ಕೊಟ್ಟ ಮಾತಿನಂತೆ ನಡೆದುಕೊಂಡ ಕಾಂಗ್ರೆಸ್
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜು. 10
ಬಿಪಿಎಲ್ ಪಡಿತರ ಚೀಟಿದಾರರಿಗೆ 1ಗೆ 1 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಮೀನುಗಾರಿಕೆ, ಯುವಜನಸೇವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ನಗರದ ಕುವೆಂಪು ಕಲಾಮಂದಿರದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಅಕ್ಕಿ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಬಿಪಿಎಲ್ ಕುಟುಂಬಗಳಿಗೆ 1ಗೆ 1 ಕೆಜಿ ಅಕ್ಕಿ ವಿತರಣೆ ಮಾಡುವ ಯೋಜನೆಯ ಬಗ್ಗೆ ಘೋಷಣೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1.96 ಲಕ್ಷ ಬಿಪಿಎಲ್ ಕುಟುಂಬಗಳಿವೆ, ಇವರಲ್ಲಿ 438 ಏಕಸದಸ್ಯ, 17825 ದ್ವಿಸದಸ್ಯ ಹಾಗೂ 1.65 ಲಕ್ಷ ಮೂರಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬಗಳಿವೆ. ಕಡು ಬಡವರು ಉಪವಾಸದಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶ. ಬಹಳ ಹಿಂದೆ ಬಡವರು ತುತ್ತು ಅನ್ನಕ್ಕೆ ಬಹಳ ತಾತ್ವರ ಪಡುತ್ತಿದ್ದರು. ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯ ಆರಂಭಿಕ ಲೋಪದೋಷಗಳನ್ನು ಸರಿಪಡಿಸಿ, ಮುಂದೆ ಇದನ್ನು ವ್ಯವಸ್ಥಿತಗೊಳಿಸಲಾಗುವುದು. ಯೋಜನೆಯ ಯಶಸ್ವಿಗೆ ಜನರ ಸಹಕಾರವೂ ಅಗತ್ಯವಾಗಿದೆ ಎಂದು ತಿಳಿಸಿದರು.
ಬಡವರಿಗೆ ಲಾಭ: ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇದೊಂದು ಬಡವರಿಗೆ ನೇರವಾಗಿ ತಲುಪುವ ಕಾರ್ಯಕ್ರಮವಾಗಿದೆ. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದರೂ, ಅಂತಿಮವಾಗಿ ಇದರಿಂದ ಬಡವರಿಗೆ ಲಾಭವಾಗುತ್ತಿದೆ ಎಂದರು.
ರಾಜ್ಯದಲ್ಲಿ ಅನೇಕ ಅನರ್ಹ ಕುಟುಂಬಗಳು ಬಿ.ಪಿ.ಎಲ್. ಪಡಿತರ ಚೀಟಿಯನ್ನು ಪಡೆದಿದ್ದು, ಅಂತಹವರು ತಾವೇ ಮುಂದೆ ಬಂದು ಬಿಪಿಎಲ್ ಪಡಿತರ ಚೀಟಿಯನ್ನು ಸರಕಾರಕ್ಕೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು.
ಮನೋಭಾವನೆ ಬದಲಾಗಲಿ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಇದೊಂದು ಒಳ್ಳೆಯ ಕೆಲಸ, ಆದರೆ, ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಸ್ಥಿತಿವಂತರಿದ್ದರೂ ಕೂಡ ಸರ್ಕಾರದ ಸವಲತ್ತು ಪಡೆಯುವ ಉದ್ದೇಶದಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದುತ್ತಿದ್ದಾರೆ. ಈ ಮನೋಭಾವನೆ ಬದಲಾಗಬೇಕು. ಜನರಲ್ಲಿ ದುಡಿಯುವ ಮನೋಭಾವನೆ ಬೆಳೆಸಬೇಕು. ಇಂತಹ ಯೋಜನೆಗಳು ತಾತ್ಕಾಲಿಕವಾಗಿರಬೇಕು ಎಂದು ಹೇಳಿದರು.
ಸ್ವಾವಲಂಭಿಗಳನ್ನಾಗಿಸಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ. ರವಿ ಮಾತನಾಡಿ, ಬಡವರಿಗೆ ಯಾವುದೇ ವಸ್ತುವನ್ನು ಬಡವರು ಕೊಳ್ಳುವ ಸಾಮರ್ಥ್ಯ ಬಂದಾಗಲೇ ದೇಶ ಸ್ವಾವಲಂಭಿಯಾಗುತ್ತದೆ. ಯಾವುದೇ ನೀತಿಗಳು ಜನರನ್ನು ಸ್ವಾವಲಂಭಿಗಳನ್ನಾಗಿಸಬೇಕು. ಜಿಲ್ಲೆಯ ಹಲವೆಡೆ ಕೃಷಿ ಭೂಮಿಗಳಲ್ಲಿ ವಾಣಿಜ್ಯ ಬೆಳೆಗಳ ಕೃಷಿ ಅಧಿಕವಾಗಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.
ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್ ಮಾತನಾಡಿದರು. ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿ.ಪಂ. ಉಪಾಧ್ಯಕ್ಷೆ ಸುಜಾತ, ತಾ.ಪಂ. ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಪುಟ್ಟೇಗೌಡ, ಜಿಲ್ಲಾಧಿಕಾರಿ ವಿ. ಯಶವಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ತರೀಕೆರೆ ಉಪ ವಿಭಾಗಾಧಿಕಾರಿ ಅನುರಾಧಾ ಉಪಸ್ಥಿತರಿದ್ದರು.
ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಸದಾಶಿವ ಸ್ವಾಗತಿಸಿದರು, ಉಪ ನಿರ್ದೇಶಕ ರತ್ನಾಕರ ನಾಯಕ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

