ದತ್ತಪೀಠ: ಹಳೆ ಕಟ್ಟಡ ದುರಸ್ತಿ ಕೋರಿ ಪತ್ರ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜು.18
ವಿವಾದದ ಕಾರ್ಮೋಡದಲ್ಲಿ ದತ್ತಪೀಠ ಮುಚ್ಚಿ ಹೋಗಿದೆ. ಇಲ್ಲಿಗೆ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಮೂಲ ಸೌಲಭ್ಯಗಳನ್ನೂ ನೀಡದ ಪರಿಸ್ಥಿತಿಯನ್ನು ತಂದೊಡ್ಡಿದೆ.
ಇದನ್ನು ಆವರಿಸಿಕೊಂಡಿರುವ ವಿವಾದಗಳು ಒಂದಕ್ಕೊಂದು ಹೆಣೆದುಕೊಂಡಿದ್ದು, ಇವುಗಳಿಂದ ಹೊರ ಬರಲು ಸಾಧ್ಯವೇ ಇಲ್ಲ ಎನ್ನುವಂತೆ ಪರಿಸ್ಥಿತಿ ಕೈಮೀರಿದೆ. ಇದು, ಇಲ್ಲಿನ ಅಭಿವೃದ್ಧಿ ಕೆಲಸಗಳ ಮೇಲೂ ದುಷ್ಪರಿಣಾಮ ಬೀರಿದೆ.
ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ದತ್ತ ಪೀಠಕ್ಕೆ ಸಂಬಂಧಿಸಿದ ಕೇಸ್ವೊಂದರಲ್ಲಿ ಆದೇಶ ಹೊರಡಿಸಿದ್ದು, ದತ್ತಪೀಠದಲ್ಲಿ ಇನ್ನು ಮುಂದೆ ದುರಸ್ತಿಯಾಗಲಿ ಅಥವಾ ಹೊಸ ಕಟ್ಟಡಗಳನ್ನ ನಿರ್ಮಿಸಬಾರದು. ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕೆಂದು ಹೇಳಿತ್ತು.
ಈ ಆದೇಶದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ನ್ಯಾಯಾಲಯಕ್ಕೆ ದತ್ತಪೀಠದ ಸುತ್ತಮುತ್ತಲಿರುವ ಕಟ್ಟಡಗಳ ವಸ್ತು ಸ್ಥಿತಿಯನ್ನು ಮನವರಿಕೆ ಮಾಡುವ ಸಂಬಂಧ ಮುಜರಾಯಿ ಇಲಾಖೆ ಹಲವು ಕಾರಣಗಳನ್ನು ನೀಡಿ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಪತ್ರವೊಂದನ್ನು ಬರೆದಿದೆ.
ದತ್ತಪೀಠದ ಸುತ್ತಮುತ್ತ ಭಕ್ತರಿಗೆ ತಂಗಲು ನಿರ್ಮಿಸಿರುವ ವಸತಿಗೃಹಗಳು, ಶೌಚಾಲಯಗಳು ಹಾಳಾಗಿವೆ. ಈ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ವಸತಿ ಗೃಹಗಳು ವರ್ಷದಿಂದ ವರ್ಷಕ್ಕೆ ತುಂಬಾ ಹಾಳಾಗುತ್ತಿವೆ.
ಇದರೊಂದಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಆಗಬೇಕಾಗಿದೆ. ಹಾಳಾಗಿರುವ ವಾಣಿಜ್ಯ ಮಳಿಗೆಗಳೂ ದುರಸ್ತಿಯಾಗಬೇಕಾಗಿದೆ. ದತ್ತಪೀಠದ ಸಮೀಪದಲ್ಲಿರುವ ಕೆರೆ ಕಟ್ಟೆ ಶಿಥಿಲಗೊಂಡಿದ್ದು, ಕೆರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾದರೆ ಬಂಡ್ ನಿರ್ಮಿಸಬೇಕು. ಆದುದರಿಂದ ತುರ್ತಾಗಿ ಆಗಬೇಕಿರುವ ಈ ಕೆಲಸಗಳಿಗೆ ಅನುಮತಿ ನೀಡಲು ಕೋರಲಾಗಿದೆ.
ಆದೇಶದ ಉಲ್ಲಂಘನೆ ಅಸಾಧ್ಯ: ಮುಜರಾಯಿ ಇಲಾಖೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಮಾತ್ರಕ್ಕೆ ಕಾಮಗಾರಿಗೆ ಅನುಮತಿ ಸಿಗುತ್ತದೆ ಎನ್ನಲಾಗದು. ಕಾರಣ, ಈಗಾಗಲೇ ಸುಪ್ರೀಂ ಕೋರ್ಟ್ ದತ್ತಪೀಠದಲ್ಲಿ ದುರಸ್ತಿ ಮತ್ತು ಹೊಸ ಕಟ್ಟಡ ನಿರ್ಮಿಸದಂತೆ ಸೂಚಿಸಿದ್ದರಿಂದ ಈ ಆದೇಶವನ್ನು ಉಲ್ಲಂಘಿಸುವಂತಿಲ್ಲ.
ಅಂಥ ಸಾಹಸಕ್ಕೆ ರಾಜ್ಯ ಸರ್ಕಾರ ಕೈ ಹಾಕಲು ಹೋಗುವುದಿಲ್ಲ. ಅದ್ದರಿಂದ ಇಲ್ಲಿನ ವಸ್ತು ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಇದಕ್ಕೆ ನ್ಯಾಯಾಲಯದಿಂದ ಒಪ್ಪಿಗೆ ಪಡೆಯಬೇಕಾಗಿದೆ.
ಇಲ್ಲಿರುವ ಕಟ್ಟಡಗಳನ್ನು ದುರಸ್ತಿ ಮಾಡದೇ ಹೋದಲ್ಲಿ, ಮುಂದೊಂದು ದಿನ ಅವುಗಳು ಒಂದೊಂದಾಗಿ ಬಿದ್ದು ನೆಲ ಸಮವಾಗಲಿವೆ. ದತ್ತ ಪೀಠದ 14 ಎಕರೆ ಸುತ್ತಳತೆ ಪ್ರದೇಶದಲ್ಲಿ ಹೊಸದಾಗಿ ಯಾವುದೇ ಅಭಿವೃದ್ಧಿ ಕೆಲಸಗಳು, ಪ್ರವಾಸಿಗರಿಗಾಗಿ ಹೈಟೆಕ್ ವಸತಿ ಗೃಹ ನಿರ್ಮಿಸಲು ಅವಕಾಶವೇ ಇಲ್ಲ.
ದತ್ತಪೀಠದ ಗುಹೆಯ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಪುರಾತತ್ವ ಇಲಾಖೆ ದತ್ತಪೀಠದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಹಾಲಿ ಇರುವ ವ್ಯವಸ್ಥೆಯನ್ನೇ ಸರಿಪಡಿಸಬೇಕು. ಇಲ್ಲದೆ ಹೋದರೆ ಭಕ್ತರಿಗೆ ತುಂಬಾ ತೊಂದರೆಯಾಗಲಿದೆ.
ಹಣ ಬಳಕೆಯಾಗಿಲ್ಲ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದತ್ತಪೀಠದ ಅಭಿವೃದ್ಧಿಗೆ 12.50 ಕೋಟಿ ಮಂಜೂರಾಗಿತ್ತು. ಈ ಹಣದಲ್ಲಿ ಯಾತ್ರಿ ನಿವಾಸ್, ವಾಹನಗಳ ಪಾರ್ಕಿಂಗ್, ಪಾರ್ಕ್, ವಾಣಿಜ್ಯ ಸಂಕೀರ್ಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.
ಇಲ್ಲಿ ಯಾತ್ರಿ ನಿವಾಸ್ ನಿರ್ಮಾಣ ಮಾಡಿದರೆ ಪ್ರಕೃತಿಯ ಮೂಲ ಸ್ವರೂಪಕ್ಕೆ ದಕ್ಕೆಯಾಗುತ್ತದೆ ಎಂಬುದನ್ನು ಅರಿತು, ಈ ಯಾತ್ರಿ ನಿವಾಸವನ್ನು ಚಿಕ್ಕಮಗಳೂರಿನಿಂದ ದತ್ತಪೀಠಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಕೈ ಮರದ ಬಳಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಸ್ಥಳವನ್ನು ಗುರುತಿಸಲಾಗಿತ್ತು.
ಆದರೆ, ಆ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಈ ಕಟ್ಟಡ ನಿರ್ಮಾಣವನ್ನು ಕೈ ಬಿಡಲಾಗಿದೆ.
ದತ್ತಪೀಠದ ಅಭಿವೃದ್ಧಿಗೆ ಮಂಜೂರಾಗಿದ್ದ 12.50 ಕೋಟಿಯಲ್ಲಿ ಕಳೆದ ವರ್ಷ 4 ಕೋಟಿ ಬಿಡುಗಡೆ ಮಾಡಿತ್ತು.
ಈ ಹಣವನ್ನು ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ 1400 ಮೀ. ಕಾಂಕ್ರಿಟ್ ರಸ್ತೆ ನಿರ್ಮಿಸಲು ಬಳಸಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಮಳೆಗಾಲದದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

