ಅರಿವು ಮೂಡಿಸುವುದು ಸಂಸ್ಕೃತಿಯ ಗುಣ
ಚಿಕ್ಕಮಗಳೂರು: ಅರಿವಿನ ಹರವನ್ನು ಹಿಗ್ಗಿಸುವುದು ನಮ್ಮ ಸಂಸ್ಕೃತಿಯ ಮೂಲ ಗುಣ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದ್ದಾರೆ.
ಬೆಂಗಳೂರಿನ ಮಹಾಕಾಳಿ ಸಾಂಸ್ಕೃತಿಕ ಪ್ರತಿಷ್ಠಾನ ನಗರದ ಲಯನ್ಸ್ ಸೇವಾಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಬೆಳವಾಡಿ ಮಂಜುನಾಥ ಅವರಿಗೆ ಬೆಳವಾಡಿಭಾನು ಎಂಬ ಅಭಿದಾನ 10 ಸಾವಿರ ನಗದಿನೊಂದಿಗೆ ಕಾಳೀ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ದೊಡ್ಡದಾಗಿ ಭಾವಿಸುವ ಗುಣ: ಸಾಹಿತ್ಯ ಕೃಷಿಯಲ್ಲಿ ದಶಕಗಳಿಂದ ತೊಡಗಿಸಿಕೊಂಡು, ಸಣ್ಣ ಉಪಕಾರವನ್ನೂ ದೊಡ್ಡದಾಗಿ ಭಾವಿಸುವ ಹಿಗ್ಗುವಿಕೆ ಮಂಜುನಾಥ ಅವರ ಗುಣ. ಸಣ್ಣದನ್ನು ದೊಡ್ಡದಾಗಿ ಭಾವಿಸುವ ಹಿಗ್ಗುವಿಕೆ ನಮ್ಮ ಸಂಸ್ಕೃತಿಯ ಧಾತುವೂ ಹೌದು ಎಂದರು.
ಊರಿನಲ್ಲಿರುವ ಒಳ್ಳೆಯ ರಾಜಕಾರಣಿ ವೈದ್ಯ, ಉದ್ಯಮಿ, ಸಾಹಿತಿ, ಶಿಕ್ಷಕ, ಕಲಾವಿದ, ವಿಜ್ಞಾನಿ, ಸಮಾಜ ಸೇವಕರಿಗೆ ಮತ್ತು ಕಾಳೀ ಪ್ರಶಸ್ತಿಯಿಂದ ಊರಿಗೂ ಮಾನ್ಯ ಬಂದಿದೆ. ಬೆಳವಾಡಿ ಮಂಜುನಾಥರಿಗೆ ಪ್ರಶಸ್ತಿ ಪಡೆಯುವ ಅರ್ಹತೆ ಇದ್ದು, ಅವರ ವಿದ್ವತ್ತು ಮತ್ತಷ್ಟು ವೃದ್ಧಿಸಲಿ, ಪರಸ್ಪರ ಪ್ರೀತಿ, ಗೌರವ, ವಿಶ್ವಾಸದ ಭಾವ ವರ್ಧಿಸಲಿ ಎಂದು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹಾರೈಸಿದರು.
ಸಾಂಸ್ಕೃತಿಕ ಮನಸ್ಸುಗಳಿಗೆ ಸಲ್ಲಲಿ: ಕಾಳೀ ಪುರಸ್ಕಾರದೊಂದಿಗೆ ನಾಗರಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾಹಿತಿ ಬೆಳವಾಡಿ ಮಂಜುನಾಥ್, ಸಾಹಿತ್ಯ ಸೇವೆಗೆ ನೆರವು ನೀಡಿ ಪ್ರೋತ್ಸಾಹಿಸಿದ ನಗರದ ಸಾಂಸ್ಕೃತಿಕ ಮನಸ್ಸುಗಳಿಗೆ ಪ್ರಶಸ್ತಿ ಸಲ್ಲಬೇಕು. ಫಲಕವಷ್ಟೇ ತಮ್ಮದು. 10 ಸಾವಿರ ನಗದು ತಮ್ಮ ಎದೆಗೆ ಕಾವ್ಯದ ಅಕ್ಷರ ತುಂಬಿದ ಕಾಳೇಗೌಡರ ನೆನಪಿನ ಕೃತಿಗೆ ನೀಡುವುದಾಗಿ ಹೇಳಿದರು.
ಉದ್ಭವ ಪ್ರಕಾಶನದ ವ್ಯವಸ್ಥಾಪಕ ಟ್ರಸ್ಟಿ ಡಿ.ಎಚ್. ನಟರಾಜ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉದಯೋನ್ಮುಖ ಪ್ರತಿಭಾವಂತನ್ನು ವಿವಿಧೆಡೆ ಗುರುತಿಸಿ ಅವರ ಊರಿನಲ್ಲೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ಸ್ತುತ್ಯಾರ್ಹ. ನಗರದ ಉದ್ಭವ ಪ್ರಕಾಶನವು ಒಟ್ಟು 28 ಸಾಧಕರನ್ನು ಗುರುತಿಸಿ, ಉದ್ಭವಶ್ರೀ ಪುರಸ್ಕಾರ ನೀಡಿದೆ ಎಂದರು.
ಯಾವುದೇ ಋತುವಿನ ಅಗತ್ಯವಿಲ್ಲ: ಉದ್ಭವ ಪ್ರಕಾಶನದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಅಭಿರುಚಿ ಇಲ್ಲದವ ಪಶುವಿಗೆ ಸಮಾನ. ಪ್ರೀತಿಯ ಹೂ ಅರಳಲು ಯಾವುದೇ ಋತುವಿನ ಅಗತ್ಯವಿಲ್ಲ. ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರಿಂದ ಮಕ್ಕಳಿಗೂ ಉತ್ತಮ ಸಂಸ್ಕಾರ ಸಿಗುತ್ತದೆ. ಸಾಧ್ಯವಾದಷ್ಟು ಟಿ.ವಿ. ದೂರ ಮಾಡಿ ಕನ್ನಡ ಪುಸ್ತಕ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕೆಂದರು.
ಡಿ. ಮಲ್ಲಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಕಟ್ಟೆ ಪುಸ್ತಕ ಮನೆಯ ಎಚ್.ಎಂ. ನಾಗರಾಜ್ ರಾವ್ ಅವರ ಗಮಕ ವಾಚನ, ಹೇರೂರು ಶಿವಾನಂದಭಟ್ಟರ ಗೀತಗಾಯನ ಗಮನಸೆಳೆಯಿತು. ವಿದ್ಯಾರ್ಥಿ ಸಾಹಿತಿಗಳಾದ ಕವನ ಮತ್ತು ನಮನಾ, ಗಾಯಕಿ ಶ್ರೀದೇವಿ ವೈಷ್ಣವಿತುಂಗಾ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

