ಚಿಕ್ಕಮಗಳೂರು

ಆತ್ಮವಿಶ್ವಾಸ ಮೂಡಿಸುವುದೇ ಶಿಕ್ಷಣ

Published On :

ಕ.ಪ್ರ. ವಾರ್ತೆ  ಚಿಕ್ಕಮಗಳೂರು  ಜು.4
ಕಡಿಮೆ ಸ್ವಾರ್ಥ, ಸಮಾಜಮುಖಿ ರಾಜಕಾರಣಕ್ಕೆ ಮುಳ್ಳೇಗೌಡರು ಮೇಲ್ಪಂಕ್ತಿ. ಸಿರಿವಾಸೆಯ ಪ್ರೇರಕಶಕ್ತಿಯೂ ಹೌದು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಸಿರಿವಾಸೆ ವಿವೇಕಾನಂದ ವಿದ್ಯಾಸಂಸ್ಥೆ ಬುಧವಾರ ಆಯೋಜಿಸಿದ್ದ ಸಂಸ್ಥೆಯ ಸಂಸ್ಥಾಪಕ ದಿ. ಎಸ್.ಬಿ. ಮುಳ್ಳೇಗೌಡರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗುರಿಯ ಕಡೆ ನಡೆಯಲು ಇವರು ಆದರ್ಶ. ಇಲ್ಲಿಗೆ ಬಂದ ಅಪರಿಚಿತರಿಗೂ ಅನ್ನ, ಆಶ್ರಯ ನೀಡಿದ ಮುಳ್ಳೇಗೌಡರು, ಮನೆ ಮಾತ್ರವಲ್ಲ ಊರು ಕಟ್ಟುವ ಆಸೆಯಿಂದ ಶ್ರಮಿಸಿದವರು. ಹೋಬಳಿ ಕೇಂದ್ರವೂ ಅಲ್ಲದ ಪ್ರಕೃತಿಸಿರಿ ಹೊಂದಿರುವ ಸಿರಿವಾಸೆಗೆ ರಸ್ತೆ, ವಿದ್ಯುತ್, ಗ್ರಾಪಂ, ಆಸ್ಪತ್ರೆ, ದೂರವಾಣಿ, ಶಾಲೆ, ಬ್ಯಾಂಕ್, ಹಾಸ್ಟೆಲ್, ಪಶು ಆಸ್ಪತ್ರೆ ಎಲ್ಲವನ್ನೂ ತರುವಲ್ಲಿ ಇವರ ಪರಿಶ್ರಮವಿರುವುದರಿಂದ ಮುಳ್ಳೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದರು.
ದೂರದೃಷ್ಟಿಯ ನಾಯಕ: ಐದಾರು ದಶಕಗಳ ಹಿಂದೆಯೇ ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿಪಡೆದು ಮಲೆನಾಡಿನಲ್ಲಿ ಉತ್ತಮ ಶಾಲೆಯನ್ನು ಆರಂಭಿಸಿರುವ ಮುಳ್ಳೇಗೌಡರು, ದೂರದೃಷ್ಟಿಯ ನಾಯಕ. ಮಕ್ಕಳಲ್ಲಿರುವ ಅಸಾಧಾರಣಶಕ್ತಿ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಿ ಅವರಿಂದ ಅದ್ವಿತೀಯ ಸಾಧನೆ ನಿರೀಕ್ಷಿಸಿದವರು. ಸ್ವಾಭಿಮಾನಗಳಾಗಿ-ಸ್ವಾವಲಂಬಿಗಳಾಗಿ ಮಕ್ಕಳು ಬೆಳೆಯಬೇಕೆಂದು ಅಪೇಕ್ಷಿಸಿದವರು ಎಂದ ಸಿ.ಟಿ. ರವಿ, ಮಕ್ಕಳ ಸಹಜತೆಗೆ, ಸಂತೃಪ್ತಿ- ಸಮಾಧಾನಕ್ಕೆ ಒತ್ತು ನೀಡುವ ಶಿಕ್ಷಣ ಇಂದಿನ ಅಗತ್ಯ ಎಂದು ಹೇಳಿದರು.
ಹೆಚ್ಚಿನ ಸಾಧನೆ: ಪ್ರತಿ ಕಲ್ಲಲ್ಲೂ ಒಂದು ಶಿಲ್ಪ ಇರುತ್ತದೆ. ನಿಧಾನವಾಗಿ ಕೆತ್ತಿದರೆ ಸುಂದರಶಿಲ್ಪ ಮೂಡುತ್ತದೆ.  ಮಕ್ಕಳ ಪ್ರತಿಭೆಯನ್ನು ಗುರುತಿಸಿದರೆ ಅವರಿಂದ ಹೆಚ್ಚಿನ ಸಾಧನೆ ಸಮಾಜಕ್ಕೆ ಸಿಗುತ್ತದೆ. ಮಕ್ಕಳ ಸಹಜ ಜೀವನವನ್ನು ನಾವಿಂದು ಕಿತ್ತುಕೊಳ್ಳುತ್ತಿದ್ದೇವೆ. ಪುಸ್ತಕ ಕೇಂದ್ರಿತ ಶಿಕ್ಷಣ, ನಗರೀಕರಣ, ಒಂಟಿತನದ ಬದುಕು ಇದಕ್ಕೆಲ್ಲಾ ಕಾರಣ.
ಹೆಚ್ಚು ಅಂಕ, ಬಾಯಿಪಾಠವಷ್ಟೆ ಶಿಕ್ಷಣವಲ್ಲ. ವಿಕಸಗೊಳಿಸುವ ಬದುಕಿನ ವಿಶ್ವಾಸದ ಹೆಜ್ಜೆ ಇಡುವ ಆತ್ಮವಿಶ್ವಾಸ ಮೂಡಿಸುವುದೇ ಶಿಕ್ಷಣ. ಮಾನವೀಯ ಸಂಬಂಧಗಳೆ ಇಲ್ಲದ ಬದುಕಿಗೆ ಅರ್ಥವಿಲ್ಲ.
 ಚುನಾವಣಾ ದಿನಗಳಷ್ಟೇ ಪಕ್ಷ ರಾಜಕಾರಣ, ಉಳಿದಂತೆಲ್ಲಾ ಅಭಿವೃದ್ಧಿ ರಾಜಕಾರಣ ತಮ್ಮದು. ದ್ವೇಷ-ಅಸೂಯೆ ತಮ್ಮ ಪದಕೋಶದಲ್ಲೆ ಇಲ್ಲ ಎಂದರು.
ಸಹಕಾರ ಸ್ಮರಣೀಯ: ನಿರ್ದೇಶಕ ಬಿ.ನೀ. ವಿಶ್ವನಾಥ ಪ್ರಾಸ್ತಾವಿಸಿ, ಸಿರಿವಾಸೆಗೆ ಮುಳ್ಳೇಗೌಡರು ಎರಡು ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸಿದ್ದು, 50 ಲಕ್ಷ ರು. ವೆಚ್ಚದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಟ್ಟಡವನ್ನು ಶಾಸಕ ಸಿ.ಟಿ. ರವಿ ಮಂಜೂರು ಮಾಡಿಸಿದ್ದಾರೆ. 8 ಲಕ್ಷ ರು. ವೆಚ್ಚದ ಬಿಸಿಯೂಟದ ಕಟ್ಟಡ, 8.31 ಲಕ್ಷ ರು. ವೆಚ್ಚದ ಆಧುನಿಕ ಶೌಚಾಲಯ ನಿರ್ಮಾಣದಲ್ಲಿ ಶಾಸಕರ ಸಹಕಾರ ಸ್ಮರಣೀಯ. ಸಿರಿವಾಸೆಯಲ್ಲಿ ಮಳೆ ಅಧಿಕವಾಗಿದ್ದು, ವಿದ್ಯುತ್ ವ್ಯವಸ್ಥೆ ಸುಧಾರಿಸಲು 15 ಕಿ.ಮೀ.ದೂರದವರೆಗೂ ವಿದ್ಯುತ್ ಮಾರ್ಗಕ್ಕೆ ಕೇಬಲ್ ಅಳವಡಿಸುವಂತೆ ಮನವಿ ಮಾಡಿದರು.  ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ. ಭೋಜೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಾನಿಗಳು ನೀಡಿದ ಸಮವಸ್ತ್ರವನ್ನು ಗೌರವ ಕಾರ್ಯದರ್ಶಿ ಎಸ್.ಎಂ. ದೇವಣ್ಣಗೌಡ ವಿತರಿಸಿದರು.
 ಊರಿನ ಹಿರಿಯರಾದ ಎಸ್.ಎ. ಪುಟ್ಟೇಗೌಡ ಮುಖ್ಯಅತಿಥಿಗಳಾಗಿದ್ದರು. ಮುಖ್ಯ ಶಿಕ್ಷಕಿ ಅನುಸೂಯ ವಿಶ್ವನಾಥ ಸ್ವಾಗತಿಸಿ, ಬೊಗಸೆ ಶಿವಶಂಕರ್ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ಕಡವಂತಿ ಅಣ್ಣೇಗೌಡ, ಕಲಾ ಪ್ರಸನ್ನ, ಮಲ್ಲೇಶ್, ಶ್ರೀಕಾಂತಶೆಟ್ಟಿ, ಬಿ.ಎ. ಮಂಜಪ್ಪ, ಗ್ರಾಮದ ಪ್ರಮುಖರಾದ ವಾಸು ಪೂಜಾರಿ, ಎಸ್.ಎಂ. ಪ್ರಸನ್ನ, ನಂಜುಂಡ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.