ಬೀರೂರಿನಲ್ಲಿ ಬರಿದಾದ ಅಂತರ್ಜಲ...!
ಬೀರೂರು: ಕ್ಷೀಣಿಸುತ್ತಿರುವ ಮಳೆ, ಕುಸಿಯುತ್ತಿರುವ ಅಂತರ್ಜಲ, ಬತ್ತಿಹೋದ ಕೆರೆಕಟ್ಟೆಗಳು, ಕುಂಠಿತಗೊಂಡ ಕೃಷಿ ಚಟುವಟಿಕೆ, ಬರಡಾಗುತ್ತಿರುವ ಕೃಷಿ ಭೂಮಿ, ಕೈಕಟ್ಟಿ ಕುಳಿತ ಕೃಷಿ ಕಾರ್ಮಿಕರು, ಬಿಂದಿಗೆಗಳೊಂದಿಗೆ ಜೀವ ಜಲಕ್ಕಾಗಿ ಮಹಿಳೆಯರ ಅಲೆದಾಟ...
ಇದು ಬಯಲು ಸೀಮೆಯ ಬೀರೂರು ಹೋಬಳಿಯ ನೈಜ ಚಿತ್ರಣ. ಬೀರೂರು ತಾಲೂಕಿನ ದೊಡ್ಡ ಹೋಬಳಿ ಕೇಂದ್ರ. ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚಿನ ಗ್ರಾಮಗಳಿವೆ. ಈ ಭಾಗದ ರೈತರು ಮಳೆ ಆಶ್ರಿತ ಕೃಷಿ ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಾರೆ. ಉತ್ಕೃಷ್ಟ ಕಪ್ಪು ಭೂಮಿಯಲ್ಲಿ ಅಡಕೆ, ಬಾಳೆ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ, ಎಳ್ಳು, ರಾಗಿ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ವರುಣನ ಕೃಪೆ ಇದ್ದರೆ ಉತ್ತಮ ಕೃಷಿ ಚಟುವಟಿಕೆ ಸಾಧ್ಯ. ಮಳೆ ಕೈ ಕೊಟ್ಟರೆ ಇವರ ಬದುಕು ಶೋಚನೀಯ.
ಕನಿಷ್ಠ ಮಳೆ: ಹಿಂಗಾರು ಮತ್ತು ಮುಂಗಾರು ಮಳೆ ಪ್ರಮಾಣ ಕ್ಷೀಣಿಸುತ್ತಿದ್ದು, ಕಳೆದ ವರ್ಷ ಕನಿಷ್ಠ ಪ್ರಮಾಣದ ಮಳೆಯೂ ಆಗದೆ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಮಾಡಿ ತ್ತನೆ ಬೀಜ, ಗೊಬ್ಬರ ಖರೀದಿಸಿದ್ದ ಬೆಳೆಗಳಲ್ಲಿ ಬಹುತೇಕ ನಾಶವಾಗಿ ರೈತರು ಕಂಗೆಡುವಂತಾಗಿ ಸಾಲ ಮರುಪಾವತಿ ಬಗ್ಗೆ ಚಿಂತೆಗೀಡು ಮಾಡಿದೆ.
ಕೆರೆಕಟ್ಟೆಗಳು ಖಾಲಿ ಖಾಲಿ: ಬೀರೂರು ಸುತ್ತಮುತ್ತಲಿನ ಜೋಡಿ ತಿಮ್ಮಾಪುರ, ಹೋರಿತಿಮ್ಮನಹಳ್ಳಿ, ದೊಡ್ಡಘಟ್ಟ, ಕಾರೇಹಳ್ಳಿ, ದೋಗೇಹಳ್ಳಿ, ಹುಲ್ಲೇಹಳ್ಳಿ, ಎರೇಹಳ್ಳಿ ಭಾಗದ ಕೆರೆಕಟ್ಟೆಗಳೆಲ್ಲಾ ಸಂಪೂರ್ಣ ಬತ್ತಿ ಹೋಗಿದ್ದು ಜಾನುವಾರುಗಳು, ಪಶು ಪಕ್ಷಿ ಸಂಕುಲ ಜೀವ ಜಲಕ್ಕಾಗಿ ಮೂಕ ವೇದನೆ ಅನುಭವಿಸುವಂತಾಗಿದೆ. ರೈತರು ತಮ್ಮ ಜಾನುವಾರುಗಳ ಸಂರಕ್ಷಣೆ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಅಂತರ್ಜಲ ಕುಸಿತ: ಬೀರೂರು ಹೋಬಳಿಯಲ್ಲಿ ಸಂಪೂರ್ಣವಾಗಿ ಅಂತರ್ಜಲ ಕುಸಿದಿದ್ದು, 800 ರಿಂದ 1 ಸಾವಿರ ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ದೊರಕುತ್ತಿಲ್ಲ.
ಕಾಡುಗಳು ನಾಶ: ಭೂಮಿಯ ಒಡಲು ಬರಿದಾಗಿದೆ. ಖನಿಜ ಸಂಪತ್ತು, ಜಲಸಂವೃದ್ಧಿ, ಸಸ್ಯ ಸಂವೃದ್ಧಿ ಮತ್ತು ಉತ್ತಮ ಕೃಷಿ ಚಟುವಟಿಕೆಗೆ ಪ್ರಸಿದ್ಧವಾಗಿದ್ದ ಬೀರೂರು ಹೋಬಳಿ ಮಾನವನ ದುರಾಸೆಯಿಂದ ಸುತ್ತಲಿನ ಕಾಡುಗಳು ನಾಶವಾಗಿ ಪಶು ಪಕ್ಷಿಗಳ ಅರಣ್ಯರೋಧನ ಮನುಕುಲಕ್ಕೆ ಶಾಪವಾಗಿ ಪರಿಣಮಿಸಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಯೋಜನೆ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಕಡೂರು ಬೀರೂರು ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಭದ್ರಾ ಯೋಜನೆ ಕಾಮಗಾರಿ ಸದ್ಯಕ್ಕಂತೂ ಜಾರಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಜಲಕ್ಷಾಮದಿಂದ ತತ್ತರಿಸಿರುವ ಜನರು ಭದ್ರಾ ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾಯುವ ಸ್ಥಿತಿ ಎದುರಾಗಿದೆ. ನರಿ ಕೂಗು ಗಿರಿಗೆ ಮುಟ್ಟೀತೇ ಎಂಬಂತೆ ಬಡವರ ಕೂಗು ಆಳುವ ಸರ್ಕಾರಕ್ಕಾಗಲೀ ಜನಪ್ರತಿನಿಧಿಗಳಿಗಾಗಲೀ ಅರ್ಥವಾಗದಿರುವುದು ಮತದಾರ ದುರಂತವೇ ಸರಿ. ಜಿಲ್ಲೆಯಲ್ಲಿ ಪಂಚನದಿಗಳಿದ್ದರೂ ಸಮುದ್ರಕ್ಕೆ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತಾಗಿದೆ.
-ಕೆ.ಎಸ್. ಪ್ರಸನ್ನ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

