ಮಂತ್ರಿಗಳಿಂದ ಶಾಸಕರವರೆಗೆ ಜೈಲುದರ್ಶನ ಸಾಧನೆ
ಆಲ್ದೂರು: ಬಿಜೆಪಿ, ಭ್ರಷ್ಟಾಚಾರ ಸೇರಿದಂತೆ ಹಲವು ಹಗರಣಗಳಲ್ಲಿ ಭಾಗಿಯಾಗಿ ಮತದಾರರಲ್ಲಿ ಮತ ಕೇಳುವ ಯೋಗ್ಯತೆ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ನಾಯಕತ್ವದ ಕೊರತೆಯಿಂದ ಗೊಂದಲದ ಗೂಡಾಗಿದೆ. ಕೆಜೆಪಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಣ್ಣ ಹೇಳಿದ್ದಾರೆ.
ಇಲ್ಲಿನ ಮುಸ್ಲಿಂ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆದ ಆಲ್ದೂರು, ವಸ್ತಾರೆ, ಅಂಬಳೆ, ಆವುತಿ ಪ್ರದೇಶಗಳ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಆಡಳಿತದಲ್ಲಿ ಮೂರು ಜನ ಮುಖ್ಯಮಂತ್ರಿಯಾಗಿ ನಾಯಕತ್ವದ ಕಚ್ಚಾಟ ತೋರಿಸಿದ್ದಾರೆ. ಮಂತ್ರಿಗಳಿಂದ ಶಾಸಕರವರೆಗೆ ಜೈಲುದರ್ಶನ ಮಾಡಿದ್ದು ಮಹಾನ್ ಸಾಧನೆಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳೆಹೊಡೆದು ಸ್ವ ಅಭಿವೃದ್ಧಿ ಸಾಧಿಸಿದ್ದಾರೆ. ಜನರ ಸಮಸ್ಯೆಗಳನ್ನು ಕಡೆಗಣಿಸಿ ರೆಸಾರ್ಟ್ ರಾಜಕಾರಣದ ಸಂಸ್ಕೃತಿ ಹುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕೆ ಮಾದರಿ: ಜೆಡಿಎಸ್ ಅಧಿಕಾರದಲ್ಲಿದ್ದಾಗ ದೇಶಕ್ಕೆ ಮಾದರಿಯಾಗಬಲ್ಲ ಯೋಜನೆಗಳನ್ನು ರೂಪಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಿಶ್ವಾಸವನ್ನು ಪಡೆಯಲಾಗಿತ್ತು. ಪ್ರಧಾನಿಯಾಗಿದ್ದ ಹೆಚ್.ಡಿ. ದೇವೇಗೌಡ ಅವರು ಅಭಿವೃದ್ಧಿಪರ ಚಿಂತನೆ ಮಾಡಿ ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿದ್ದರು. ರೈತರಿಗೆ ಕೆ.ಎಂ.ಎಫ್. ಸ್ಥಾಪನೆಯ ಮೂಲಕ ಹೆಚ್ಚಿನ ಸಹಕಾರ ನೀಡಿದ್ದರು. ಮತ್ತೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲ ಮನ್ನಾ ಮಾಡಿ, ಜನರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಘೋಷಣೆ ಮಾಡುವುದು ಬಾಕಿ: ಆಲ್ದೂರು ಬ್ಲಾಕ್ ಅಧ್ಯಕ್ಷ ರಘು ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಸದೃಢವಾಗಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದು, ಅಭ್ಯರ್ಥಿಯನ್ನು ಘೋಷಣೆ ಮಾಡುವುದಷ್ಟೇ ಬಾಕಿ ಉಳಿದಿದೆ. ಪಕ್ಷ ಯಾವುದೇ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾರ್ಯಾಧ್ಯಕ್ಷ ಸುರೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಉಮಾಪತಿ, ಎಸ್.ಸಿ.ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಹಂಪಯ್ಯ, ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣಗೌಡ, ಮುಖಂಡರುಗಳಾದ ಕೃಷ್ಣೇಗೌಡ, ಲಕ್ಷ್ಮಣ್ಗೌಡ, ಸುರೇಶ್, ಜಾಕೀರ್ ಹುಸೇನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

