ಜಿಪಂ ಅಧ್ಯಕ್ಷೆಯಾಗಿ ಸುಜಾತ ಅವಿರೋಧ ಆಯ್ಕೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.8
ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷರಾಗಿ ಸುಜಾತ ಶಿವಲಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಪಂ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ನಿಗದಿತ ಸಮಯದೊಳಗೆ ಸುಜಾತ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ. ಯಶವಂತ್, ಜಿಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ಉಪಸ್ಥಿತರಿದ್ದರು.
ಪ್ರಾದೇಶಿಕ ಸಮಾತೋಲನ: ನಿಶ್ಚಳ ಬಹುಮತದೊಂದಿಗೆ ಜಿಲ್ಲಾ ಪಂಚಾಯ್ತಿನಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ, ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಪ್ರಾದೇಶಿಕ ಸಮಾತೋಲನ ಕಾಪಾಡಿಕೊಂಡು ಬರುತ್ತಿದೆ. ಮೊದಲ ಅವಧಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ಬಯಲುಸೀಮೆಗೆ ನೀಡಿ, ಉಪಾಧ್ಯಕ್ಷ ಸ್ಥಾನವನ್ನು ಮಲೆನಾಡಿಗೆ ನೀಡಲಾಗಿತ್ತು. ನಂತರ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಮಲೆನಾಡಿಗೆ ನೀಡಿ, ಉಪಾಧ್ಯಕ್ಷ ಸ್ಥಾನವನ್ನು ಬಯಲುಸೀಮೆಗೆ ನೀಡಲಾಗಿತ್ತು.
ಕಳೆದ 9 ತಿಂಗಳ ಹಿಂದೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಕಡೂರು ತಾಲೂಕಿನ ಮಾಲಿನಿ ಬಾಯಿ ಅವರಿಗೆ ನೀಡಲಾಗಿತ್ತು. ಅವರು ಪಕ್ಷದ ನಿರ್ಣಯದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ತೆರವಾಗಿದ್ದ ಈ ಸ್ಥಾನಕ್ಕೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಕ್ಷೇತ್ರದಿಂದ ಪ್ರತಿನಿಧಿಸಿರುವ ಸುಜಾತ ಅವರನ್ನು ಅವಿರೋಧ ಆಯ್ಕೆಯಾಗುವಂತೆ ಬಿಜೆಪಿ ನೋಡಿಕೊಂಡಿದೆ. ಇದೀಗ ಎರಡನೇ ಅವಧಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಧಿಕಾರದ ಅವಧಿ 10 ತಿಂಗಳು ಮಾತ್ರ.
ಅಭಿನಂದನೆ: ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ಅವರು ಅವಿರೋಧ ಆಯ್ಕೆಯಾದ ನಂತರ ಅವರಿಗೆ ಹಲವು ಮುಖಂಡರು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಶ್ವತ ಅಧಿಕಾರ ಹೊಂದಲು ಯಾರಿಗೂ ಸಾಧ್ಯವಿಲ್ಲ. ಕಾಲದ ಜೊತೆ ಅಧಿಕಾರವೂ ಹಸ್ತಾಂತರವಾಗುತ್ತದೆ. ಅಧಿಕಾರವಿದ್ದಾಗ ಉತ್ತಮ ಆಡಳಿತ ನೀಡಿ ಜನರ ವಿಶ್ವಾಸವನ್ನು ಪಡೆಯಬೇಕೆಂದು ಕಿವಿ ಮಾತು ಹೇಳಿದರು.
ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವಕಾಶ ಎಲ್ಲರಿಗೂ ಬರುತ್ತದೆ. ಜನರು ಯಾರನ್ನು ಬೇಕಾದರೂ ಅಧಿಕಾರಕ್ಕೇರಿಸಬಹುದು. ಹಿಂದಿನಂತೆ ವಂಶಪಾರಂಪರ್ಯವಾಗಿ ಅಧಿಕಾರ ನಡೆಸುವುದು ಇಂದು ಸಾಧ್ಯವಿಲ್ಲ ಎಂದರು.
ಅಧಿಕಾರ ಶಾಶ್ವತವಲ್ಲ: ಅಧಿಕಾರದ ಅವಧಿಯಲ್ಲಿ ಅಧಿಕಾರದ ಪಿತ್ತವನ್ನು ನೆತ್ತಿಗೇರಿಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಅಧಿಕಾರ ಅವಧಿಯಲ್ಲಿ ಎಲ್ಲಾ ಅಧಿಕಾರಿಗಳ ಹಾಗೂ ಪ್ರತಿನಿಧಿಗಳ ವಿಶ್ವಾಸಗಳಿಸಿ ಉತ್ತಮ ಕೆಲಸ ಮಾಡಬೇಕು.
ಅಧಿಕಾರವಧಿಯಲ್ಲಿ ನಾವು ಮಾಡುವ ಕೆಲಸ ಶಾಶ್ವತವೇ ಹೊರತು ನಮ್ಮ ಅಧಿಕಾರವಲ್ಲ ಎಂದು ಹೇಳಿದರು.
ಅಭಿವೃದ್ಧಿಗೆ ಒತ್ತು ನೀಡಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ಈ ಹಿಂದೆ ಉಪಾಧ್ಯಕ್ಷರಾಗಿದ್ದ ಮಾಲಿನಿ ಬಾಯಿಯವರು ಸಹ ಹೆಚ್ಚಿನ ಸಹಕಾರ ನೀಡಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿದ್ದರು. ಸುಜಾತರವರು ಅದೇ ರೀತಿ ಸಹಕರಿಸಿ ಅಭಿವೃದ್ಧಿಗೆ ಕೈಜೋಡಿಸುವ ವಿಶ್ವಾಸವಿದೆ ಎಂದು ಜಿ.ಪಂ ಅಧ್ಯಕ್ಷರು ತಿಳಿಸಿದರು.
ಅಧಿಕಾರ ವೀಕೇಂದ್ರಿಕರಣದಡಿಯಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಈ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.
ಮುಳ್ಳಿನ ಹಾಸಿಗೆ: ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ರಮೇಶ್ ಮಾತನಾಡಿ, ಅಧಿಕಾರ ಸಿಂಹಾಸನವಾಗಿದ್ದರೂ, ಮುಳ್ಳಿನ ಹಾಸಿಗೆ.
ತಮ್ಮ ಕ್ಷೇತ್ರದ ಅಭಿವೃದ್ಧಿಗೆ, ಇಡೀ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಿ ಕೆಲಸ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಇಲಾಖೆಯ ಸೂಕ್ತ ಮಾಹಿತಿ ಪಡೆದು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಚಿತಾ ನರೇಂದ್ರ, ಸದಸ್ಯರುಗಳಾದ ನಿರಂಜನ್, ಶಿವಶಂಕರ್, ಲೋಕೇಶ್, ಶೃಂಗೇರಿ ಶಿವಣ್ಣ, ರಂಗನಾಥ್, ಪದ್ಮ ಚಂದ್ರಪ್ಪ, ಕವಿತಾ ಬೆಳ್ಳಿ ಪ್ರಕಾಶ್, ಹೇಮಾವತಿ, ಜ್ಯೋತಿ ಹೇಮಶೇಖರ್, ರವೀಂದ್ರ ಕುಕ್ಕಡಿಗೆ, ಶಿವೇಗೌಡ, ಆನಂದಪ್ಪ ಅವರು ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

