ಚಿಕ್ಕಮಗಳೂರು

ನೊಂದವರ ಕಣ್ಣೀರು ಒರೆಸದ ಎನ್‌ಎಫ್‌ಬಿಎಸ್

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.27
ಜಿಲ್ಲೆಯಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆ (ಎನ್‌ಎಫ್ ಬಿಎಸ್) ನೊಂದ ಮಹಿಳೆಯರ ಕಣ್ಣೀರು ಒರೆಸುವಲ್ಲಿ ವಿಫಲವಾಗಿದೆ.
ಈ ಯೋಜನೆ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿರುವ ಸಾವಿರಾರು ಮಹಿಳೆಯರು ಸಹಾಯಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅದರೆ, ನೆರವು ನೀಡುವ ಲಕ್ಷಣ ಕಂಡು ಬರುತ್ತಿಲ್ಲ.
ಕಳೆದ ಐದು ವರ್ಷಗಳಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯರ ಸಂಖ್ಯೆ, ಸಹಾಯಧನ ಮಂಜೂರಾಗಿರುವ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ.
ಸಾಮಾಜಿಕ ಭದ್ರತಾ ಯೋಜನೆಯ ಮೂಲಕ ಅಂಗವಿಕಲರ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯ ಸುರಕ್ಷಾ ಯೋಜನೆ, ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆ, ಆದರ್ಶ ವಿವಾಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರ ಜತೆಗೆ 1995ರ ಆಗಸ್ಟ್ 15 ರಂದು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು ಜಾರಿಗೆ ತರಲಾಯಿತು. ಬಡತನ ರೇಖೆಗಿಂತ ಕೆಳಗಿರುವ 18 ರಿಂದ 65 ವರ್ಷದೊಳಗಿನ ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದಲ್ಲಿ, ದುಃಖತಪ್ತ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಪರಿಹಾರ ಮೊತ್ತವನ್ನು 20 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.
ಮಂಜೂರಾತಿಯ ಕ್ರಮ: ನೊಂದ ಕುಟುಂಬದ ಸದಸ್ಯರು ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯ ಸತ್ಯ ಸತ್ಯಾತೆಯನ್ನು ಪರಿಶೀಲಿಸಿದ ನಂತರ ಅರ್ಜಿಗಳನ್ನು ಸಂಬಂಧಪಟ್ಟ ತಹಸೀಲ್ದಾರ್‌ಗಳಿಗೆ ಕಳುಹಿಸಿಕೊಡಬೇಕು. ತಹಸೀಲ್ದಾರ್ ಅವರು ಪರಿಶೀಲಿಸಿದ ನಂತರ ಮಂಜೂರಾತಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಶಿಫಾರಸ್ಸು ಮಾಡಬೇಕು.
ನೆರವು ಸಿಕ್ಕವರು ಕಡಿಮೆ: ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿರುವ ಹಾಗೂ ಸಹಾಯಧನ ಪಡೆದುಕೊಂಡಿರುವ ಮಹಿಳೆಯರ ಸಂಖ್ಯೆಗೂ ಬಹಳಷ್ಟು ಅಂತರವಿದೆ.
2009-10ನೇ ಸಾಲಿನಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ ಬಂದ ಅರ್ಜಿಗಳ ಸಂಖ್ಯೆ 2936 ಈ ಪೈಕಿ ಸಹಾಯಧನ ಮಂಜೂರಾಗಿದ್ದು 400 ಮಹಿಳೆಯರಿಗೆ ಮಾತ್ರ. 2010-11ನೇ ಸಾಲಿನಲ್ಲಿ ಬಂದಿದ್ದ 3138 ಅರ್ಜಿಗಳಲ್ಲಿ 1000, 2011-12ನೇ ಸಾಲಿನಲ್ಲಿ 2372 ಅರ್ಜಿಗಳಲ್ಲಿ 1009, 2012-13ನೇ ಸಾಲಿನಲ್ಲಿ 2378 ಅರ್ಜಿಗಳಲ್ಲಿ 1496, 2013-14ನೇ ಸಾಲಿನ ಜುಲೈ ಅಂತ್ಯದವರೆಗೆ ಬಂದಿರುವ 519 ಅರ್ಜಿಗಳಲ್ಲಿ 144 ಮಹಿಳೆಯರಿಗೆ ಸಹಾಯಧನ ಮಂಜೂರು ಮಾಡಲಾಗಿದೆ.
ಅಂದರೆ ಐದು ವರ್ಷಗಳಲ್ಲಿ ಬಂದ ಅರ್ಜಿಗಳ ಸಂಖ್ಯೆ 11,343, ಇದರಲ್ಲಿ ಸಹಾಯಧನ ಮಂಜೂರಾಗಿದ್ದು 4,049 ಅರ್ಜಿಗಳಿಗೆ ಮಾತ್ರ.
ಹಾಗಾದರೆ ಇನ್ನುಳಿದವರು ಅನರ್ಹರೆ ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗಿದ್ದರೆ ಈ ಯೋಜನೆಯ ಸವಲತ್ತು ಪಡೆಯಲು ಅನರ್ಹರೆಂದು ಅರ್ಜಿದಾರರಿಗೆ ಹಿಂಬರಹ ನೀಡುವ ಕೆಲಸವನ್ನು ಸಂಬಂಧಪಟ್ಟ ತಾಲೂಕು ಕಚೇರಿಗಳಿಂದ ಆಗಿಲ್ಲ. ಅದುದರಿಂದ ಇಂದಿಗೂ ಕೂಡ  ಅರ್ಜಿದಾರರು ಸಹಾಯಧನದ ನಿರೀಕ್ಷೆಯಲ್ಲಿಯೇ ಇದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಯಾವುದೇ ಮಹಿಳೆ ತನ್ನ ಪತಿ ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿ ಸಹಾಯಧನ ಪಡೆಯಲು ಇಷ್ಟಪಡುವುದಿಲ್ಲ. ಹಾಗೆ ತಪ್ಪು ಮಾಹಿತಿ ಕೊಡಲು ಅವರ ಮನಸ್ಸು ಒಪ್ಪುವುದಿಲ್ಲ. ಹಾಗಾದರೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಹಾಯಧನ ಸಿಗಬೇಕಾಗಿತ್ತು. ಆದರೆ, ಈ ಕೆಲಸ ಆಗಿಲ್ಲ ಎಂದರೆ ಈ ವಿಷಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದಾರ್ಥ.
ಸರ್ಕಾರದ ಆದೇಶದ ಪ್ರಕಾರ ತಹಸೀಲ್ದಾರ್ ಅವರು ಬಂದ ಅರ್ಜಿಯ ಬಗ್ಗೆ ಸತ್ಯ ಸತ್ಯಾತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.
ಕೆಲವೇ ಅರ್ಜಿಗಳಿಗೆ ಮಾತ್ರ ಸಹಾಯಧನ ನೀಡಿದ್ದಾರೆಂದರೆ, ಇದರ ಹಿಂದೆ ಕೆಲವು ಲಾಭಿಗಳು ಕೆಲಸ ಮಾಡಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಸಹಾಯಕ, ಲಾಭಿ ಮಾಡುವಷ್ಟು ಸಮರ್ಥವಲ್ಲದ ಸಾವಿರಾರು ಮಹಿಳೆಯರಿಗೆ ಅನ್ಯಾಯವಾಗಿದೆ.
ಈ ಅನ್ಯಾಯದ ಪ್ರಮಾಣ ಎಷ್ಟಿದೆ ಎಂಬುದಕ್ಕೆ 2009-10ರಲ್ಲಿ ಬಂದ ಅರ್ಜಿಗಳ ಸಂಖ್ಯೆ ಮತ್ತು ಸಹಾಯಧನ ಸಿಕ್ಕಿರುವ ಅರ್ಜಿಗಳ ಸಂಖ್ಯೆ ನೋಡಿದರೆ ಗಮನಕ್ಕೆ ಬರುತ್ತದೆ. ಆ ವರ್ಷದಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 1012 ಅರ್ಜಿಗಳು ಬಂದಿದ್ದು, ಇದರಲ್ಲಿ 110 ಮಹಿಳೆಯರಿಗೆ ಮಾತ್ರ ಹಣ ಮಂಜೂರು ಮಾಡಲಾಗಿದೆ.
ಇನ್ನುಳಿದಂತೆ ಕಡೂರು ತಾಲೂಕಿನಲ್ಲಿ 720 ಅರ್ಜಿಗಳಲ್ಲಿ 70, ಕೊಪ್ಪ 110ರಲ್ಲಿ 30, ಮೂಡಿಗೆರೆ- 463ರಲ್ಲಿ 65, ಎನ್.ಆರ್.ಪುರ- 118ಕ್ಕೆ 30, ಶೃಂಗೇರಿ- 79ರಲ್ಲಿ 30, ತರೀಕೆರೆ- 434ರಲ್ಲಿ 65 ಮಹಿಳೆಯರಿಗೆ, ಹೀಗೆ ಒಟ್ಟು 400 ಮಹಿಳೆಯರಿಗೆ 40 ಲಕ್ಷ ಮಂಜೂರು ಮಾಡಲಾಗಿದೆ.
ನನ್ನ ಯಜಮಾನರಾದ ಚಂದ್ರಶೇಖರ್ ಮರಣ ಹೊಂದಿದ್ದು, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಸಹಾಯಧನ ಕೋರಿ ಚಿಕ್ಕಮಗಳೂರು ತಹಸೀಲ್ದಾರ್ ಅವರಿಗೆ 30-11-2009ರಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಅರ್ಜಿಯ ಕ್ರಮ ಸಂಖ್ಯೆ 9113378. ಇದುವರೆವಿಗೂ ನನಗೆ ಸಹಾಯಧನ ಬಂದಿಲ್ಲ.
ದಯಮಾಡಿ ನನಗೆ ಸಹಾಯಧನ ಕೊಡಿಸಬೇಕೆಂದು ಚಿಕ್ಕಮಗಳೂರು ತಾಲೂಕಿನ ಕಲ್ಲೆದೇವರಹಳ್ಳಿ ಗ್ರಾಮದ ವೇದಾವತಿ ಅವರು ಡಿಸೆಂಬರ್ 10 ರಂದು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.