ಚಿಕ್ಕಮಗಳೂರು

ಅನುದಾನಕ್ಕೆ ತಡೆ: ಪ್ರತಿಭಟನೆ

Published On :

ಕ.ಪ್ರ. ವಾರ್ತೆ ಚಿಕ್ಕಮಗಳೂರು  ಜು.13
ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ರಾಜ್ಯ ಸರ್ಕಾರ ತಡೆ ಹಿಡಿದಿರುವುದನ್ನು ಖಂಡಿಸಿ ನಗರದ 6 ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಕಾರ್ಯಕರ್ತರು ಏಕ ಕಾಲದಲ್ಲಿ ಶನಿವಾರ ರಸ್ತೆ ತಡೆ ನಡೆಸಿದರು.
 ಇಲ್ಲಿನ ಕೆಇಬಿ, ಕತ್ರಿಮಾರಮ್ಮ, ಎನ್‌ಎಂಸಿ, ಕೋಟೆ, ಶ್ರೀ ಬೋಳರಾಮೇಶ್ವರ ಹಾಗೂ ಎಐಟಿ ವೃತ್ತಗಳಲ್ಲಿ ಮಧ್ಯಾಹ್ನ ಏಕ ಕಾಲದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಇಲ್ಲಿನ ಎನ್‌ಎಂಸಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಅಗಲೀಕರಣ: ಶಾಸಕರು ವಿಶೇಷ ಕಾಳಜಿ ವಹಿಸಿ ಬಸವನಹಳ್ಳಿ ಕೆರೆ ಏರಿಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇದೇ ರಸ್ತೆಗೆ ಹೊಂದಿಕೊಂಡಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿ ಸೇತುವೆ ದುರಸ್ತಿ ಕಾಣದೇ ವಾಹನ ಸವಾರರು ಮೃತಪಟ್ಟಿರುವ ಅವಗಡಗಳು ಸಂಭವಿಸಿವೆ. ಇದನ್ನು ಗಮನಿಸಿ ಸೇತುವೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸಲು ಹಾಗೂ ಐಜಿ ರಸ್ತೆ ಮತ್ತು ಆರ್.ಜಿ. ರಸ್ತೆ ಅಗಲೀಕರಣದ ನಂತರ ಸಿಕ್ಕ ಅಲ್ಪಾವಧಿಯಲ್ಲೇ ಕೋಟ್ಯಂತರ ರುಪಾಯಿ ಹಣವನ್ನು ನೀಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಫುಟ್‌ಪಾತ್ ಒಳಗೊಂಡಂತೆ ರಸ್ತೆಯನ್ನು ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸಲಾಯಿತು.
ನಗರೋತ್ಥಾನ ಯೋಜನೆ: ನಗರದ ಜನರಿಗೆ ಅನುಕೂಲವಾಗಲು ಒಳ ಚರಂಡಿ ನಿರ್ಮಾಣಕ್ಕೆ 60 ಕೋಟಿ ರುಪಾಯಿ ತರಲಾಯಿತು. ಕೆಎಂಆರ್‌ಪಿ ಯೋಜನೆಯಡಿ ನಗರದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದಂತೆ ಯುಜಿಡಿಗಾಗಿ ಅಗೆದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರೋತ್ಥಾನ ಯೋಜನೆಯಡಿ 30 ಕೋಟಿ ರುಪಾಯಿ ಹಣ ಬಿಜೆಪಿ ಸರ್ಕಾರದಲ್ಲೇ ಮಂಜೂರು ಮಾಡಿಸಿ ಜಿಲ್ಲಾಧಿಕಾರಿಗಳ ಬಳಿ ಕಡತ ಹೋಗಿದೆ.
ಸರ್ಕಾರ ಬದಲಾದ ಹಿನ್ನಲೆಯಲ್ಲಿ ಕಾಂಗ್ರೆಸ್ಸಿನವರು ಈ ಹಣವನ್ನು ತಡೆ ಹಿಡಿದಿದ್ದಾರೆ ಎಂದು ಮನವಿಯಲ್ಲಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
 ಸ್ಥಳೀಯ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರ ಪತಿ ಚುನಾವಣೆಯಲ್ಲಿ ಪರಾಭವಗೊಂಡ ಹಿನ್ನಲೆಯಲ್ಲಿ ದ್ವೇಷದ ರಾಜಕಾರಣ ಮಾಡಿ ಈ ಕಾಮಗಾರಿಗಳ ಅನುದಾನ ತಡೆ ಹಿಡಿಯುವಂತೆ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ನಗರ ಸೇರಿದಂತೆ ಜಿಲ್ಲೆಯ 36 ಕೋಟಿ ರುಪಾಯಿ ಮತ್ತು ನಗರೋತ್ಥಾನದ 30 ಕೋಟಿ ರುಪಾಯಿ ಹಣವನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.