ಚಿಕ್ಕಮಗಳೂರು

ಶಿಕ್ಷಣ- ಸಂಸ್ಕಾರಕ್ಕೆ ಗುರುವಿನ ಅಗತ್ಯವಿದೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.22
ನಗರದ ವಿವಿಧೆಡೆ ಸೋಮವಾರ ಗುರುಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಇಲ್ಲಿನ ಮಹರ್ಷಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಕಾರ್ಯಕ್ರಮದ ಅಂಗವಾಗಿ ಅಕ್ಷರಾಭ್ಯಾಸ ಮಾಡಿಸಲಾಯಿತು.
ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಶ್ರೀ ಕಾಶೀ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಮಹರ್ಷಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಹರ್ಷಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸತ್ಯಪ್ರಕಾಶ್ ಸಿಂಗ್, ಜ್ಞಾನ ಸಂಪತ್ತಿನ ಆರಾಧಕರೆಂದರೆ ಗುರುಗಳೇ ಹೊರತು ಬೇರಾರೂ ಅಲ್ಲ. ಇಂದಿನ ಸಮಾಜದಲ್ಲಿನ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಗುರುವಿನ ಅಗತ್ಯವಿದೆ ಎಂದು ಹೇಳಿದರು.
ಪ್ರತಿನಿತ್ಯ ಮನೆಯಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ಪುರಾಣ ಕತೆಗಳನ್ನು ಹೇಳಿಕೊಟ್ಟು, ಉತ್ತಮ ಮಾರ್ಗದರ್ಶನ ನೀಡಿ ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಇದೆ ಎಂದರು.
ಹಾಗೆಯೇ ವಿದ್ಯಾರ್ಥಿಗಳು ತಮ್ಮ ದೈನಂದಿನ ಕೆಲಸಗಳಿಗೆ ಹೊರಡುವ ಮುನ್ನ ಹಿರಿಯರಿಗೆ ನಮಸ್ಕರಿಸುವುದನ್ನು ರೂಢಿಸಿಕೊಳ್ಳಬೇಕು. ಗುರು ಆರಾಧನೆಗೆ ಮತ್ತು ಸಾಧಕರಿಗೆ ಗುರು ಪೂರ್ಣಿಮಾ ಶ್ರೇಷ್ಠ ಹಾಗೂ ಪ್ರಾಶಸ್ತ್ಯವಾದ ದಿನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಣಪತಿ ಪೂಜೆ ನೆರೆವೇರಿಸಿ 38 ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಶಿಕ್ಷಕಿ ವತ್ಸಲ ಸ್ವಾಗತಿಸಿದರು, ರೇಣುಕ ವಂದಿಸಿದರು.
ವಿದ್ಯಾರ್ಥಿ ವೇತನ ವಿತರಣೆ: ಶಿಕ್ಷಣ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಸಂಘ, ಸಂಸ್ಥೆ, ಜನಾಂಗದ ಏಳಿಗೆಗೆ ಗುರುಗಳ ಅನುಗ್ರಹ ಅತಿಮುಖ್ಯ ಎಂದು ಶಾರದಾ ಪೈ ಕಲ್ಯಾಣ ಮಂಟಪದ ಅಧ್ಯಕ್ಷ ಜಯಂತ್ ಪೈ ಹೇಳಿದ್ದಾರೆ.
ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಶ್ರೀ ಕಾಶೀ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇತನ ನೀಡಿ ಮಾತನಾಡಿದ ಅವರು, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷವು ಸಂಘದ ವತಿಯಿಂದ ಪ್ರತಿಭಾನ್ವಿತ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಜನಾಂಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇಂತಹ ಪ್ರೋತ್ಸಾಹಧನ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಹುಮ್ಮಸ್ಸು ಹಾಗೂ ಸಹಕಾರ ನೀಡುತ್ತದೆ. ಉನ್ನತ ವಿದ್ಯಾಭ್ಯಾಸದೊಂದಿಗೆ ಸಮಾಜಕ್ಕೆ ಹಾಗೂ ಜನಾಂಗಕ್ಕೆ ಕೀರ್ತಿ ತರಲು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಂಡಿತ್ ಬಿ. ಕೃಷ್ಣ ಭಟ್ ಗುರುಪೂರ್ಣಿಮೆಯಲ್ಲಿ ಗಣಪತಿ ಹೋಮ, ಗುರುಪೂಜೆ, ಪಾದುಕಾ ಪೂಜೆ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿ, ಪ್ರಸಾದ ವಿನಿಯೋಗಿಸಲಾಯಿತು. ಸದಸ್ಯರಾದ ಡಾ. ಯಶ್ವಂತ್ ಪ್ರಭು, ಕೃಷ್ಣಪ್ರಭು, ಮುರಳೀಧರ್ ಕಿಣಿ, ನಗರಸಭೆ ಸದಸ್ಯ ರವೀಂದ್ರ ಪ್ರಭು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.