ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಬಿಚ್ಚಿಡುತ್ತೇವೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.6
ಎ.ಬಿ. ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಆಗಿರುವ ಸಾಧನೆ ಹಾಗೂ ಈಗಿನ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ಮುಂದಿಡಲಾಗುವುದು ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಶನಿವಾರ ನಡೆದ ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಗ್ರಾಮಾಂತರ ಅಧ್ಯಕ್ಷ ದೇವನೂರು ರವಿ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಸ್ವಾರ್ಥ ರಾಜಕಾರಣವನ್ನು ಜನರ ಮುಂದೆ ತೆರೆದಿಡಲಾಗುವುದು. ಬಿಜೆಪಿ ಸರ್ಕಾರದ ಸಾಧನೆಗೆ ಗೆಲವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಗೆಲವು ಖಚಿತ; ದೇಶ ದ್ರೋಹಿ ಹತ್ಯೆಯನ್ನು ಕಾಂಗ್ರೆಸ್ ನರೇಂದ್ರ ಮೋದಿ ಅವರಿಗೆ ಸಂಬಂಧ ಕಲ್ಪಿಸುತ್ತಿದ್ದಾರೆ. ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಬೇಕೆಂದು ಜನರು ಹೇಳುತ್ತಿದ್ದಾರೆ. ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಕನಸು ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಹೇಳಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಸಾಮರ್ಥ್ಯ ತೋರಿಸಿಕೊಡಲಿದ್ದಾರೆ. ಕಾಂಗ್ರೆಸ್ ಏನೇ ಕುತಂತ್ರ ಮಾಡಿದರೂ ಬಿಜೆಪಿ ಗೆಲವು ಖಚಿತ ಎಂದು ಹೇಳಿದರು.
ಸವಾಲಾಗಿ ಸ್ವೀಕರಿಸಿ: 1998 ರಿಂದ 2004ರವರೆಗೆ ದೇಶದಲ್ಲಿ ಸುವರ್ಣಯುಗ ಕಂಡಿದ್ದೇವು. ವಾಜಪೇಯಿ ಅವರು ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಗಂಗಾ- ಕಾವೇರಿ ನದಿಗಳ ಜೋಡಣೆಯ ಕನಸು ಕಂಡಿದ್ದರು. ಆ ಕನಸು ಮುಂದಿನ ದಿನಗಳಲ್ಲಿ ಈಡೇರಿಸಬೇಕಾಗಿದೆ. ಪಕ್ಷದ ಕಾರ್ಯಕರ್ತರು ಜತೆಗೆ ಬರುವವರನ್ನು ಕರೆದುಕೊಂಡು, ಬರದೆ ಇರುವವರನ್ನು ಬಿಟ್ಟು, ವಿರೋಧಿಗಳನ್ನು ಲೆಕ್ಕಿಸದೆ, ಮುಂದಿನ ಲೋಕಸಭಾ ಚುನಾವಣೆ ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಶಾಸಕರು ಪ್ರಗತಿ ಪರಿಶೀಲನಾ ಸಭೆಗೆ ಕಾಂಗ್ರೆಸ್ ಪಕ್ಷದವರು ಅಡ್ಡಿಪಡಿಸಿ, ತಮ್ಮ ಸಣ್ಣತನ ತೋರಿಸಿಕೊಂಡಿದ್ದಾರೆ. ಇದೊಂದು ಖಂಡನೀಯ ಎಂದು ಟೀಕಿಸಿದ ಅವರು, ಜನರೊಂದಿಗೆ ಸಂವಾದ, ಸಂಪರ್ಕ ಹಾಗೂ ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.
ರಾಜಕೀಯ ಮ್ಯಾರಥಾನ್ ಓಟ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ. ರವಿ, ರಾಜಕೀಯದಲ್ಲಿ ಇದೊಂದು ಮ್ಯಾರಥಾನ್ ಓಟ ಇದ್ದಂತೆ. ಮುಂದಿನ ಸುತ್ತಿಗೆ ಹೋಗಬೇಕಾದರೆ ಪ್ರತಿಯೊಬ್ಬರು ದಮ್ ಕಟ್ಟಿ ಓಡಬೇಕು. ಅದರಂತೆ ಬಿಜೆಪಿ ಸಂಘಟನೆಯನ್ನು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಅಪಸ್ವರಕ್ಕೆ ನಾಂದಿಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನ ಹಿತ ಸೇತುವೆಯಾಗಿ ಕೆಲಸ ಮಾಡಬೇಕೆಂದು ನೂತನ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.
ಸುವರ್ಣಯುಗ: ಬಿಜೆಪಿ ಪಕ್ಷಕ್ಕೆ ಇತಿಹಾಸವಿದೆ. ಕುಟುಂಬ ಪಕ್ಷಗಳಲ್ಲಿ ಬೇರೆಯವರಿಗೆ ಅವಕಾಶ ಇರುವುದಿಲ್ಲ. ವಂಶ ಪಾರಂಪರೆಯಾಗಿ ಅವರೇ ಮುಂದುವರೆಯಬೇಕು. ಸಾಮಾನ್ಯ ವ್ಯಕ್ತಿ ಸ್ಥಾನ ಪಡೆದು ಬಿಜೆಪಿ ಸೇರಿದರೆ ಪ್ರಧಾನಿ ಆಗುವವರೆಗೂ ಅವಕಾಶಗಳಿರುತ್ತವೆ. ವಾಜಪೇಯಿ ಸರ್ಕಾರದಲ್ಲಿ ಸುವರ್ಣಯುಗ ಇತ್ತು. ಸ್ವಾಭಿಮಾನಿ, ಸಮೃದ್ಧ ಪ್ರತೀಕವಾದ ರಾಜಕಾರಣದ ಸ್ವಜಲಧಾರಾ, ಸರ್ವಶಿಕ್ಷ ಅಭಿಯಾನ, ಸುವರ್ಣ ಚತುಷ್ಪಥ ರಸ್ತೆ ಮುಂತಾದ ಜನಪರ ಯೋಜನೆಯನ್ನು ಜಾರಿಗೆ ತರಲಾಗಿತ್ತು ಎಂದರು.
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಭ್ರಷ್ಟಾಚಾರದ ತ್ರಿವಿಕ್ರಮ ಸಾಧನೆ ಕಾಂಗ್ರೆಸ್ನದು. ಹಗರಣಗಳ ಮೇಲೆ ಕೇಂದ್ರದ ಯುಪಿಎ ಸರ್ಕಾರ ಕುಳಿತಿದೆ ಎಂದು ಆರೋಪಿಸಿದರು.
ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಾರಥ್ಯ ಅಗತ್ಯವಾಗಿದೆ. ಇದಕ್ಕೆ ಜಿಲ್ಲಾ ಬಿಜೆಪಿ ಸಾಥ್ ನೀಡುವ ಮೂಲಕ ಪಕ್ಷ ಸಂಘಟನೆ ಮಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಮರಳಿ ಪಡೆಯೋಣ ಎಂದು ಕರೆ ನೀಡಿದರು.
ಬಿಜೆಪಿ ನೂತನ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಮೂರು ವರ್ಷದ ಅವಧಿಗೆ ನನ್ನನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ. ಸ್ಥಾನಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಗ್ರಾಮಾಂತರ ಅಧ್ಯಕ್ಷ ದೇವನೂರು ರವಿ ಮಾತನಾಡಿದರು. ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಕೋಟೆ ರಂಗನಾಥ್, ಕನಕರಾಜ್ ಅರಸ್, ಪಕ್ಷದ ಚುನಾವಣಾಧಿಕಾರಿ ಎನ್.ಎಂ. ಮಂಜುನಾಥ್ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ನಗರಸಭಾಧ್ಯಕ್ಷರಾದ ಪ್ರೇಮ್ ಕುಮಾರ್, ನಿಂಗೇಗೌಡ, ಜಿಪಂ ಸದಸ್ಯರಾದ ಕಲ್ಮರಡಪ್ಪ, ಎಂ.ಎಸ್. ನಿರಂಜನ್, ತಾಪಂ ಅಧ್ಯಕ್ಷ ಬಸವರಾಜ್, ಪಕ್ಷದ ಜಿಲ್ಲಾ ವಕ್ತಾರ ಬಿ. ರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಟಿ. ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಬೆಳವಾಡಿ ರವೀಂದ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

