ರಸ್ತೆ ಕಾಂಕ್ರಿಟೀಕರಣ, ಅಗಲೀಕರಣ ಕುರಿತು ಸಭೆ
ನರಸಿಂಹರಾಜಪುರ: ಬಾಳೆಹೊನ್ನೂರು ಪಟ್ಟಣದ ರಸ್ತೆ ಕಾಂಕ್ರಿಟೀಕರಣ ಮತ್ತು ರಸ್ತೆ ಅಗಲೀಕರಣ ಕುರಿತು ಬಾಳೆಹೊನ್ನೂರು ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಸಚಿವ ಡಿ.ಎನ್. ಜೀವರಾಜ್ ಅಧ್ಯಕ್ಷತೆ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಬಾಳೆಹೊನ್ನೂರು ಪಟ್ಟಣದ ವರ್ತಕರು, ಜನಪ್ರತಿನಿಧಿಗಳು ಹಾಗೂ ವರ್ತಕರು ಪಾಲ್ಗೊಂಡು ಸಲಹೆ ನೀಡಿದರು.
ಮುಖ್ಯವಾಗಿ ಬಾಳೆಹೊನ್ನೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರಿಂದ ಜೇಸಿ ವೃತ್ತದವರೆಗೆ ರಸ್ತೆ ಮಧ್ಯ ಭಾಗದಿಂದ 33 ಅಡಿಗಳಷ್ಟು ಎರಡೂ ಕಡೆಗಳಲ್ಲಿ ವಿಸ್ತರಿಸಿ ಚರಂಡಿ, ಫುಟ್ಪಾತ್ ನಿರ್ಮಿಸಲು ಸಭೆ ಒಪ್ಪಿಗೆ ಸೂಚಿಸಿತು. ಆದರೆ, ಅಲ್ಲಿಂದ ರೋಟರಿ ವೃತ್ತದವರೆಗೆ ಕೆಳಗಿನ ಪೇಟೆಯಲ್ಲಿ ಮಾತ್ರ ರಸ್ತೆಯ ಮಧ್ಯ ಭಾಗದಿಂದ ಎರಡೂ ಬದಿಯಲ್ಲಿ 28 ಅಡಿಗಳಷ್ಟು ಮಾತ್ರ ವಿಸ್ತರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಕೆಳಗಿನ ಪೇಟೆಯ ಅನೇಕರು 25 ಅಡಿ ಮಾತ್ರ ವಿಸ್ತರಣೆ ಮಾಡಿದರೆ ಸಾಕು ಎಂದು ಸಲಹೆ ನೀಡಿದರು. ಈ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಸ್ವ ಹಿತಾಸಕ್ತಿ ಇಲ್ಲ -ಜೀವರಾಜ್: ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಸಭೆಯಲ್ಲಿ ಮಾತನಾಡಿ, ರಸ್ತೆ ಅಗಲೀಕರಣದಿಂದ ನನಗೆ ವೈಯಕ್ತಿಕವಾಗಿ ಲಾಭವೇನು ಇಲ್ಲ. ಲೋಕೋಪಯೋಗಿ ಇಲಾಖೆಯ ಸುತ್ತೋಲೆಯಂತೆ ರಸ್ತೆಯ ನಡು ಭಾಗದಿಂದ ಎರಡೂ ಕಡೆಗಳಲ್ಲಿ 69 ಅಡಿಯಷ್ಟು ವಿಸ್ತರಣೆ ಅನಿವಾರ್ಯವಾಗಿದೆ. ಈಗಾಗಲೇ ಕೊಪ್ಪ, ನರಸಿಂಹರಾಜಪುರ ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆ ಮಾಡಿ ಕಾಂಕ್ರಿಟೀಕರಣ ಹಾಕಿದ ಪರಿಣಾಮವಾಗಿ ಅಂಗಡಿಗಳ ಬಾಡಿಗೆ, ವ್ಯಾಪಾರ ವಹಿವಾಟು ಹೆಚ್ಚಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸುಗಮವಾಗಿದೆ. ಪಟ್ಟಣದಲ್ಲಿ ರಸ್ತೆ ಅಗಲೀಕರಣದಿಂದ ಪಟ್ಟಣದವರಿಗೆ ಲಾಭ ಜಾಸ್ತಿಯಾಗಲಿದೆ ಎಂದರು.
ರು. 23 ಕೋಟಿ ಬಿಡುಗಡೆ: ಆಲ್ದೂರು, ಬಾಳೆಹೊನ್ನೂರು ಮಾರ್ಗದ ಶೃಂಗೇರಿ ರಸ್ತೆ ಅಭಿವೃದ್ಧಿಗೆ ರು. 23 ಕೋಟಿ ಬಿಡುಗಡೆಯಾಗಿದೆ ಎಂದು ಸಚಿವ ಡಿ.ಎನ್. ಜೀವರಾಜ್ ಈ ಸಂದರ್ಭದಲ್ಲಿ ತಿಳಿಸಿದರು. ಈ ರಸ್ತೆಯಲ್ಲಿ ಬರುವ ತಿರುವುಗಳನ್ನು ನೇರಗೊಳಿಸಲಾಗುತ್ತದೆ. ಕಾಮಗಾರಿ ಶೀಘ್ರ ಪ್ರಾರಂಭಗೊಳ್ಳಲಿದೆ. ಈ ರಸ್ತೆ ಕಾಮಗಾರಿ ವೇಳೆ ಬಾಳೆಹೊನ್ನೂರು ಪಟ್ಟಣದಲ್ಲಿ ಮಳಿಗೆ ಕಳೆದುಕೊಳ್ಳುವ ವರ್ತಕರಿಗೆ ಪಟ್ಟಣದ ಬೇರೆ ಕಡೆಗಳಲ್ಲಿ ಮಳಿಗೆ ನಿರ್ಮಿಸುವ ಕುರಿತು ಬಿ. ಕಣಬೂರು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಮ್ಮದ್ ಇಫ್ತಿಕರ್ ಆದಿಲ್, ಬಿಜೆಪಿ ಮುಖಂಡ ವೆನಿಲ್ಲಾ ಭಾಸ್ಕರ್, ತಾಲೂಕು ಪಂಚಾಯ್ತಿ ಅದ್ಯಕ್ಷ ಜೆ.ಜ. ನಾಗರಾಜ್, ಬಿ. ಕಣಬೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಮೀದಾ ಭಾನು, ಮುಖಂಡರಾದ ಹೂವಮ್ಮ, ಕೆ.ಕೆ. ವೆಂಕಟೇಶ್, ಉಮಾ ಬೀಮಯ್ಯ, ಎಂ.ಎಸ್. ಚೆನ್ನಕೇಶವ, ಮಧುಸೂಧನ್, ಎಂ.ಎಸ್. ಯಶವಂತ್, ಮಹಮ್ಮದ್ ಹನೀಫ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಂಗನಾಥ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

