ಚಿಕ್ಕಮಗಳೂರು

ಕೆಡಿಪಿ ಸಭೆಗೆ ಅಡ್ಡಿ: ರಕ್ಷಣೆಗೆ ಸೂಚನೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜು.9
ವಿಧಾನಸಭಾ ಸದಸ್ಯರು ಅವರವರ ಕ್ಷೇತ್ರದ ಅಭಿವೃದ್ಧಿ, ಪರಿಶೀಲನಾ ಕಾಮಗಾರಿಗಳ ಅಥವಾ ಶಾಸಕರಾಗಿ ಯಾವುದೇ ಅಧಿಕೃತ ಸಭೆಗಳನ್ನು ಕರೆದಾಗ ಅವರಿಗೆ ಯಾವುದೇ ರೀತಿಯ ತೊಂದರೆಯುಂಟಾಗದಂತೆ ಕ್ರಮ ವಹಿಸಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಜೂ. 27 ರಂದು ನಗರದ ಕುಂದುಕೊರತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಅವಲೋಕನ ಮಾಡಲು ನಗರಸಭೆಯಲ್ಲಿ ಶಾಸಕ ಸಿ.ಟಿ. ರವಿ ಅವರು ಸಭೆ ಕರೆದ ವೇಳೆಯಲ್ಲಿ ಚಿಕ್ಕಮಗಳೂರು ನಗರಸಭೆಯ ಕಾಂಗ್ರೆಸ್ ಸದಸ್ಯರು ಸಭೆಗೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸಿದ್ದರು.
ಅಂದಿನ ಘಟನೆಗೆ ಸಂಬಂಧಿಸಿದಂತೆ ಸಿ.ಟಿ. ರವಿ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ತಮ್ಮ ಹಕ್ಕಿಗೆ ಚ್ಯುತಿಯಾಗಿದೆ, ಜತೆಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದರು. ಈ ಪತ್ರಕ್ಕೆ  ಸ್ಪಂದಿಸಿರುವ ವಿಧಾನಸಭಾಧ್ಯಕ್ಷರಿಗೆ ಸಿ.ಟಿ. ರವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್‌ನ ಕೀಳು ಮಟ್ಟದ ರಾಜಕೀಯ: ಜೂ. 27 ರಂದು ಕಾಂಗ್ರೆಸ್‌ನ ನಿಯೋಜಿತ ನಗರಸಭಾ ಸದಸ್ಯರು ಸಭೆಗೆ ಅಡ್ಡಿ ಪಡಿಸಿದ್ದರಿಂದ ಮುಜುಗರವಾಗಿತ್ತು. ಕಾಂಗ್ರೆಸ್‌ನ ಕೀಳು ಮಟ್ಟದ ರಾಜಕಾರಣ ಬೇಸರ ತಂದಿತ್ತು ಎಂದು ಹೇಳಿದರು.
ಚಿಕ್ಕಮಗಳೂರು ನಗರದಲ್ಲಿ ಒಳ ಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳಲ್ಲಿ ಕೆಸರಾಗಿದ್ದು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ನಗರೋತ್ಥಾನದಲ್ಲಿ ಹಿಂದಿನ ಸರ್ಕಾರ ಕೊಟ್ಟ ಅನುದಾನ ಬಿಡುಗಡೆ ಮಾಡಿದ್ದರೆ ಕೆಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಬಹುದಾಗಿತ್ತು.
ಹಿಂದಿನ ಸರ್ಕಾರ ಕೊಟ್ಟ ಹಣ ಬಿಡುಗಡೆ ಮಾಡದಂತೆ ಈಗಿನ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರು ಪತ್ರ ಬರೆದಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿರುವುದನ್ನು ವಿಧಾನಸಭೆಯಲ್ಲಿ ಪ್ರಶ್ನಿಸಲಾಗುವುದು. ತಡೆ ಹಿಡಿದಿರುವ ಅನುದಾನವನ್ನು ಬಿಡುಗಡೆ ಮಾಡಿಸಲು ಶಕ್ತಿಮೀರಿ ಪ್ರಯತ್ನ ನಡೆಸಲಾಗುವುದು ಎಂದರು.
ಅಸಹಾಯಕತೆ: ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಸಹ ರಾಜ್ಯ ಸರ್ಕಾರಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಯಮ ಬದ್ಧವಾಗಿ ರಚನೆ ಮಾಡಲು ಸಾಧ್ಯವಾಗಿಲ್ಲ ಎಂದು ಸಿ.ಟಿ. ರವಿ ಹೇಳಿದರು.
ಹಾಲಿ ಇರುವ ನಿಯಮವನ್ನು ಮೀರಿ ಮೀಸಲಾತಿ ನಿಗದಿಪಡಿಸುವಂತೆ ಒತ್ತಡ ಹಾಕುತ್ತಿರುವುದರಿಂದ ಸರ್ಕಾರಕ್ಕೆ ಮೀಸಲಾತಿ ನಿಗದಿಪಡಿಸಲು ಆಗುತ್ತಿಲ್ಲ ಎಂದ ಅವರು, ಅಧಿಕಾರ ವಿಕೇಂದ್ರೀಕರಣದ ಬದ್ಧತೆ ಇಲ್ಲದಿರುವುದು ಇದಕ್ಕೆ ಕಾರಣ. ಅಸಮರ್ಥತೆ, ಅಸಹಾಯಕತೆ ಮತ್ತು ಪಕ್ಷ ರಾಜಕಾರಣದ ಸ್ವಾರ್ಥದಿಂದಾಗಿ ಮೀಸಲಾತಿ ನಿಗದಿಪಡಿಸಲು ತಡವಾಗಿದೆ. ಈ ವಿಳಂಬ ನೀತಿಯನ್ನು ವಿಧಾನಸಭೆಯಲ್ಲಿ ಪ್ರಶ್ನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ವಕ್ತಾರ ಬಿ. ರಾಜಪ್ಪ, ನಗರಸಭಾ ಸದಸ್ಯರುಗಳಾದ ತಮ್ಮಯ್ಯ, ಪುಷ್ಪರಾಜ್ ಹಾಗೂ ಪಕ್ಷದ ಮುಖಂಡರಾದ ಪುಟ್ಟೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.