ಚಿಕ್ಕಮಗಳೂರು

ಗೋಮಾಳಕ್ಕೆ ಟೆಂಟ್ ಹಾಕಿ ಅಕ್ರಮ ಪ್ರವೇಶ

Published On :

ಮೂಡಿಗೆರೆ: ಸಿಪಿಐ ಪಕ್ಷ ಮತ್ತು ಎಐವೈಎಫ್‌ನಿಂದ ಹೆಸಗಲ್ ಗ್ರಾಪಂ ವ್ಯಾಪ್ತಿಯ ನಿವೇಶನರಹಿತರು ಭಾನುವಾರ  ಮುಂಜಾನೆ ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ವೇ ನಂ.102ರಲ್ಲಿ ಸರಕಾರಿ ಗೋಮಾಳ ಜಾಗದಲ್ಲಿ  ಸುಮಾರು 250ಕ್ಕೂ ಅಧಿಕ ಸಂಖ್ಯೆಯಲ್ಲಿ ಟೆಂಟ್ ಹಾಕುವ ಮೂಲಕ ಅತಿಕ್ರಮಣ ಪ್ರವೇಶ ಮಾಡಿದ ಘಟನೆ  ನಡೆಯಿತು.
ಈ ವೇಳೆ ಸಿಪಿಐ ಮುಖಂಡ ಸಾತಿ ಸುಂದರೇಶ್ ಮಾತನಾಡಿ, ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿರುವ 250ಕ್ಕೂ  ಅಧಿಕ ಸಂಖ್ಯೆಯ ನಿವೇಶನರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಹೆಸಗಲ್ ಗ್ರಾಪಂ ಮುಂಭಾಗದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಲಾಗಿತ್ತು.
ಗ್ರಾಪಂ ವ್ಯಾಪ್ತಿಯಲ್ಲಿ ಸರ್ವೇ ನಂ.102ರಲ್ಲಿ ಸುಮಾರು 19 ಎಕರೆ 33ಗುಂಟೆ ಗೋಮಾಳ ಜಾಗವಿದೆ. ಅದನ್ನು ಸರ್ವೇ ಮಾಡಿ ನಿವೇಶನರಹಿತರಿಗೆ ನೀಡಬೇಕೆಂದು ಒತ್ತಾಯಿಸಿದ್ದೆವು. ಅಂದಿನಿಂದಲೆ ಈ ಕುರಿತು ಹೆಸಗಲ್ ಗ್ರಾಪಂ ಜಾಗವನ್ನು ಸರ್ವೇ ಮಾಡಿ ನಿವೇಶನರಹಿತರಿಗೆ ನೀಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕಸಬಾ ಹೋಬಳಿಯಲ್ಲಿ ಖಾಲಿ ಜಾಗವಿದ್ದರೂ ನಿವೇಶನಕ್ಕೆ ಪರಿವರ್ತನೆ ಮಾಡದಿರುವುದು ನಿವೇಶನರಹಿತರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಈಗಾಗಲೆ ಗೋಣಿಬೀಡು, ಕಳಸ, ಬಣಕಲ್ ಮತ್ತು ಬಾಳೂರು ಪ್ರದೇಶಗಳಲ್ಲಿ ನಿವೇಶನಕ್ಕಾಗಿ ಟೆಂಟ್ ಹಾಕಿ ಅತಿಕ್ರಮಣ ನಡೆಸಲಾಗಿದೆ. ಕೆಲವೆಡೆಯಲ್ಲಿ ಮಾತ್ರ ನಿವೇಶನದ ಸಮಸ್ಯೆಗಳು ಬಗೆಹರಿದೆದೆ. ನಿವೇಶನವನ್ನು ನೀಡಿದರೆ ಎಲ್ಲಿ ಬಡವರ ಪಾಲಾಗಬಾರದೆಂಬ ಕಾರಣಕ್ಕೆ ಕೆಲವರು ಬಡವರಿಗೆ ನಿವೇಶನ ದೊರಕದಂತೆ ಕುತಂತ್ರ ನಡೆಸುತ್ತಿದ್ದಾರೆಂದು ಆರೋಪಿಸಿದರು.
ನಿವೇಶನ ನೀಡಿ: ಇಲ್ಲಿರುವ ಜಾಗಕ್ಕೆ ಕಣಿವೆ ಬಸವೇಶ್ವರ ಜಾಗವೆಂದು ಹೇಳಲಾಗುತ್ತಿದೆ. ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಬಾರೆದೆಂಬ ಉದ್ದೇಶದಿಂದ ದೇವಸ್ಥಾನದ ಜಾಗಕ್ಕೆ ಅತಿಕ್ರಮಣ ಮಾಡಿಲ್ಲ. ಈ ಜಾಗ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆ ದೂರುತ್ತಿದೆ. ಆದ್ದರಿಂದ ಈ ಜಾಗವನ್ನು ಸರ್ವೇ ಮಾಡಿ ಒತ್ತುವರಿ ಬಿಡಿಸಿ ಕಾನೂನು ರೀತಿಯಲ್ಲಿ ನಿವೇಶನರಹಿತರಿಗೆ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿದರು.
ಜಾಗ ಅತಿಕ್ರಮಣ: ಗೋಪಾಲ್ ಎನ್. ಶೆಟ್ಟಿ ಮಾತನಾಡಿ, ಸಿಪಿಐ ಪಕ್ಷ ಮತ್ತು ಎಐವೈಎಫ್‌ನಿಂದ ಕಳೆದ ಒಂದು ವರ್ಷದಿಂದ ಸೂರಿಗಾಗಿ ಸಮರ ಹೋರಾಟ ನಡೆಸಿಕೊಂಡು ಬಂದಿದೆ. ಕಳಸ, ಕೆಳಗೂರು ಪ್ರದೇಶಗಳಲ್ಲಿ ನಿವೇಶನರಹಿತರು ನಿವೇಶನಕ್ಕಾಗಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಈಗ ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದೆ.
   ಈ ಪ್ರದೇಶದಲ್ಲಿ ಕೇವಲ ಹೆಸಗಲ್ ಗ್ರಾಪಂ ನಿವೇಶನರಹಿತರು ಮಾತ್ರ ಆಗಮಿಸಿದ್ದಾರೆ. ಇದು ರಾಜ್ಯಾದ್ಯಂತ ಹರಡಲು ಮುನ್ಸೂಚನೆಯಾಗಿದೆ. ಇಂದಿನ ದಿನಗಳಲ್ಲಿ ಬಾಡಿಗೆ ಮನೆಗಳಿಗೆ ಹಣ ನೀಡಿಕೊಂಡು ಬದುಕು ಸಾಗಿಸಲು ಕಷ್ಟವಾಗಿರುವ ಸಂಗತಿ ಅರಿತು ಸರಕಾರ ಎಚ್ಚೆತ್ತುಕೊಂಡು ನಿವೇಶನರಹಿತರಿಗೆ ನಿವೇಶನ ನೀಡುವಲ್ಲಿ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ತಹಸೀಲ್ದಾರ್ ಮುನೀರ್ ಸ್ಥಳಕ್ಕೆ ಆಗಮಿಸಿ, ಈ ಸ್ಥಳ ಕಣಿವೆ ಬಸವೇಶ್ವರ ದೇವಸ್ಥಾನದ ಜಾಗವೆಂದು ಹೇಳಲಾಗುತ್ತಿದೆ. ಆದ್ದರಿಂದ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ವೇ ನಡೆಸಿ ಸರ್ವೇ ನಂ. 102ರಲ್ಲಿ ಕಂಡು ಬಂದರೆ ಕಾನೂನು ರೀತಿಯಲ್ಲಿ ನಿವೇಶನಕ್ಕಾಗಿ ಮಂಜೂರು ಮಾಡಿಕೊಡಲು ಸಂಪೂರ್ಣ ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ವಿಠಲ್, ಸುರೇಶ್, ಸುಬ್ರಹ್ಮಣ್ಯ, ಸುರೇಶ್, ರಾಜು, ಯೋಗೇಶ್, ಕೃಷ್ಣಪ್ಪ, ವಾಸು, ಆನಂದ, ರಮೇಶ್ ಸೇರಿದಂತೆ ನಿವೇಶನ ರಹಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.