ಚಿಕ್ಕಮಗಳೂರು

ಕೇಂದ್ರ ವರದಿ ಅನುಷ್ಠಾನಗೊಳಿಸಲಿ

Published On :

ಶೃಂಗೇರಿ: ಗೋರಖ್ ಸಿಂಗ್ ಸಮಿತಿ ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿ. ಆದ್ದರಿಂದ ಗೋರಖ್ ಸಿಂಗ್ ವರದಿ ಅನುಷ್ಠಾನಗೊಳಿಸಿವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಬಿ. ಚಂದ್ರೇಗೌಡ ತಿಳಿಸಿದರು.
ಪಟ್ಟಣದ ಸಂತೇ ಮೈದಾನದಲ್ಲಿ ಅಡಕೆ ಹಳದಿ ಎಲೆ ರೋಗ ಸಂತ್ರಸ್ತ ರೈತರಿಗಾಗಿ ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ಮೂರು ದಿನಗಳ ಕಾಲ ಆಯೋಜಿಸಿದ್ದ ಬೃಹತ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗೋರಖ್ ಸಿಂಗ್ ವರದಿ, ಸಾಲ ಮನ್ನಾ ವಿಷಯವನ್ನೇ ಚುನಾವಣಾ ಪ್ರನಾಳಿಕೆಯನ್ನಾಗಿ ಮಾಡಿಕೊಂಡು ಕಾಂಗ್ರೆಸ್ ಕಳೆದ ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದಿತು. ನಂತರ ರೈತರ ಸಾಲ ಮನ್ನಾ ಇಲ್ಲ. ವರದಿಯ ಅನುಷ್ಠಾನವೂ ಇಲ್ಲ. ಸುಳ್ಳು ಹೇಳಿ ರೈತರ ದಿಕ್ಕು ತಪ್ಪಿಸಿದರು. ಕೇಂದ್ರದ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ವೀರಪ್ಪ ಮೊಯಿಲಿ ಸುಳ್ಳು ಹೇಳಿ ರೈತರನ್ನು ವಂಚಿಸಿ ಹೋದರು. ಅವರಿಗಿರುವ ಸುಳ್ಳಿನ ಸರದಾರ ಎಂಬ ಬಿರುದು ಈ  ಸುಳ್ಳು ಭರವಸೆಯಿಂದ ನಿಜವಾಯಿತು ಎಂದರು.
ಆದೇಶ ಏಕೆ ಪಾಲಿಸುತ್ತಿಲ್ಲ: ಕೇಂದ್ರ ಸರ್ಕಾರ ಕಾವೇರಿ ಜಲವಿವಾದ ವಿಷಯದಲ್ಲಿ ತಮಿಳು ನಾಡಿಗೆ ನೀರು ಬಿಡುವಂತೆ, ಸುಪ್ರಿ ಕೋರ್ಟಿನ ಆದೇಶ ಪಾಲಿಸುವಂತೆ ಹೇಳಿತು. ಆದರೆ ಗೋರಖ್ ಸಿಂಗ್ ವರದಿ ಅನುಷ್ಠಾನದ ವಿಷಯದಲ್ಲಿ ಸುಂಪ್ರಿಂ ಕೋರ್ಟ್ ಆದೇಶ ಏಕೆ ಪಾಲಿಸುತ್ತಿಲ್ಲ. ರಾಜ್ಯದ ವಿಷಯದಲ್ಲಿ ತಾರತಮ್ಯ, ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ರೀತಿಯ ಧೋರಣೆ ಸಲ್ಲದು. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ ಕೂಡಲೇ ಗೋರಖ್ ಸಿಂಗ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ನಿರಂತರ ದೌರ್ಜನ್ಯ: ಕಾಂಗ್ರೆಸ್ ಆಡಳಿತವಿರುವ ರಾಜ್ಯದ ರಾಜದಾನಿ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ. ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತೆ. ಮಹಿಳಾ ಮುಖ್ಯಮಂತ್ರಿ, ಮಹಿಳಾ ಸ್ಪೀಕರ್, ಯುಪಿಎ ನಾಯಕಿ ಮಹಿಳೆ ಆದರೂ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ಲೇವಡಿ ಮಾಡಿದರು. ಏಲಕ್ಕಿ ಬೆಳೆಗಾರರ ಬದುಕು ಶೋಚನೀಯವಾಗಿದೆ. ಹಾಗೆಯೆ ಅಡಕೆ ಬೆಳೆಗಾರರು ತಲೆ ತಲಾಂತರದಿಂದ ಅಡಕೆ ಬೆಳೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಈಗ ಅಡಕೆ ಹಳದಿ ಎಲೆ ರೋಗದಿಂದ ವಿಪರೀತ ಸಾಲದಿಂದ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಅವರ ಸಾಲ ಮನ್ನಾ ಮಾಡಬೇಕು. ಗೋರಖ್ ಸಿಂಗ್ ವರದಿ ಚರ್ಚೆ ಕಾಂಗ್ರೆಸ್ ಪಕ್ಷದ ಕೊಡೆಗೆಯಾಗಿದೆ. ಕೇಂದ್ರದಲ್ಲಿ ಹಗರಣಗಳ ಸರಮಾಲೆಯೇ ಇದೆ. ಜೈಲಿಗೂ ಹೋಗಿದ್ದಾರೆ. ಸುಳ್ಳು ಹೇಳಿ ಚುನಾವಣೆ ಗೆಲ್ಲುವ ಪ್ರಯತ್ನ ಬೇಡ. ಸಾಧನೆಯ ಆದಾರದ ಮೇಲೆ ಮತ ಪಡೆದುಕೊಳ್ಳಬೇಕು ಎಂದರು.
ಕಾನೂನನ್ನು ಗೌರವಿಸಿ: ಕಾಂಗ್ರೆಸ್‌ನವರು ಪಾದಯಾತ್ರೆ ನಡೆಸಿದರು. ಅದು ಯಾವ ಪುರುಷಾರ್ಥಕ್ಕಾಗಿ. ಅದೇ ಹಳಸಿದ ಹೊಸ ಮುಖಗಳು. ಅದೇ ವಿಷಯ. ಕೇಂದ್ರದಲ್ಲಿ ಅವರು ಮಾಡುತ್ತಿರುವುದಾದರೂ ಏನು. ಪ್ರತಿಯೊಬ್ಬರು ಈ ನೆಲದ ಕಾನೂನನ್ನು ಗೌರವಿಸಬೇಕು. ಹೊಲಸು ರಾಜಕೀಯ ಬೇಡ. ಜನತಂತ್ರ ಉಳಿಸುವ ಮೌಲ್ಯಾಧಾರಿತ ರಾಜಕಾರಣ ಮಾಡಬೇಕಿದೆ. ಜನಂತ್ರದ ಮೌಲ್ಯಗಳನ್ನು ಕಾಪಾಡುವ ಮತದಾರ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕೇಳುವುದು ಪ್ರತಿಯೊಬ್ಬರ ಹಕ್ಕು. ಹಕ್ಕು ಭಾದ್ಯತೆಗಳನ್ನು ಜನರಿಗೆ ನೀಡಬೇಕು. ನಾವು ಕೇವಲ ಜನಪ್ರತಿನಿದಿಗಳು ಎಂದರು.
ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್, ಬಿಜೆಪಿ ಕ್ಷೇತ್ರಾಧ್ಯಕ್ಷ ನೀಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೆಟ್ಟಿಗಳ್ಳಿ ರಾಮಸ್ವಾಮಿ, ಎನ್‌ಆರ್ ಪುರ ತಾಲೂಕು ಬಿಜೆಪಿ ಅಧ್ಯಕ್ಷ ಸಂಪತ್, ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಮಹಾಬಲ, ಸತೀಶ್, ಮಾವಿನಕಾಡು ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ನಯನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರಾಶರ ಸ್ವಾಗತಿಸಿದರು. ಚೇತನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.