ಯುತ್ ಕೊಡದೆ ಕತ್ತಲಿನಲ್ಲಿಟ್ಟುರುವುದು ಮತ್ತು ಗ್ರಾ.ಪಂ.ಗಳಲ್ಲಿ ವಾಸಸ್ಥಳ ದೃಢೀಕರಣ, ಅಸೆಸ್ಮೆಂಟ್ ಕೊಡುವುದು ಮತ್ತು ಲೈಸನ್ಸ್ ನೀಡುವುದನ್ನು ತಹಸೀಲ್ದಾರ್ ಅವರಿಗೆ ವಹಿಸಿರುವ ಕ್ರಮ ಹಾಗೂ ತಾಲೂಕಿನಲ್ಲಿ ಸರ್ಕಾರವು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿದೆ. ಕೂಡಲೇ ಸರಿಪಡಿಸಬೇಕೆಂದು ಉಪ ವಿಭಾಗಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಪಂ ಸದಸ್ಯರಾದ ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ಎಪಿಎಂಸಿ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಸದಸ್ಯ ಬೇಲೇನಹಳ್ಳಿ ಸೋಮೇಶೇಖರ್, ಲಕ್ಕವಳ್ಳಿ ಸಂಜನ್ಕುಮಾರ್, ತಾಲೂಕು ಕೆಜೆಪಿ ಅಧ್ಯಕ್ಷ ರಮೇಶ್, ತಿಪ್ಪೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಡಿ.ಎಸ್. ಗಿರೀಶ್, ಟಿ.ಜಿ. ಮಂಜುನಾಥ್, ಶಂಕರಲಿಂಗಪ್ಪ, ಟಿ.ಎಸ್. ಶಾಂತರಾಜ್, ತಾಪಂ ಸದಸ್ಯರು ತಾಲೂಕಿನ ಅಡಕೆ ಬೆಳೆಗಾರರು, ಕಾರ್ಮಿಕರು ಮತ್ತು ವರ್ತಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಹಿಸಿದ್ದರು.
ಏಕಾಪಾತ್ರಾಭಿನಯ: ರಾಜ್ಯಮಟ್ಟಕ್ಕೆ ರಂಗಿಣಿ
ನರಸಿಂಹರಾಜಪುರ: ಸೀತೂರಿನ ಸೀತಾ ಸೇವಾ ಯುವತಿ ಮಂಡಳಿಯ ಅಧ್ಯಕ್ಷೆ ರಂಗಿಣಿ ರಾವ್ ಅವರು 2012-13 ನೇ ಸಾಲಿನ ವಿಭಾಗೀಯ ಮಟ್ಟದ ಯುವಜನ ಮೇಳದಲ್ಲಿ ಏಕಾಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 21, 22 ಹಾಗೂ 23 ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ವಿಭಾಗೀಯ ಮಟ್ಟದ ಯುವಜನ ಮೇಳದಲ್ಲಿ ಏಕಾಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ, ಲಾವಣಿ ಮತ್ತು ರಂಗ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಸೀತೂರು ಸೀತಾ ಸೇವಾ ಯುವತಿ ಮಂಡಳಿ ಕಾರ್ಯದರ್ಶಿ ಹರಿಪ್ರಿಯ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅಭಿನವ ಗಿರಿರಾಜ್ ಹಾಗೂ ಯುವಜನ ಒಕ್ಕೂಟದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

