ಚಿಕ್ಕಮಗಳೂರು

ಮುದ್ರಣ ಉದ್ಯಮ ಸಂಘಟಿತ ಹೋರಾಟಕ್ಕೆ ಮುಂದಾಗಲಿ

Published On :

ಚಿಕ್ಕಮಗಳೂರು:  ದರಪಟ್ಟಿ ವ್ಯವಸ್ಥೆಯಿಂದ ಅನಾರೋಗ್ಯಕರ ಸ್ಪರ್ಧೆ ಉಂಟಾಗಿ ಮುದ್ರಣ ಉದ್ಯಮ ಸಂಕಷ್ಟದಲ್ಲಿದೆ ಎಂದು ಕರ್ನಾಟಕ ರಾಜ್ಯ ಮುದ್ರಣಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಂಗೇರ ಹೇಳಿದ್ದಾರೆ.
ಭಾನುವಾರ ನಡೆದ ಜಿಲ್ಲಾ ಮುದ್ರಣಗಾರರ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಯ ಕೊರತೆ ಮುದ್ರಣ ಉದ್ಯಮ ಸೊರಗಲು ಕಾರಣವಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಜೀವನದಲ್ಲಿ ಮುದ್ರಣ ಸೇವೆ ಅನಿವಾರ್ಯವಾದರೂ ಇಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಮಾಲೀಕರು ಮತ್ತು ಕಾರ್ಮಿಕರು ರಥದ ಎರಡು ಗಾಲಿಗಳು. ಇಲ್ಲಿ ಇಬ್ಬರೂ ಒಟ್ಟಾಗಿ ಸಂಘ ಸ್ಥಾಪಿಸಿರುವುದು ಅಭಿನಂದನೀಯ ಎಂದರು.  
ಹೋರಾಟ ಅಗತ್ಯ: ಕೆಲವೆಡೆ ಕೆಲಸಗಾರರ ಶೋಷಣೆ ಇದೆ. ಅನೇಕ ಸಮಸ್ಯೆಗಳು ಇದೆ.
ದಾವಣಗೆರೆಯಲ್ಲಿ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿದ್ದು, 8- 10 ಜಿಲ್ಲೆಗಳಲ್ಲಿ ಬೆಳೆದಿದೆ. ಸ್ವಲ್ಪಮಟ್ಟಿನ ಪ್ರಯೋಜನವೂ ಆಗಿದೆ ಎಂದು ಬಂಗೇರ, ಹಾಲು, ಎಣ್ಣೆ, ತರಕಾರಿ ಎಲ್ಲದಕ್ಕೂ ಬೆಂಬಲ ಬೆಲೆ ಕೋರುತ್ತಿರುವಾಗ ಸಹಕಾರಿ ಸಂಘದ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವಾಗ ಮುದ್ರಣ ಮಾಧ್ಯಮವೂ ಈ ನಿಟ್ಟಿನಲ್ಲಿ ಹೆಜ್ಜೆಹಾಕುವುದು ಅನಿವಾರ್ಯ. ಒಗ್ಗಟ್ಟಿನಿಂದ ಹೋರಾಟ, ಹೋರಾಟದಿಂದ ಗೌರವ, ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಸಂಘ ಉದ್ಘಾಟಿಸಿ ಮಾತನಾಡಿ, ಕಡಿಮೆ ದರದಲ್ಲಿ ನಿವೇಶನವನ್ನು ಸಿಡಿಎ ಮೂಲಕ ಸಂಘಕ್ಕೆ ನೀಡಿ, ಕಟ್ಟಡ ನಿರ್ಮಿಸಲು ಅಗತ್ಯ ಅನುದಾನವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಕಲಿಯುಗದಲ್ಲಿ ಸಂಘಶಕ್ತಿಗೆ ಮಾನ್ಯತೆ. ಸಂಘಟಿತ ಪ್ರಯತ್ನಕ್ಕೆ ಫಲವಿದೆ. ಸಮಾಜದ ಎಲ್ಲ ಜನರ ಜೀವನಮಟ್ಟವೂ ಉನ್ನತೀಕರಣವಾಗಬೇಕು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪಟ್ಟಿನೀಡಿದ ಸಚಿವರು ಒಳ್ಳೆಯ ಕೆಲಸ ಮಾಡುವವರನ್ನು ಸಮಾಜ ಬೆಂಬಲಿಸಬೇಕೆಂದರು.
ಸಂಘಕ್ಕೆ ನಿವೇಶನ: ಸಿಡಿಎ ಅಧ್ಯಕ್ಷ ಬಿ.ರಾಜಪ್ಪ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಸಂಘಗಳು ಅನಿವಾರ್ಯ. ತಮ್ಮೊಳಗಿನ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಉತ್ತಮ ವೇದಿಕೆ. ಸಚಿವರ ಸೂಚನೆಯಂತೆ ಮುದ್ರಣಕಾರರ ಸಂಘಕ್ಕೂ ರಿಯಾಯ್ತಿ ದರದಲ್ಲಿ ನಿವೇಶನ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಯಾವುದೇ ಉದ್ಯಮ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಶ್ರದ್ಧೆ, ಶಿಸ್ತು, ಬದ್ಧತೆ ಎಲ್ಲಕ್ಕಿಂತ ಮಿಗಿಲಾಗಿ ವೃತ್ತಿಪರತೆ ಇರಬೇಕು. ಹೊರ ಜಿಲ್ಲೆಗಳಿಂದಲೂ ನಮ್ಮೂರಿನ ಮುದ್ರಣ ಅಂದಚಂದವಾಗಿ ಕಡಿಮೆ ದರದ್ದಾದರೆ ಇಲ್ಲಿ ಮುದ್ರಣಾಲಯಗಳು ಸಶಕ್ತವಾಗುತ್ತದೆ. ರಿಯಾಯಿತಿ ದರದಲ್ಲಿ ಕಚ್ಚಾ ವಸ್ತುಗಳನ್ನು ಸರ್ಕಾರ ಒದಗಿಸಬೇಕು ಎಂದರು.
ನಗರಸಭಾ ಅಧ್ಯಕ್ಷ ಸಿ.ಆರ್. ಪ್ರೇಮ್‌ಕುಮಾರ್, ಟೈಲ್ಯ್ ಅಸೋಷಿಯೇಷನ್ ರಾಜ್ಯ ಉಪಾಧ್ಯಕ್ಷ ಬ್ರ್ಯ್ವೇ ಸತೀಶ್ ಮಾತನಾಡಿದರು. ಮುದ್ರಣಕಾರರ ಸಂಘದ ಹಾವೇರಿ ಜಿಲ್ಲಾ ಕಾರ್ಯದರ್ಶಿ ವಿಮಲ್‌ಕುಮಾರ್, ದಾವಣಗೆರೆ ಜಿಲ್ಲಾಧ್ಯಕ್ಷ ಶ್ರೀನಿವಾಸ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಯೋಗೀಶ್, ಸಿಡಿಎ ಮಾಜಿ ಅಧ್ಯಕ್ಷ ರಂಗನಾಥ್ ಉಪಸ್ಥಿತರಿದ್ದರು.
ಸಂಘದ ಜಿಲ್ಲಾಧ್ಯಕ್ಷ ವೇಣುಗೋಪಾಲಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ಮುದ್ರಕ ರಾಮದಾಸ್ ಪ್ರಭು ಸ್ವಾಗತಿಸಿ, ನಿರ್ದೇಶಕ ಅಶೋಕಕುಮಾರ್ ಕಾರ್ಯಕ್ರಮ ನಿರೂಪಿಸಿ. ಸಿ.ಎಸ್. ಮಂಜುನಾಥ ವಂದಿಸಿದರು. ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.