ಚಿಕ್ಕಮಗಳೂರು

ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಹಾವುಗಳು!

Published On :

ಚಿಕ್ಕಮಗಳೂರು: ಹಾವುಗಳಿವೆ ಎಚ್ಚರಿಕೆ! ಮನೆಯ ಗೇಟಿನ  ಮುಂಭಾಗದಲ್ಲಿ ನಾಯಿಗಳಿವೆ ಎಚ್ಚರಿಕೆ ಎಂಬ ನಾಮಫಲಕ ನೋಡಿದ್ದೇವೆ. ಇದೇನು ಹಾವುಗಳಿವೆ ಎಚ್ಚರಿಕೆ ಎಂಬ ಪದ ಅಂದುಕೊಂಡಿರಾ, ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನಲ್ಲಿ ಅಲ್ಲಲ್ಲಿ ಈ ರೀತಿಯ ಬೋರ್ಡ್‌ಗಳು ಹಾಕುವ ಪರಿಸ್ಥಿತಿ ಎದುರಾಗಿದೆ.
ಭಯದಲ್ಲಿ ಜೀವನ: ಇಲ್ಲಿ ಹಾವುಗಳ ಕಾಟ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಲ್ಲಿರುವ ಕೆಲವೇ ಮನೆಗಳಲ್ಲಿ ವಾಸವಾಗಿರುವವರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಯಾವ ಕ್ಷಣದಲ್ಲಾದರೂ ಹಾವುಗಳು ಮನೆಯ ಒಳಗೆ ಬರಬಹುದೆಂಬ ಆತಂಕದಲ್ಲಿದ್ದಾರೆ.
 ಇದಕ್ಕೆ ಕಾರಣ, ಖಾಲಿ ಸೈಟಿನಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳು ದಟ್ಟವಾಗಿ ಬೆಳೆದಿರುವುದು ಹಾವುಗಳಿಗೆ ಆಶ್ರಯ ತಾಣವಾಗಿದೆ. ಚಿಕ್ಕ ಮಕ್ಕಳು ಮನೆಯ ಹೊರ ಭಾಗದಲ್ಲಿ ಆಟವಾಡಲು ಭಯಪಡುವಂತಾಗಿದೆ. ಇಷ್ಟೆ ಅಲ್ಲ, ರಾತ್ರಿ ವೇಳೆಯಲ್ಲಿ ಮನೆಗಳಿಂದ ಹೊರ ಹೋಗಲು ಆಗುತ್ತಿಲ್ಲ.
ಹೊರಗಿನವರು ಹೆಚ್ಚು ಮಂದಿ: ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಹೌಸಿಂಗ್ ಬೋರ್ಡ್‌ನ ಒಟ್ಟು 5 ಹಂತಗಳಲ್ಲಿ 1102 ಸೈಟ್‌ಗಳನ್ನು ನಿರ್ಮಾಣ ಮಾಡಿ, ಅವುಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗಿದೆ. ಮೂಲೆ ನಿವೇಶನಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲಾ ನಿವೇಶನಗಳು ಮಾರಾಟವಾಗಿವೆ.
ನಿವೇಶನ ಖರೀದಿ: ನಿವೇಶನಗಳನ್ನು ಖರೀದಿ ಮಾಡಿರುವವರ  ಪೈಕಿ ಹೆಚ್ಚಿನ ಮಂದಿ ಹೊರಗಿನವರು. ಅಂದರೆ, ಬೆಂಗಳೂರು, ಮೈಸೂರು ನಗರಗಳಲ್ಲಿ ವಾಸವಾಗಿರುವವರೇ ಹೆಚ್ಚು. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬಂದ ಜಾಹಿರಾತನ್ನು ನೋಡಿ ನಿವೇಶನ ಖರೀದಿ ಮಾಡಿದ್ದಾರೆ. 1102 ನಿವೇಶನಗಳ ಪೈಕಿ ಇಲ್ಲಿ ಮನೆಗಳು ನಿರ್ಮಾಣವಾಗಿರುವುದು ಸುಮಾರು 100 ಇರಬಹುದು. ಇನ್ನುಳಿದ 900 ಸೈಟ್‌ಗಳು ಖಾಲಿ ಇವೆ. ಇವುಗಳಲ್ಲಿ ಸುಮಾರು  500 ಮಂದಿ ಮಾಲೀಕರು ಹೊರಗಿನವರಾಗಿದ್ದು, ಅವರು ತಮ್ಮ ಸೈಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ವಿಷಜಂತುಗಳು: ಖಾಲಿ ಇರುವ ಸೈಟ್‌ಗಳಲ್ಲಿ ಗಿಡಗಂಟೆಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸುವ ಕೆಲಸವನ್ನು ಆಯಾ ನಿವೇಶನಗಳ ಮಾಲೀಕರು ಮಾಡಬೇಕು. ಆದರೆ, ಯಾರೂ ಸ್ವ ಇಚ್ಚೆಯಿಂದ ಈ ಕೆಲಸ ಮಾಡುತ್ತಿಲ್ಲ. ದಟ್ಟವಾಗಿ ಬೆಳೆದಿರುವ  ಗಿಡಗಂಟೆಗಳ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳು ನಿರ್ಮಾಣವಾಗಿದ್ದು, ಇವುಗಳಲ್ಲಿ ಹೆಚ್ಚಿನ ಪಾಲು ಸ್ಥಳೀರೆ. ಖಾಲಿ  ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆಗಳು ಹಾಗೂ ಅಲ್ಲಿ ವಾಸವಾಗಿರುವ ವಿಷಜಂತುಗಳು ನಿವಾಸಿಗರಿಗೆ ಕಿರಿಕಿರಿಯಾಗಿವೆ.
 ಸ್ವಚ್ಛಗೊಳಿಸುವಂತೆ ನೋಟಿಸ್: ಇತ್ತೀಚೆಗೆ ಚಿಕ್ಕಮಗಳೂರು ನಗರಸಭೆ ಹೌಸಿಂಗ್ ಬೋರ್ಡ್‌ನಲ್ಲಿರುವ ಖಾಲಿ ನಿವೇಶನಗಳ ಮಾಲೀಕರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಈಗ ಪತ್ತೆ ಹಚ್ಚಿರುವವರು ಸ್ಥಳೀಯರಲ್ಲ ಎಂಬ ವಿಷಯ ಗಮನಕ್ಕೆ ಬಂದಿದ್ದು, ದೂರದ ಊರುಗಳಲ್ಲಿ ವಾಸವಾಗಿರುವ ಇಲ್ಲಿನ ನಿವೇಶನಗಳ ಮಾಲೀಕರಿಗೆ ಸೈಟ್‌ಗಳ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸುವಂತೆ ಅಂಚೆಯ ಮೂಲಕ ನೋಟಿಸ್ ಕಳುಹಿಸುವ ಕೆಲಸ ಮಾಡಿದೆ. ಇದಕ್ಕೆ ನೀಡಿರುವ ಕಾಲಾವಕಾಶ ಮುಕ್ತಾಯಗೊಂಡಿದ್ದರಿಂದ ಸಂಬಂಧಪಟ್ಟ ನಿವೇಶನಗಳ ಕಂದಾಯದ ಜತೆಗೆ ತಲಾ 5 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತಿದೆ.
ದುಬಾರಿ ಬೆಲೆ: ಚಿಕ್ಕಮಗಳೂರು ನಗರದಲ್ಲಿ ನಿವೇಶನ ಖರೀದಿ ಮಾಡುವುದು ಸುಲುಭದ ಕೆಲಸವೇನಲ್ಲ. ಬಡವರು ಹಾಗೂ ಮಧ್ಯಮ ವರ್ಗದವರು ಖಾಲಿ ನಿವೇಶನ  ಖರೀದಿ ಮಾಡಲು  ಸಾಧ್ಯವಿಲ್ಲ. ನಗರಸಭೆಯಲ್ಲಿ ಖಾತೆಯಾಗಿರುವ ಸೈಟ್‌ಗಳ ಬೆಲೆ ಒಂದು  ಅಡಿಗೆ 1000 ರುಪಾಯಿ ಇದೆ. ಇನ್ನು ಹೃದಯ ಭಾಗದಲ್ಲಿ 5 ರಿಂದ 6 ಸಾವಿರ ರುಪಾಯಿ ಇದೆ. ಕಂದಾಯ ಭೂಮಿಯಲ್ಲಿರುವ ಸೈಟ್‌ಗಳು ದುಬಾರಿಯಾಗಿವೆ.
3 ಸಾವಿರ ಮನೆ: ಚಿಕ್ಕಮಗಳೂರು  ನಗರದ ವ್ಯಾಪ್ತಿ ವಿಸ್ತಾರಗೊಳ್ಳುತ್ತಿರುವುದರಿಂದ ಸೈಟ್‌ಗಳ ಬೆಲೆ ದಿನ ದಿನಕ್ಕೂ ಏರುತ್ತಲೇ ಹೋಗುತ್ತಿದೆ. ಹೊರ ವಲಯದಲ್ಲೂ ಖಾಲಿ ನಿವೇಶನಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ನಗರಸಭೆಯ 35 ವಾರ್ಡ್‌ಗಳ  ವ್ಯಾಪ್ತಿಯಲ್ಲಿ ಸುಮಾರು 18 ಸಾವಿರ ಖಾತೆಯನ್ನು  ಹೊಂದಿರುವ ನಿವೇಶನಗಳು ಇವೆ. ಇವುಗಳ ಜತೆಗೆ ಕಂದಾಯ ಭೂಮಿಯಲ್ಲಿ ಸುಮಾರು 3 ಸಾವಿರ ಮನೆಗಳಿವೆ. ಪರಿಸ್ಥಿತಿ ಹೀಗಿರುವಾಗ ಹೊರ ಜಿಲ್ಲೆಯವರು ಇಲ್ಲಿಗೆ ಬಂದು ಕೇಳಿದಷ್ಟು ಹಣವನ್ನು ನೀಡಿ ಸೈಟ್‌ಗಳನ್ನು ಖರೀದಿ ಮಾಡುತ್ತಿರುವುದು ಬಡವರ ಮತ್ತು ಮಧ್ಯಮ ವರ್ಗದ ಮೇಲೆ ದುಷ್ಪರಿಣಾಮ ಬೀರಿದೆ.
 ನಗರದ ಜನತೆಗೆ ಕಡಿಮೆ ಬೆಲೆಗೆ ಸೈಟ್ ಸಿಗುತ್ತಿಲ್ಲ. ಆದರೆ, ಕಡಿಮೆ ಬೆಲೆಗೆ ಖರೀದಿ ಮಾಡಿರುವ ಹೌಸಿಂಗ್ ಬೋರ್ಡ್‌ನ ನಿವೇಶನಗಳು ಪಾಳು ಬಿದ್ದಿವೆ. ಸರ್ಕಾರಿ ಸಂಸ್ಥೆಯಾದ  ಹೌಸಿಂಗ್ ಬೋರ್ಡ್‌ನಿಂದ ನಿವೇಶನ ಪಡೆದವರು ಇಂತಿಷ್ಟು ವರ್ಷದೊಳಗೆ ಮನೆಗಳನ್ನು ನಿರ್ಮಾಣ ಮಾಡಲೇಬೇಕೆಂದು ಕಡ್ಡಾಯ ಮಾಡಿದರೆ ಹೊರಗಿನವರು ಇಲ್ಲಿಗೆ ಬಂದು ಸೈಟ್  ಖರೀದಿ ಮಾಡುವುದಕ್ಕೆ ಕಡಿವಾಣ ಬೀಳಬಹುದು. ಇದರಿಂದ ಸ್ಥಳೀಯ ನಿವೇಶನ ರಹಿತರಿಗೆ ಅನುಕೂಲವಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.