ನಶಿಸುತ್ತಿರುವ ಹಳೆಗನ್ನಡ ಕಾವ್ಯ: ಆತಂಕ
ಮೂಡಿಗೆರೆ: ಇಂದಿನ ದಿನಗಳಲ್ಲಿ ವಿದ್ಯಾನಿಲಯದ ಹಂತದಲ್ಲೂ ಹಳೆಗನ್ನಡ ಕಾವ್ಯಗಳನ್ನು ಆಸಕ್ತಿಯಿಂದ ಓದುವ ವಿದ್ಯಾರ್ಥಿಗಳಿರಲಿ, ಉಪನ್ಯಾಸಕರನ್ನು ಹುಡುಕುವುದೇ ಒಂದು ದೊಡ್ಡ ಸಾಹಸವಾಗಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಅಭಿಪ್ರಾಯ ಪಟ್ಟರು.
ಹೊರನಾಡಿನ ಲಲಿತಾಕಲಾ ಮಂಟಪದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ 2 ದಿನಗಳ ಕಾಲ ನಡೆದ ಗಮಕ ಕಲಾ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನಗಳಿಗೆ ಹೋರಾಟ ಮತ್ತು ಅದರ ಫಲಶೃತಿಯಾಗಿ ಕನ್ನಡವು ಶಾಸ್ರೀಯ ಭಾಷೆಯೆಂದು ಘೋಷಣೆ. ಇದು ಪ್ರತಿಯೊಬ್ಬರಿಗೂ ತಿಳಿದ ವಿಷಯವಾಗಿದೆ. ಆದರೆ, ಇದು ಈ ಹೊತ್ತಿನ ಗೆಲುವಲ್ಲ. ಸಾವಿರಾರು ವರ್ಷಗಳಿಂದ ಕಾವ್ಯಧಾರೆಗೆ ಸಂದ ಜಯ ಎಂದರು.
ಗಂಭೀರ ಚಿಂತನೆ ಅಗತ್ಯ: ಶಾಲೆಗಳಲ್ಲಿ ಮಕ್ಕಳಿಗೆ ಗಮಕ ಕಮ್ಮಟಗಳನ್ನೇರ್ಪಡಿಸಿ ಮಕ್ಕಳಿಂದ ಸ್ಪರ್ಧಾತ್ಮಕವಾಗಿ ಕಾವ್ಯದ ಭಾಗಗಳನ್ನು ಓದಿಸಿ ಬಾಲ್ಯದಲ್ಲಿಯೇ ರುಚಿ ಹಚ್ಚಿಸಿದರೆ ಮುಂದೆ ಜೀವನದ ಅಭಿರುಚಿಯಾಗಿ ವೃದ್ಧಿಸುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸ ಬೇಕಾಗಿದೆ. ಪಂಪನಿಂದ ಇತ್ತೀಚಿನ ಕವಿ ಕಣತಿಗಳವರೆಗೂ ಎಲ್ಲಾ ಕನ್ನಡಿಗರಿಗೂ ತಿಳಿಯುವಂತಾಗ ಬೇಕಿದ್ದುದು ಅತ್ಯವಶ್ಯಕ. ಗಮಕವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದರು.
ಗಮಕ ಉಳಿವಿಗೆ ಶ್ರಮಿಸಿ: ಕಸಾಪ ಜಿಲ್ಲಾಧ್ಯಕ್ಷ ಶಿವಸ್ವಾಮಿ ಮಾತನಾಡಿ, ಕನ್ನಡಕ್ಕೆ ಸಂಸ್ಕೃತ ಸೇರಿದಂತೆ ಗಮಕ ಮೂಲ ಬೇರು. ತಾಯಿ ಬೇರು ಇಲ್ಲದೆ ಬಳ್ಳಿ ಬೆಳೆಯಲು ಹೇಗೆ ಸಾಧ್ಯವಿಲ್ಲವೋ. ಹಾಗೇ ಗಮಕ ಮತ್ತು ಸಂಸ್ಕೃತ ಇಲ್ಲದೆ ಕನ್ನಡ ಬೆಳೆಯಲು ಸಾಧ್ಯವಿಲ್ಲ. ಸಂಸ್ಕೃತ ಮತ್ತು ಗಮಕದ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನು ಪಣ ತೊಡಬೇಕು ಎಂದು ಅಭಿಪ್ರಾಯಿಸಿದರು.
ಜಿ.ಪಂ.ಸದಸ್ಯೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಗಮಕ ಕಲಾ ಸಮ್ಮೇಳನಕ್ಕೆ ಪ್ರಥಮ ಆಧ್ಯತೆ ನೀಡಿರುವುದು ಬಹಳ ಸಂತಸಕರ ವಿಷಯವಾಗಿದೆ. ಪಠ್ಯ ಪುಸ್ತಕದಲ್ಲಿ ಗಮಕವನ್ನು ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಗಮಕ ಕಲಾ ಕೇಂದ್ರವನು ತೆರಯುವುದರ ಮೂಲಕ ತರಬೇತಿ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಮಕ ಕಲಾ ನಿಧಿಗೆ ಶ್ರೀ ಕ್ಷೇತ್ರದ ವತಿಯಿಂದ ಡಾ. ಜಿ.ಭೀಮೇಶ್ವರ ಜೋಷಿ 20 ಸಾವಿರವನ್ನು ದೇಣಿಗೆಯಾಗಿ ನೀಡಿದರು.
ಇದೇ ಸಂದರ್ಭದಲ್ಲಿ ಗಮಕದಲ್ಲಿ ಸಾಧನೆ ಗೈದ ಡಾ.ಎಂ.ಕೆ. ರಾಮಶೇಷನ್ ಅವರಿಗೆ ಗಮಕ ಕಲಾ ಶ್ರೀ ಪ್ರಶಸ್ಥಿಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಎಸ್.ಎಲ್. ರಾಧಕೃಷ್ಣ, ಡಾ. ಜೆ.ಪಿ. ಕೃಷ್ಣೇಗೌಡ, ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷ ಎಮ್.ಆರ್. ಸತ್ಯನಾರಾಯಣ್, ತಾ.ಪಂ. ಅಧ್ಯಕ್ಷ ಎಂ.ಎ. ಶೇಷಗಿರಿ, ರಾಜಲಕ್ಷ್ಮೀ ಭೀ. ಜೋಷಿ, ಬೆಳವಾಡಿ ಮಂಜುನಾಥ್, ಡಾ. ದೇವನೂರ್, ರಾಮಸುಬ್ರಾಯ ಶೇಟ್, ಡಾಣಜ್ಯೋತಿ ಕೃಷ್ಣೇಗೌಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

