ಚಿಕ್ಕಮಗಳೂರು

ಕ್ಯಾರಿ ಓವರ್ ಪದ್ಧತಿ ಮುಂದುವರಿಸಲು ಆಗ್ರಹ

Published On :

ಚಿಕ್ಕಮಗಳೂರು: ಡಿಪ್ಲೊಮಾ ತರಗತಿಗಳಿಗೆ ಹಳೆಯ ಕ್ಯಾರಿ ಓವರ್ ಪದ್ಧತಿಯನ್ನು ಮುಂದುವರೆಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀರಾಮ ಸೇನೆಯ ಜಿಲ್ಲಾ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಡಿಪ್ಲೊಮೊ ವಿದ್ಯಾರ್ಥಿಗಳು 10ಕ್ಕೂ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ ಸಹ ಮುಂದಿನ ತರಗತಿಗೆ ಪ್ರವೇಶ ಪಡೆಯಬಹುದಾಗಿತ್ತು. ಆದರೆ, ಈ ಪ್ರಸಕ್ತ ಸಾಲಿನಿಂದ ಅದನ್ನು 4 ವಿಷಯಗಳಿಗೆ ಸೀಮಿತಗೊಳಿಸಿದ್ದು, ಇದರಿಂದ ಮೊದಲನೆ ಮತ್ತು ಎರಡನೇ ಸಾಲಿನ ಪರೀಕ್ಷೆಯಲ್ಲಿ 4 ವಿಷಯಗಳಿಗಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಡಿಪ್ಲೊಮೊ ವಿದ್ಯಾರ್ಥಿಗಳು ಮುಂದಿನ ಪ್ರವೇಶ ಪಡೆಯದೆ ಒಂದು ವರ್ಷ ವ್ಯರ್ಥವಾಗಲಿದೆ. ಈ ಚಿಂತೆ ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕ್ಯಾರಿಓವರ್ ಮುಂದುವರಿಸಿ: ಕಳೆದ ಎರಡು ವರ್ಷಗಳಿಂದ ಸರ್ಕಾರ ತಮ್ಮ ನಿರ್ಧಾರವನ್ನು ಪದೇ ಪದೇ ಬದಲಾಯಿಸುತ್ತಾ ವಿದ್ಯಾರ್ಥಿಗಳ ಜೀವನದ ಜತೆ ಆಟವಾಡುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿ ಈ ಹಿಂದಿದ್ದ ಕ್ಯಾರಿ ಓವರ್ ಪದ್ಧತಿಯನ್ನು ಮುಂದುವರೆಸಬೇಕು. ಇಲ್ಲದೆ ಹೋದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
 ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ತಾಲೂಕು ವಿದ್ಯಾರ್ಥಿ ಪ್ರಮುಖ್ ರಂಜಿತ್ ಬಿ.ವಿ. ಶೆಟ್ಟಿ, ನಗರ ವಿದ್ಯಾರ್ಥಿ ಪ್ರಮುಖ್ ಎ. ರಕ್ಷಿತ್, ಗುರುರಾಜ್, ಶರತ್, ಪ್ರೀತಂ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.