ಮಂಜೂರಿಗಿಂತ ತಿರಸ್ಕೃತ ಅರ್ಜಿ ಹೆಚ್ಚು
ಚಿಕ್ಕಮಗಳೂರು: ಅರಣ್ಯ ಹಕ್ಕು ಕಾಯ್ದೆ- 2006.
- ಇದು, ಅತಿ ಹೆಚ್ಚು ಮಲೆನಾಡು ಪ್ರದೇಶವನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿದೆ.
ಈ ಕಾಯ್ದೆ ದೇಶದಲ್ಲಿ ಜಾರಿಗೆ ಬಂದ ಎರಡು ವರ್ಷಗಳ ನಂತರದಲ್ಲಿ ಅಂದರೆ 2008ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಕಾಯ್ದೆ ಜಾರಿಗೆ ಬಂದಿತು. ವರುಷಗಳು ನಾಲ್ಕು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆ ಹಾಗೂ ಈ ಕಾಯ್ದೆಯ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಈ ವರೆಗಿನ ಪ್ರಗತಿಯ ಪಕ್ಷಿ ನೋಟ ಹೇಳುತ್ತಿದೆ.
ಮೂರು ತಲೆಮಾರು ಇರಬೇಕು: ಅರಣ್ಯದಲ್ಲಿ ಪರಿಶಿಷ್ಟ ಪಂಗಡದವರು ವಾಸವಾಗಿದ್ದು, ಅವರು ಅಲ್ಲಿನ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೆ, ಅವರಿಗೆ ಆ ಭೂಮಿಯ ಮಾಲೀಕತ್ವವನ್ನು ನೀಡಲು ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ- 2006ರಲ್ಲಿ ಜಾರಿಗೆ ತಂದಿತು. ಈ ಕಾರ್ಯಕ್ರಮವನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಯಿತು. ಇದರ ಪ್ರಯೋಜನ ಪಡೆಯಬೇಕಾದರೆ ಅರಣ್ಯದಲ್ಲಿ ವಾಸವಾಗಿರುವ ಬಗ್ಗೆ ನಿಖರವಾದ ದಾಖಲೆಗಳು ನೀಡಬೇಕು. ಕನಿಷ್ಠ ಮೂರು ತಲೆಮಾರಿನವರು ಆ ಪ್ರದೇಶದಲ್ಲಿ ವಾಸವಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಅರ್ಹತೆ ಇಲ್ಲದವರಿಗೆ ಭೂ ಮಂಜೂರಾತಿ ಮಾಡಲು ಅವಕಾಶ ಇರುವುದಿಲ್ಲ.
ಆದರೆ, ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಇಲ್ಲದೆ ಬಹಳಷ್ಟು ಇತರೆ ಜನರು, ಅಂದರೆ, ಪರಿಶಿಷ್ಟ ಪಂಗಡದವರು ಹೊರತು ಪಡಿಸಿ, ಪರಿಶಿಷ್ಟ ಜಾತಿ ಸೇರಿದಂತೆ ಇತರೆ ವರ್ಗದವರು ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. 2008 ರಿಂದ 2013ರ ಜನವರಿಗೆ ಅಂತ್ಯದವರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂದ ಅರ್ಜಿಗಳ ಸಂಖ್ಯೆ 17,927. ಇವುಗಳ ತಿರಸ್ಕೃತಗೊಂಡ ಅರ್ಜಿಗಳು 16,210. ಅಂದರೆ, ಮಂಜೂರಾತಿ ಪಡೆದ ಪ್ರಕರಣಗಳ ಸಂಖ್ಯೆ ಕೇವಲ 1,713 ಮಾತ್ರ. ಹೀಗೆ ಮಂಜೂರಾತಿ ಪಡೆದವರು ಪರಿಶಿಷ್ಟ ಪಂಗಡದವರಾಗಿದ್ದಾರೆ.
ಬೇರೆ ಅರ್ಜಿಗಳೇ ಅಧಿಕ: ಇದು, ಪರಿಶಿಷ್ಟ ಪಂಗಡದವರಿಗಾಗಿ ಜಾರಿಗೆ ತಂದಿರುವ ಕಾಯ್ದೆ. ಆದರೆ, ಇದರ ಸೌಲಭ್ಯವನ್ನು ಪಡೆಯಲು ಇತರೆ ಜನಾಂಗದವರು ಸಹ ಅರ್ಜಿ ಸಲ್ಲಿಸಿದ್ದಾರೆ. ಭೂ ಮಂಜೂರಾತಿಗಾಗಿ ಬಂದ 17,927 ಅರ್ಜಿಗಳಲ್ಲಿ, ಪರಿಶಿಷ್ಟ ಪಂಗಡವರ ಅರ್ಜಿಗಳು 2,704 ಮಾತ್ರ, ಇನ್ನುಳಿದ ಅರ್ಜಿಗಳು ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯಕ್ಕೆ ಸೇರಿದ್ದು.
ಭೂ ಮಂಜೂರಾತಿಗೆ ಬಂದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ (ಡಿಎಲ್ಸಿ) ಹಾಗೂ ಉಪ ವಿಭಾಗಮಟ್ಟದ ಅರಣ್ಯ ಹಕ್ಕು ಸಮಿತಿ (ಎಸ್ಡಿಎಲ್ಸಿ)ಯ ಮುಂದಿಟ್ಟು, ದಾಖಲೆಗಳನ್ನು ಪರಿಶೀಲಿಸಿ ಬಳಿಕ ಹಕ್ಕು ಪತ್ರಕ್ಕಾಗಿ ಮಂಜೂರಾತಿ ನೀಡಲಾಗುವುದು. ಪರಿಶಿಷ್ಟ ಪಂಗಡಕ್ಕೆ ಸೇರಿದವರಿಂದ ಬಂದ 2,704 ಅರ್ಜಿಗಳಲ್ಲಿ ಮಂಜೂರಾತಿಗೆ ಅರ್ಹವಾಗಿದ್ದು 1,713 ಅರ್ಜಿಗಳು ಮಾತ್ರ. ಸಮರ್ಪಕವಾದ ದಾಖಲೆ ಹಾಗೂ ಇನ್ನು ಕೆಲವು ಭೂಮಿ ಕಂದಾಯ ಇಲಾಖೆಗೆ ಸೇರಿರುವುದರಿಂದ ಪರಿಶಿಷ್ಟ ಪಂಗಡದವರ 991 ಅರ್ಜಿಗಳನ್ನು ಸಹ ತಿರಸ್ಕಾರ ಮಾಡಲಾಗಿದೆ.
ಅತಿ ಹೆಚ್ಚು ಮಲೆನಾಡು ಪ್ರದೇಶವನ್ನು ಹೊಂದಿರುವ ಜಿಲ್ಲೆಯ ಐದು ತಾಲೂಕುಗಳ ಪೈಕಿ ಅರಣ್ಯ ಹಕ್ಕು ಕಾಯ್ದೆಯ ಹೆಚ್ಚು ಸವಲತ್ತು ಪಡೆದ ತಾಲೂಕು ಮೂಡಿಗೆರೆ. ಆದರೆ, ಅತಿ ಹೆಚ್ಚು ಭೂ ಮಂಜೂರಾತಿ ಪಡೆದ ತಾಲೂಕು ಕೊಪ್ಪ.
ಚಿಕ್ಕಮಗಳೂರು ತಾಲೂಕಿನ 59, ಮೂಡಿಗೆರೆಯ 670, ಕೊಪ್ಪ- 440, ಶೃಂಗೇರಿ- 434, ತರೀಕೆರೆ- 10, ಎನ್.ಆರ್.ಪುರ ತಾಲೂಕಿನಲ್ಲಿ 100 ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ಐದು ತಾಲೂಕುಗಳಲ್ಲಿ 2518.18 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಹಕ್ಕು ಕಾಯ್ದೆ- 2006ರಡಿ ಮಂಜೂರು ಮಾಡಲಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ತಾಲೂಕು 103.03 ಎಕರೆ, ಮೂಡಿಗೆರೆ- 585.01 ಎಕರೆ, ಕೊಪ್ಪ- 1255.19 ಎಕರೆ, ಶೃಂಗೇರಿ- 407.35 ಎಕರೆ, ತರೀಕೆರೆ- 35.2 ಎಕರೆ, ಎನ್.ಆರ್. ಪುರ ತಾಲೂಕಿನಲ್ಲಿ 131.2 ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿದೆ.
160 ಸಮಿತಿಗಳ ರಚನೆ: ಜಿಲ್ಲೆಯಲ್ಲಿ ಈವರೆಗೆ 160 ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ತಾಲೂಕು- 47, ಮೂಡಿಗೆರೆ- 29, ಕೊಪ್ಪ- 22, ಶೃಂಗೇರಿ- 9, ತರೀಕೆರೆ- 21, ಕಡೂರು- 18 ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ 14 ಸಮಿತಿಗಳು ರಚನೆಯಾಗಿವೆ.
ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ ಹಾಗೂ ಎನ್.ಆರ್. ಪುರ ಇಡೀ ತಾಲೂಕುಗಳು ಅಪ್ಪಟ ಮಲೆನಾಡು ಪ್ರದೇಶಗಳು. ಶೃಂಗೇರಿಯಲ್ಲಿ ಈ ವರೆಗೆ ಕೇವಲ 9 ಗ್ರಾಮ ಅರಣ್ಯ ಸಮಿತಿ ರಚನೆ ಮಾಡಲಾಗಿದೆ. ಈ ಅಂಕಿ ಅಂಶ ನೋಡಿದರೆ ಸಾಕಷ್ಟು ಕಡೆಗಳಲ್ಲಿ ಈ ಸಮಿತಿಗಳು ರಚನೆಯಾಗಿಲ್ಲ. ಸಮಿತಿಗಳ ರಚನೆ, ಅರ್ಜಿಗಳ ತಿರಸ್ಕೃತದ ಅಂಕಿ ಅಂಶ ನೋಡಿದರೆ ಈ ಕಾಯ್ದೆಯ ಪ್ರಯೋಜನ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ತಲುಪಿಲ್ಲ ಎಂದು ಗೊತ್ತಾಗುತ್ತದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

