ಚಿಕ್ಕಮಗಳೂರು

ವಿದ್ಯಾರ್ಥಿಗಳು ವಿಜ್ಞಾನ ಕುರಿತು ಆಸಕ್ತಿ ವಹಿಸಿ

Published On :

ಚಿಕ್ಕಮಗಳೂರು: ವಿದ್ಯಾರ್ಥಿಗಳು ಮೂಲ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್  ಕರೆ ನೀಡಿದ್ದಾರೆ.
ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಡಿಎಸ್‌ಇಆರ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಎರಡು ದಿನಗಳ ವಿದ್ಯಾರ್ಥಿ- ವಿಜ್ಞಾನಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಕಗಳಿಸುವ ಆಧಾರದ ಮೇಲೆ ವಿಜ್ಞಾನದ ಅಭ್ಯಾಸವಾಗಬಾರದು ಎಂದು ಹೇಳಿದರು.
ವೈಜ್ಞಾನಿಕ ಮನೋಭಾವ ಅಗತ್ಯ: ವಿಜ್ಞಾನ ಎಲ್ಲರಿಗೂ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾಗಿ ಬೇಕಾದದ್ದು, ವೈಜ್ಞಾನಿಕ ಮನೋಭಾವದ ಹಿನ್ನೆಲೆಯಲ್ಲಿ ಆಲೋಜಿಸುವ ಅಗತ್ಯತೆ ಇದೆ. ಈ ಉದ್ದೇಶದಿಂದಲೇ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ಮೂಲಭೂತ ಕತರ್ಕವ್ಯವಾಗಿ ಸೇರಲ್ಪಟ್ಟಿದೆ. ವಿಜ್ಞಾನ ಮತ್ತು ಮೂಢನಂಬಿಕೆಗಳ ನಡುವೆ ಇಂದಿಗೂ ಜಿಜ್ಞಾಸೆ ಇದ್ದೇ ಇದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಚಿಂತನೆಯ ಅಗತ್ಯವಿದೆ ಎಂದು ತಿಳಿಸಿದರು.
ಹೆಚ್ಚಿನ ಅವಕಾಶಗಳಿವೆ: ಮೂಲ ವಿಜ್ಞಾನದ ಅಭ್ಯಾಸದ ಫಲವಾಗಿ ಹೆಚ್ಚಿನ ಅವಕಾಶಗಳಿವೆ. ಪ್ರಶ್ನೆ ಕೇಳುವುದೇ ವೈಜ್ಞಾನಿಕ ಮನೋಭಾವವಾಗಿದ್ದು ಇದರಿಂದ ಕುತೂಹಲ ಹೆಚ್ಚಾಗಿ ಉತ್ತರಗಳನ್ನು ಪಡೆಯುವುದು ಒಂದು ಸುಂದರ ವಿಷಯವಾಗಿದೆ. ಎಲ್ಲಾ ನೈಸರ್ಗಿಕ ಪ್ರಕ್ರಿಯೆಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದ್ದು, ವಿಜ್ಞಾನವು ಜೀವನದ ಅತ್ಯಗತ್ಯ ವಿಷಯವಾಗಿದೆ ಎಂದರು.
ವಿಜ್ಞಾನಿಯನ್ನು ತಯಾರು ಮಾಡಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಂತರಾಜ್ ಮಾತನಾಡಿ, ನೂರಾರು ಕೋಟಿ ರು.ಗಳನ್ನು ವೆಚ್ಚ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕಿಂತ ಒಬ್ಬ ವಿಜ್ಞಾನಿಯನ್ನು ತಯಾರು ಮಾಡುವ ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರುದ್ರಸ್ವಾಮಿ ಮಾತನಾಡಿ, ವಿಜ್ಞಾನವು ಒಂದು ವಿಶ್ವಮಾನ್ಯ ವಿಷಯವಾಗಿದೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳು ಸತ್ಯದ ತಳಹದಿಗಳನ್ನು ಹೊಂದಿದೆ. ಧರ್ಮಗಳು ಸಹ ವೈಜ್ಞಾನಿಕ ತಳಹದಿಗಳನ್ನು ಹೊಂದಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್,  ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆಗೆ ಆಸಕ್ತರಾಗುವ ಅವಶ್ಯಕತೆಯಿದ್ದು, ಇಲ್ಲಿಯೂ ಕೂಡ ವಿಫುಲ ಅವಕಾಶಗಳಿದ್ದು ಎಲ್ಲರೂ ಇಂಜಿನಿಯರ್ ಮತ್ತು ಡಾಕ್ಟರ್‌ಗಳೇ ಆಗಬಯಸಬಾರದು. ಈ ನಿಟ್ಟಿನಲ್ಲಿ ಪೋಷಕರ ಪಾತ್ರವೂ ಕೂಡ ಅಷ್ಟೇ ಪ್ರಮುಖವಾಗಿದೆ ಎಂದರು.
ಈ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ಅಧಿಕಾರಿ ಯೋಗಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್, ಕೃಷ್ಣಮೂರ್ತಿ ರಾಜ ಅರಸ್ ಹಾಗೂ ವಿಜ್ಞಾನಿಗಳಾದ ಡಾ. ವಿನೋದ್ ಲಕ್ಕಪ್ಪನ್, ಡಾ. ಬಾಲಕೃಷ್ಣಗೌಡ ಉಪಸ್ಥಿತರಿದ್ದರು. ಮಲ್ಲಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಕಂಠಪ್ಪ ವಂದಿಸಿದರು. ಸತ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.