ಚಿಕ್ಕಮಗಳೂರು

ಇನಾಂ ಭೂಮಿ ವಿವಾದ ಪರಿಹಾರಕ್ಕೆ ಶಿಫಾರಸು

Published On :

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ಡಿ.27
ಕಳಸ ಇನಾಂ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಪಾಲನೆ ಮತ್ತು ಇಲ್ಲಿನ ಜನರ ಹಿತರಕ್ಷಣೆ ಕುರಿತಂತೆ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ನಡೆದ ಕಳಸ ಇನಾಂ ಭೂಮಿಯ ವಿವಾದ ಕುರಿತ ಸಭೆಯಲ್ಲಿ ಕೆಲವು ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಶ್ರೀ ಕಳಸೇಶ್ವರ ಇನಾಂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 826.12 ಎಕರೆ ಮಂಜೂರು ಜಮೀನು ಇದ್ದು, ಇದರ ದುಪ್ಪಟ್ಟು ಪ್ರಮಾಣ ಅಂದರೆ 1652.24 ಎಕರೆ ಲಭ್ಯ ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಪರ್ಯಾಯವಾಗಿ ನೀಡಿ, ಇದಕ್ಕೆ ಪ್ರತಿಯಾಗಿ ಇನಾಂ ಅರಣ್ಯ ವ್ಯಾಪ್ತಿಯ ಮಂಜೂರು ಜಮೀನನ್ನು ಕಂದಾಯ ಇಲಾಖೆಗೆ ಅರಣ್ಯದಿಂದ ಬಿಡುಗಡೆ ಮಾಡಿದಲ್ಲಿ, ಈ ವಿವಾದಕ್ಕೆ ಪರಿಹಾರವನ್ನು ದೊರಕಿದಂತಾಗುತ್ತದೆ. ಕುದುರೆಮುಖ ಸಂಸ್ಥೆಯಿಂದ ಸರ್ಕಾರ ಹಿಂಪಡೆದಿರುವ 2742.06 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬಹುದು ಎಂದು ಸಲಹೆ ನೀಡಲಾಗಿದೆ ಎಂದರು.
ಪುನರ್ವಸತಿಗೆ 222 ಕೋಟಿ ಅಂದಾಜು: ಇನಾಂ ಅರಣ್ಯ ವ್ಯಾಪ್ತಿಯ ಮಂಜೂರು ಜಮೀನುಗಳನ್ನು ಅರಣ್ಯದಿಂದ ಬಿಡುಗಡೆ ಮಾಡಲು ಅವಕಾಶವಿರುವುದಿಲ್ಲವೆಂದು ಸರ್ಕಾರ ತೀರ್ಮಾನಿಸಿದೆ. ಅರಣ್ಯ ವ್ಯಾಪ್ತಿಯ ಜಮೀನಿನ ಅಧಿಬೋಗದಾರರು ಮತ್ತು ಅಂತಹ ಜಮೀನಿನಲ್ಲಿ ವಾಸವಿರುವ ಕುಟುಂಬಗಳಿಗೆ ಭೂ ಸ್ವಾಧೀನ ಕಾಯ್ದೆ 1894ರಡಿಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬಹುದಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಯೋಜನೆ ಮತ್ತು ಜಿಲ್ಲೆಯ ಸಾರಗೋಡು ಮತ್ತು ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಒತ್ತುವರಿದಾರರಿಗೆ ನೀಡಿದ ಪುನರ್ವಸತಿ ಪ್ಯಾಕೇಜಿನ ಅನ್ವಯ ಕಳಸೇಶ್ವರ ಇನಾಂ ಭೂಮಿಯಲ್ಲಿ ವಾಸವಾಗಿರುವ 620 ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ನೀಡಲು ಸುಮಾರು 222.43 ಕೋಟಿ ಬೇಕಾಗಬಹುದು ಎಂದರು. ಸಂತ್ರಸ್ತ ಕುಟುಂಬಗಳು ಮಂಜೂರು ಜಮೀನು ಮತ್ತು ಜಮೀನಿನಲ್ಲಿರುವ ಕಟ್ಟಡ, ಮರಗಳ ಮಾಲ್ಕಿ, ದೀರ್ಘಾವಧಿ ಮತ್ತು ಅಲ್ಪಾವಧಿ ಬೆಳೆಗಳಿಗೆ ಭೂ ಸ್ವಾಧೀನ ಕಾಯ್ದೆಯ ಮಾರ್ಗಸೂಚಿಗಳ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹರಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡಿರುವ ಕುಟುಂಬಗಳಿಗೆ ಕರ್ನಾಟ ಭೂ ಕಂದಾಯ ಕಾಯ್ದೆ ಪ್ರಕಾರ ಸಕ್ರಮಗೊಳಿಸಲು ಅರ್ಹವಾದ ವಿಸ್ತೀರ್ಣಕ್ಕೆ ಪರಿಹಾರಕ್ಕೆ ಅರ್ಹರಿರುತ್ತಾರೆ. ಮೀಸಲು ಅರಣ್ಯ ಜಮೀನುಗಳಲ್ಲಿ 1980ಕ್ಕಿಂತ ಹಿಂದಿನಿಂದ ಒತ್ತುವರಿ ಮಾಡಿರುವ ಜಮೀನುಗಳಿಗೆ ಸರ್ಕಾರದ 5-5-1997 ರ ಆದೇಶದ ಪ್ರಕಾರ ಒತ್ತುವರಿದಾರು ಹೊಂದಿರುವ ಹಿಡುವಳಿ ಜಮೀನು ಸೇರಿ ಗರಿಷ್ಠ 3 ಎಕರೆವರೆಗೆ ಪರಿಹಾರ ಪಡೆಯಲು ಅರ್ಹರಿರುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.