ವ್ಯಾಪಾರಾಭಿವೃದ್ಧಿ ಯೋಜನೆ ಅಳವಡಿಸಿಕೊಳ್ಳಿ
ಚಿಕ್ಕಮಗಳೂರು: ಸಹಕಾರ ಸಂಘಗಳು ಕೇವಲ ಕೃಷಿ ಸಾಲ ವಿತರಣೆ, ಪಡಿತರ ವಿತರಣೆಯಿಂದ ಲಾಭಗಳಿಸಲು ಸಾಧ್ಯವಿಲ್ಲ. ವ್ಯಾಪಾರಾಭಿವೃದ್ಧಿ ಯೋಜನೆ ಅಳವಡಿಸಿಕೊಂಡು ಇತರೆ ಚಟುವಟಿಕೆಗಳನ್ನು ನಡೆಸಿ ಅಭಿವೃದ್ಧಿ ಸಾಧಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ರಾಜಶೇಖರ್ ಕರೆ ನೀಡಿದ್ದಾರೆ.
ವಿಶೇಷ ತರಬೇತಿ: ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಚಿಕ್ಕಮಗಳೂರು ಉಪ ವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪುನಶ್ಚೇತನದಡಿ ಸಂಪನ್ಮೂಲ ಕ್ರೂಡೀಕರಣ, ಲಾಭದಾಯಕ ವಿನಿಯೋಗ ಮತ್ತು ಆರ್ಥಿಕ ವ್ಯವಹಾರದ ಕೌಶಲ್ಯದ ಬಲವರ್ಧನೆ ಕುರಿತ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ನೀಡಲು ಬದ್ದ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಕೊಂಡಿದ್ದು, ಈಗಾಗಲೇ ಆಲ್ದೂರು ಮತ್ತು ಶೃಂಗೇರಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೋರ್ ಬ್ಯಾಂಕಿಂಗ್ನಲ್ಲಿ ಪಾಲ್ಗೊಂಡು ಶೇ. 100 ರಷ್ಟು ವಸೂಲಾತಿ ಸಾಧಿಸಬೇಕು. ಬ್ಯಾಂಕಿನಲ್ಲಿ 248.84 ಕೋಟಿ ರು. ಠೇವಣಿ ಸಂಗ್ರಹಿಸಿದ್ದು, ರೈತರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದವಾಗಿದೆ ಎಂದರು.
ಬ್ಯಾಂಕುಗಳಿಗೆ ಪೈಪೋಟಿ: ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ ಮಾತನಾಡಿ, ಇಂದು ಹಳ್ಳಿಗಳಲ್ಲಿ ಖಾಸಗಿ ಬ್ಯಾಂಕುಗಳು ವ್ಯವಹಾರವನ್ನು ನಡೆಸುವ ಅವಕಾಶವನ್ನು ಪಾರ್ಲಿಮೆಂಟಿನಲ್ಲಿ ನೀಡಲಾಗುತ್ತಿದೆ. ಖಾಸಗಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಪನ್ಮೂಲವನ್ನು ಕ್ರೂಡೀಕರಿಸಿಕೊಂಡು ಲಾಭದಾಯಕವಾಗಿ ವಿನಿಯೋಗಿಸಬೇಕು, ಈ ನಿಟ್ಟಿನಲ್ಲಿ ವೈದ್ಯನಾಥನ್ ವರದಿ ಪುನಶ್ಚೇನದಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಹೇಳಿದರು.
ಸಹಾಯಧನ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿ, ತರಬೇತಿಗೆ ವಯಸ್ಸಿನ ಇತಿಮಿತಿ ಇಲ್ಲ. ಹೊಸ ಆವಿಷ್ಕಾರಗಳು ನಿಯಮಗಳು ಬದಲಾಗುತ್ತಿದ್ದು, ಪ್ರತಿದಿನ ಕಲಿಯುವ ಅಗತ್ಯ ಇದೆ. ಕಳೆದ ಸಾಲಿನಲ್ಲಿ ನಷ್ಟದಲ್ಲಿದ್ದ ಸಹಕಾರ ಸಂಘಗಳು ವೈದ್ಯನಾಥನ್ ವರದಿ ಪುನಶ್ಚೇತನದಡಿ ಸಹಾಯಧನ ಪಡೆದು ಲಾಭದಾಯಕವಾಗಿ ಕಾರ್ಯನಿವಂಹಿಸುತ್ತಿವೆ, ಸಾಲ ಪಡೆದ ರೈತರು ಅದನ್ನು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಂಡು ಮರುಪಾವತಿ ಮಾಡಿದರೆ ಸಂಘಗಳು ಲಾಭ ಗಳಿಸುತ್ತವೆ ಎಂದರು.
ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಾ.ಎಚ್.ಆರ್. ಕೃಷ್ಣಯ್ಯಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪುನಶ್ಚೇತನದಡಿ ಸಂಪನ್ಮೂಲ ಕ್ರೂಡೀಕರಣ, ಲಾಭದಾಯಕ ವಿನಿಯೋಗ ಮತ್ತು ಆರ್ಥಿಕ ವ್ಯವಹಾರದ ಕೌಶಲ್ಯದ ಬಲವರ್ಧನೆ ಬಗ್ಗೆ ಉಪನ್ಯಾಸ ನೀಡಿದರು. ನಬಾರ್ಡ್ನ ಎಜಿಎಂ ಅನುರಾಧ ನರಹರಿ ಅವರು ಪ್ಯಾಕ್ಸ್ಗಳಿಗೆ ನಬಾರ್ಡ್ ಯೋಜನೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ಆಶಾ, ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎಂ. ಶಿವಕುಮಾರಸ್ವಾಮಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ರಂಗಸ್ವಾಮಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಯು.ಟಿ. ನಾಗರಾಜ್, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಎಸ್.ವಿ. ಬಸವರಾಜಪ್ಪ, ತರೀಕೆರೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಪಿ. ಕುಮಾರ್, ಡಿಸಿಸಿ ಬ್ಯಾಂಕಿನ ವಸೂಲಾತಿ ಅಧಿಕಾರಿ ಜಿ. ವಿಜಯಕುಮಾರ್ ಉಪಸ್ಥಿತರಿದ್ದರು.
ಎಸ್.ವಿ. ಬಸವರಾಜಪ್ಪ ಸ್ವಾಗತಿಸಿದರು. ಎಚ್.ಡಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

