ಚಿಕ್ಕಮಗಳೂರು

ಭದ್ರಾ ಕಾಮಗಾರಿಗೆ ರೈತರಿಂದ ತಡೆ

Published On :

ಕ.ಪ್ರ.ವಾರ್ತೆ ,  ತರೀಕೆರೆ ,  ಡಿ. 31
ತಾಲೂಕಿಗೆ ಸಮಗ್ರ ಹಾಗೂ ಶಾಶ್ವತ ನೀರಾವರಿ ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಸಬೇಕೆಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಅಡ್ಡಿಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಮಾಳೂರು ದಿನ್ನೆ, ಗೌರವಾಧ್ಯಕ್ಷ ಓಂಕಾರಾಯ್ಯ, ಅಧ್ಯಕ್ಷ ಡಿ.ಸಿ. ಸುರೇಶ್, ಕಾರ್ಯಾಧ್ಯಕ್ಷ ಹಳೆಯೂರು ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸೊಕ್ಕೆ ನವೀನ್, ಪುಟ್ಟಸ್ವಾಮಿ, ಲಕ್ಷ್ಮಣ್, ಸಿದ್ದಪ್ಪ, ಜಯಕೃಷ್ಣಪ್ಪ, ಸೂರಪ್ಪಗೌಡ್ರು, ಪರಮೇಶ್ ಮತ್ತು ಹಳೆಯೂರು, ಚಾಕೋನಹಳ್ಳಿ, ಅಜ್ಜಂಪುರ, ಅತ್ತಿಮೊಗ್ಗೆ, ನಾರಾಯಣಪುರ, ಕಾಟಿನಗೆರೆ, ಸೊಕ್ಕೆ, ಮಾಕನಹಳ್ಳಿ, ಅಬ್ನಿನಹೊಳಲು, ಗಡೀಹಳ್ಳಿ, ಗೌರಾಪುರ ಮತ್ತು ಸುತ್ತಮತ್ತಲ ಗ್ರಾಮದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮಂಚೆ ಬೆಟ್ಟದಾವರೆಕೆರಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ವಿನಾಯಕ ಮಾಳೂರು ದಿನ್ನೆ ಮಾತನಾಡಿ, ತಾಲೂಕಿನ ರೈತರಿಗೆ ಅನ್ಯಾಯವಾಗಿದೆ, ಸರ್ಕಾರ ಅನೇಕ ಬಾರಿ ಮಾತುಕತೆ ನಡೆಸಿದರೂ ಅದರಂತೆ ನಡೆದುಕೊಂಡಿಲ್ಲ. ತಾಲೂಕಿಗೆ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದೆ. ತಾಲೂಕಿಗೆ ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ ಅವರು, ರೈತರಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಡಿ.ಸಿ. ಸುರೇಶ್ ಮಾತನಾಡಿ, ತಾಲೂಕಿಗೆ ಐದುವರೆ ಟಿಎಂಸಿ ನೀರಿನ ಹಕ್ಕನ್ನು ಕಾಯ್ದಿರಿಸಬೇಕು. ಆ ನೀರನ್ನು ಭದ್ರಾ ಜಲಾಶಯದಿಂದಲೇ ನೇರವಾಗಿ ಏತ ನೀರಾವರಿ ಮೂಲಕ ತಾಲೂಕಿನ ಎಲ್ಲ ಹಳ್ಳಿ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಜಮೀನು ಕಳೆದುಕೊಂಡ ರೈತರಿಗೆ ಎಕರೆಗೆ 30 ಲಕ್ಷ ಪುರಸಭೆ ವ್ಯಾಪ್ತಿಗೆ 40 ಲಕ್ಷ ಪರಿಹಾರ ನೀಡಬೇಕೆಂದು ಅಲ್ಲಿಯವರೆಗೂ ಕಾಮಗಾರಿ ಅಡ್ಡಿಪಡಿಸಲಾಗುವುದು ಎಂದು ತಿಳಿಸಿದರು.
ಗೌರವಾಧ್ಯಕ್ಷ ಗೌರಾಪುರದ ಓಂಕಾರಯ್ಯ, ಕಾರ್ಯಾಧ್ಯಕ್ಷ ಸೋಮಶೇಖರ್ ಹಳೆಯೂರು, ಪ್ರಧಾನ ಕಾರ್ಯದರ್ಶಿ ನವೀನ್, ಪುಟ್ಟಸ್ವಾಮಿ ಮತ್ತಿತರರು ಮಾತನಾಡಿದರು.
ಸಮೀಪದ ರಾಮನಾಯ್ಕನ ಕೆರೆ, ಬೆಟ್ಟದಾವರೆಕೆರೆ ಹಾಗೂ ಅಜ್ಜಂಪುರ ಈ ಮೂರು ಭಾಗದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ನೂರಾರು ರೈತರು, ಭದ್ರಾ ಕಾಮಗಾರಿ ಕಾರ್ಯಕ್ಕೆ ತಡೆ ಒಡ್ಡುವಲ್ಲಿ ಯಶಸ್ವಿಯಾದರು.
ಮಾತುಕತೆಗೆ ಆಹ್ವಾನ: ಕಾಮಗಾರಿ ಸ್ಥಳದಲ್ಲಿದ್ದ ಯೋಜನೆಯ ಸಹಾಯಕ ಅಭಿಯಂತರ ಪಾಂಡರಂಗ ಅವರು ಹಿರಿಯ ಅಧಿಕಾರಿಗಳೊಡನೆ ದೂರವಾಣಿ ಮೂಲಕ ಮಾತನಾಡಿ ರೈತ ಮುಖಂಡರೊಂದಿಗೆ ಜ. 2 ರಂದು ಈ ಬಗ್ಗೆ ಚರ್ಚಿಸಲು ರೈತ ಮುಖಂಡರ ಸಭೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಸಿ.ಸುರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.