ಚಿಕ್ಕಮಗಳೂರು

ಬಜೆಟ್‌ನಲ್ಲಿ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ. 30
ರಾಜ್ಯದ ನೂತನ ಬಜೆಟ್‌ನಲ್ಲಿ ಕಾರ್ಮಿಕರು, ರೈತರು, ಸಾಮಾನ್ಯ ಜನರ ಆಶೋತ್ತರಗಳು ಹಾಗೂ ಬೇಡಿಕೆಗಳಿಗೆ ಸ್ಪಂಧಿಸುವಂತೆ ಆಗ್ರಹಿಸಿ ಸಿಪಿಐ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
 ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಬಾಲಸುಬ್ರಹ್ಮಣ್ಯನ್ ಸಮಿತಿ ವರದಿ: ಸರ್ಕಾರಿ ಭೂ ಒತ್ತುವರಿ ಬಗ್ಗೆ ಬಾಲಸುಬ್ರಹ್ಮಣ್ಯನ್ ಸಮಿತಿ ವರದಿಯನ್ನು ಜಾರಿಗೊಳಿಸಬೇಕು. ಸರ್ಕಾರಿ ಭೂ ಒತ್ತುವರಿ ಜೀವನಾಧಾರಕ್ಕೆ ಕೃಷಿ ಮಾಡಿದ 5 ಎಕರೆ ಮಿತಿಗೊಳಪಟ್ಟ ಮತ್ತು ವಾಸದ ಮನೆ, ಗುಡಿಸಲು ನಿರ್ಮಿಸಿಕೊಂಡ ಬಡವರ ಹೊರತಾಗಿ ಉಳಿದೆಲ್ಲರ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಈ ಭೂಮಿಯನ್ನು ಭೂ ರಹಿತ ಕೃಷಿ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು. ನಗರ, ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ನೀಡಲು ಸ್ಥಳೀಯ ಸಂಸ್ಥೆಗಳಿಗೂ ಈ ಭೂಮಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾನೂನು ರಚಿಸಬೇಕು: ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವರ್ಗದ ಅಭಿವೃದ್ಧಿಗೆ ಗ್ರಾಮ, ಪಟ್ಟಣ, ತಾಲೂಕು, ಜಿಪಂ, ನಗರ, ಪುರಸಭೆ, ನಗರಪಾಲಿಕೆ ಮತ್ತು ರಾಜ್ಯ ಸರ್ಕಾರಗಳ ಬಜೆಟ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ, ಸಬ್ ಪ್ಲಾನ್‌ಗಳಿಗೆ ಮೀಸಲಿಟ್ಟ ಹಣವನ್ನು ಇತರೆ ಕಾರ್ಯಗಳಿಗೆ ಖರ್ಚು ಮಾಡದಂತೆ ನಿರ್ಭಂದಿಸುವ ಕಾನೂನು ಪಕ್ಕದ ಆಂದ್ರಪ್ರದೇಶದಲ್ಲಿ ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಇಂತಹ ಕಾನೂನು ರಚಿಸಬೇಕು.
 ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿರುವಂತೆ ರೈತರಿಗೆ ಪೆನ್ಷನ್ ನೀಡುವ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತಂದು 60 ವರ್ಷ ತುಂಬಿದ ಕೃಷಿ ಆದಾಯವನ್ನೇ ಅವಲಂಬಿಸಿದ ಬಡ ರೈತರಿಗೆ 3 ಸಾವಿರ ರು.ಗಳ ಮಾಸಿಕ ಪಿಂಚಣಿ ನೀಡಬೇಕು.
ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಉಂಟಾದ 16,085 ಕೋಟಿ ರು.ಗಳ ನಷ್ಟವನ್ನು ಲೋಕಾಯುಕ್ತ ಸಂತೋಷ್ ಹೆಗಡೆ ವರದಿಯಂತೆ ಸಂಬಂಧಿತ ಗಣಿ ಕಂಪನಿ ಹಾಗೂ ಅಧಿಕಾರಿಗಳಿಂದ ವಸೂಲಿ ಮಾಡಲು ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು.
ನೀರು ಪೂರೈಕೆ ಕೇಂದ್ರಗಳಲ್ಲಿ ನೀರು ಶುದ್ಧಿಕರಣ ಯಂತ್ರ ಅಳವಡಿಸಿ ಶುದ್ಧ ಕುಡಿಯುವ ನೀರನ್ನು ನೀಡುವ ಯೋಜನೆಯನ್ನು ಕೆಲ ಗ್ರಾಪಂ ಹುಬ್ಬಳ್ಳಿ ನಗರ ಪಾಲಿಕೆ ಮತ್ತು ಗದಗದ ಖಾಸಗಿ ಟ್ರಸ್ಟ್‌ಗಳು ಜಾರಿ ಮಾಡಿವೆ. ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಎಲ್ಲೆಡೆ ಜಾರಿಗೊಳಿಸಿ ಪ್ಲೋರೈಡ್ ನೀರಿನ ಬಳಕೆ ತಪ್ಪಿಸಬೇಕು.
 ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರಿಗೆ ವಸತಿ ನಿರ್ಮಾಣಕ್ಕಾಗಿ ನಿವೇಶನ ಹಂಚಲು ಪಂಚಾಯ್ತಿ, ಪುರಸಭೆಗಳಂತಹ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅಗತ್ಯವಾದ ಭೂಮಿ ಮಂಜೂರು ಮಾಡಬೇಕು. ವಿದ್ಯುತ್ ಕೊರತೆ ನಿವಾರಿಸಲು ಸೋಲಾರ್ ವಿದ್ಯುತ್ ಬಳಕೆಗೆ ಶೇ. 80 ರಷ್ಟು ಸಬ್ಸಿಡಿ ನೀಡುವ ವಿಶೇಷ ಯೋಜನೆಯನ್ನು ಜಾರಿಗೆ ತರಬೇಕು. ಎಲ್ಲಾ ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೇರಿಸಿ, ಹೈಟೆಕ್ ಆಸ್ಪತ್ರೆಗಳಾಗಿ ಪರಿವರ್ತಿಸಿ, ಅಗತ್ಯ ಸಲಕರಣೆ, ಸಿಬ್ಬಂದಿ ನೇಮಿಸುವ ವಿಶೇಷ ಯೋಜನೆ ರೂಪಿಸಬೇಕು.
 ಬರಗಾಲ ಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರೋದಗಿಸುವ ಹೊಸ ಯೋಜನೆಯನ್ನು ರೂಪಿಸಿ ಅರ್ಧಕ್ಕೆ ನಿಂತ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಹಣವನ್ನು ಪ್ರತಿ ವರ್ಷ ಆದ್ಯತೆ ಮೇರೆಗೆ ಮಂಜೂರು ಮಾಡಬೇಕು. ಬಜೆಟ್ ಮಂಡನೆಗೂ ಮುನ್ನ ವಾಣಿಜ್ಯೋದ್ಯಮಿಗಳ ಸಭೆ ನಡೆಸಬೇಕು. ಜತೆಗೆ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ಪ್ರತ್ಯೇಕ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.
 ಸಿಪಿಐನ ಜಿ. ರಘು, ಮಂಜುನಾಥ್, ರಾಧಾ ಸುಂದರೇಶ್, ವಿಜಯಕುಮಾರ್, ಜಾರ್ಜ್ ಆಸ್ಟೀನ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.