ಚಿಕ್ಕಮಗಳೂರು

ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಬೇಕು

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.2
ಭಾವಸಾರ ಕ್ಷತ್ರೀಯ ಸಮುದಾಯದ ಜನರ ಅಲೋಚನೆ ಬದಲಾಗಬೇಕು. ಅವರು ತಮ್ಮ ಹಳೆಯ ಜೀವನ ಶೈಲಿಯಲ್ಲೇ ಮುಂದುವರೆಯುವುದನ್ನು ಬಿಟ್ಟು ಆಧುನಿಕ ಜಗತ್ತಿನ ನಾಗಲೋಟಕ್ಕೆ ಮತ್ತು ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಭಾವಸಾರ್ ವಿಷ್ಹನ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಸ್.ಬಿ. ಗುರುನಾಥ್ ರಾವ್ ಮೀರಜ್ಕರ್ ಹೇಳಿದ್ದಾರೆ.
ನಗರದ ಮಂಜುಶ್ರೀ ಗುರುಕುಲ ಶಾಲೆಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಭಾವಸಾರ್ ವಿಷ್ಹನ್ ಇಂಡಿಯಾ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವಸಾರ ಕ್ಷತ್ರೀಯ ಸಮುದಾಯದ ಜನ ಎಂದಿನಂತೆ ತಮ್ಮ ಹಳೆಯ ಜೀವನ ಶೈಲಿಯಲ್ಲೇ ಮುಂದುವರೆಯುತ್ತಿರುವುದಾಗಿ ಅವರು ಬರೀ ವ್ಯಾಪಾರ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅವರ ಸಾಧನೆ  ಬೆರಳೆಣಿಕೆಯಷ್ಟಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಭಿನ್ನಾಭಿಪ್ರಾಯ ಬದಿಗೊತ್ತಿ: ತಮ್ಮ ಸಮುದಾಯದ ಏಳಿಗೆಗಾಗಿ ಭಾವಸಾರ ಕ್ಷತ್ರೀಯರು ಮೊದಲು ತಮ್ಮಲ್ಲಿರುವ ಆಂತರಿಕ ಭಿನ್ನಾಪ್ರಾಯಗಳನ್ನು ಬಿಟ್ಟು ಒಂದಾಗಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದುವರೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಭಾವಸಾರ ಕ್ಷತ್ರೀಯ ಸಮುದಾಯದ ಜನರಲ್ಲಿ ಸ್ನೇಹತ್ವ, ನಾಯಕತ್ವ ಮತ್ತು ಸೇವಾ ಮನೋಭಾವನೆಯನ್ನು  ಬೆಳೆಸುವ ಉದ್ದೇಶದಿಂದ ಭಾವಸಾರ್ ವಿಷ್ಹನ್ ಇಂಡಿಯಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿದ್ದು ಅದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಮುದಾಯದವರು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಮನವಿ ಮಾಡಿದರು.
ಮೂಲ ಸಂಸ್ಕೃತಿ ಉಳಿಸಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಸಿ.ಟಿ. ರವಿ, ನೂತನ ಸಂಸ್ಥೆ ಭಾವಸಾರ ಕ್ಷತ್ರೀಯ ಸಮುದಾಯದ ಮೂಲ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಸ್ಥಾಪಕ ಅಧ್ಯಕ್ಷ ಹೆಬ್ಬಾರೆ ಜನಾರ್ಧನರಾವ್ ಮಾತನಾಡಿ, ನೂತನ ಸಂಸ್ಥೆ ಭಾವಸಾರ ಕ್ಷತ್ರೀಯ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರಮಾಣ ವಚನವನ್ನು ಬೋಧಿಸಲಾಯಿತು. ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಂಸ್ಥೆಯ ಮಾಜಿ ರಾಜ್ಯಪಾಲ ಡಾ. ಪ್ರಭಾಕರ್ ರಾವ್, ಭಾವಸಾರ ಕ್ಷತ್ರೀಯ ಸಮಾಜದ ಜಿಲ್ಲಾಧ್ಯಕ್ಷ ಬಾಂಗ್ರೆ ನಾಗರಾಜ್ ರಾವ್, ನಗರಾಧ್ಯಕ್ಷ ಕಲೋಸೆ ಜನಾರ್ಧನ ರಾವ್, ನಗರಸಭಾ ಸದಸ್ಯ ಜಗದೀಶ್ ಉಪಸ್ಥಿತರಿದ್ದರು. ಸಾಹಿತಿ ರಮೇಶ್ ಬೊಂಗಾಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ರಾಜ್ಯಪಾಲ ಮಂಜುನಾಥ ನವಲೆ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.