ಚಿಕ್ಕಮಗಳೂರು

ಸಿದ್ದು ಸರ್ವಾಧಿಕಾರ ನಿಲುವು: ಬಿಎಸ್‌ವೈ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ.2
ಸಿದ್ದರಾಮಯ್ಯ ಸಿಎಂ ಆದ ನಂತರದಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳು ಸರ್ವಾಧಿಕಾರದ್ದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
 ಒಂದು ರುಪಾಯಿಗೆ ಕೆಜಿ ಅಕ್ಕಿ ವಿತರಣೆ, ಗುಟ್ಕಾ ನಿಷೇಧ ಸೇರಿದಂತೆ ಕೆಲವು ತೀರ್ಮಾನಗಳು ತೆಗೆದುಕೊಳ್ಳುವ ಮೊದಲೇ ಯೋಚಿಸಬೇಕಾಗಿತ್ತು ಎಂದು ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡಿದ್ದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಅವರು ತಿಳಿಸಿದರು.
5-6 ತಿಂಗಳು ಸಮಯ ಬೇಕು: ಸಿಎಂ ಆಗುವುದು ಸಿದ್ದರಾಮಯ್ಯ ಅವರ ಬಹಳ ವರ್ಷದ ಕನಸು, ಅದು, ಈಗ ನನಸಾಗಿದೆ. ಮುಖ್ಯಮಂತ್ರಿಯಾಗಿದ್ದಾರೆ ಒಳ್ಳೆಯ ಆಡಳಿತ ನೀಡಲಿ, ಯಶಸ್ಸು ಆಗಲೀ ಎಂದು ಹಾರೈಸುತ್ತೇನೆ. ಯಾವುದೇ ಟೀಕೆ ಟಿಪ್ಪಣಿ ಮಾಡಲು ಐದಾರು ತಿಂಗಳು ಸಮಯಬೇಕು. ಆದರೆ, ಸಿದ್ದರಾಮಯ್ಯ ಬಹಳ ವೇಗದಲ್ಲಿದ್ದಾರೆ. ಅನೇಕ ರೀತಿಯ ಭರವಸೆ ನೀಡುತ್ತಿದ್ದಾರೆ. ಆ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬುದನ್ನು ನೋಡಬೇಕಾಗಿದೆ. ಒಂದು ರುಪಾಯಿಗೆ ಕೆ.ಜಿ. ಅಕ್ಕಿ ಕೊಡುತ್ತೆವೆಂದು ಹೇಳಿ, ನಂತರದಲ್ಲಿ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅದುದರಿಂದ ಈ ಕಾರ್ಯಕ್ರಮ ಮುಂದೆ ಹಾಕಲಾಗಿದೆ ಎಂದು ಹೇಳಿದ್ದಾರೆ.
 ಅಧಿಕಾರಕ್ಕೆ ಬರುತ್ತಿದ್ದಂತೆ ಅವರು ಚೀಪ್ ಕ್ವಾಲಿಟಿ ಹೇಳಿಕೆ ನೀಡುತ್ತಿದ್ದಾರೆ. ಅದರ ಬಗ್ಗೆ ಆ ಪಕ್ಷದವರು ಚಿಂತನೆ ಮಾಡಿ ಗಮನ ಹರಿಸಬೇಕು ಎಂದು ಹೇಳಿದರು.
ಎಡವಿದ್ದಾರೆ: ರೈತರಿಗೆ ಅಘಾತ ತಂದಿರುವುದು ಗುಟ್ಕಾ ನಿಷೇಧ. ಮಳೆ ಇಲ್ಲದೆ ರೈತರು ಬರಗಾಲಕ್ಕೆ ಸಿಲುಕಿದ್ದಾರೆ. ಅಡಕೆ ಬೆಳೆಗಾರರು ಬೀದಿಗೆ ಬಂದಿದ್ದಾರೆ. ಗುಟ್ಕಾ ನಿಷೇಧ ಮಾಡುವುದೇ ಆದರೆ ಸದನದಲ್ಲಿ ಈ ಬಗ್ಗೆ ಚರ್ಚಿಸಿ, ಇದರ ಸಾಧಕ ಮತ್ತು ಬಾಧಕಗಳ ಬಗ್ಗೆ ಪರಿಶೀಲಿಸಿ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈ ವಿಷಯದಲ್ಲಿ ಸಿಎಂಯವರು ಎಡವಿದ್ದಾರೆ. ಮುಖ್ಯಮಂತ್ರಿಯವರು, ಮಂತ್ರಿಗಳು ಈ ವಿಷಯದಲ್ಲಿ ಆವೇಶಭರಿತರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
 ಇನ್ನೊಂದು ನೋವು ತಂದಿರುವ ವಿಷಯವೆಂದರೆ, ಕೆಪಿಸಿಸಿ ಸಭೆಯಲ್ಲಿ ಮುಖ್ಯಮಂತ್ರಿಯವರು ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋಮುವಾದದ ರಾಜಕಾರಣ ಹಾದಿ ಹಿಡಿದ ಕಾರಣ ಅಲ್ಪಸಂಖ್ಯಾತರು ಆತಂಕದಲ್ಲಿದ್ದರು. ಕಾಂಗ್ರೆಸ್ ಅಂತಹ ಪರಿಸ್ಥಿತಿಗೆ ಅವಕಾಶ ನೀಡುವುದಿಲ್ಲ. ಅಲ್ಪಸಂಖ್ಯಾತರಿಗೆ ಧೈರ್ಯ ತುಂಬಲು ಗೃಹ ಖಾತೆಯನ್ನು ಅಲ್ಪಸಂಖ್ಯಾತಕ್ಕೆ ಸೇರಿದವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಒಂದೇ ತಾಯಿ ಮಕ್ಕಳಂತೆ: ಕಳೆದ ಐದು ವರ್ಷದಲ್ಲಿ ನಾನು ಮೂರು ಕಾಲು ವರ್ಷ ಮುಖ್ಯಮಂತ್ರಿಯಾಗಿದ್ದೆ. ಆಗ ಚರ್ಚ್ ಮೇಲೆ ದಾಳಿ ನಡೆದಿತ್ತು. ಸಂಬಂಧಪಟ್ಟವರಿಗೆ ಮೂರೇ ದಿನದಲ್ಲಿ ಕಠಿಣ ಶಿಕ್ಷೆ ನೀಡಲಾಯಿತು. ನಂತರದ ವರ್ಷದಲ್ಲಿ ಮುಖ್ಯಮಂತ್ರಿಯಾದರು. ಆಗಲೂ ಕೂಡ ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆಯಾಗಿಲ್ಲ. ಅಲ್ಪಸಂಖ್ಯಾತರು ಹಾಗೂ ಬಹು ಸಂಖ್ಯಾತರು ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ ಎಂದರು.
 ಮುಖ್ಯಮಂತ್ರಿಯಾದವರು ಈ ರೀತಿಯಲ್ಲಿ ಜಾತಿಯ ವಿಷ ಬೀಜ ಬಿತ್ತುವುದು ಎಷ್ಟರ ಮಟ್ಟಿಗೆ ಸರಿ. ಸಿಎಂ ಅವರು ಉದ್ದಟತನದ ಮಾತುಗಳನ್ನು ಆಡುವುದು ಸರಿಯಲ್ಲ.
 ರಾಜ್ಯದ ಆರುಕಾಲು ಕೋಟಿ ಜನರ ರಕ್ಷಣೆ ಮಾಡಬೇಕಾಗಿರುವುದು ಅವರ ಹೊಣೆಗಾರಿಕೆ. ಈ ಹೇಳಿಕೆ ಅಕ್ಷಮ್ಯ ಅಪರಾಧ ಎಂದ ಯಡಿಯೂರಪ್ಪ, ಕಡಿಮೆ ದರದಲ್ಲಿ ಮದ್ಯ ನೀಡುತ್ತೇವೆಂದು ಹೇಳಿರುವುದು ನೋಡಿದರೆ, ಇದೊಂದು ಸರ್ವಾಧಿಕಾರದ ತೀರ್ಮಾನ ಎಂದು ಅವರು ಇದೇ ಸಂದರ್ಭದಲ್ಲಿ ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.