ಚಿಕ್ಕಮಗಳೂರು

ಮೂಡಿಗೆರೆಯಲ್ಲೂ ಅಡಕೆ ಹಳದಿ ಎಲೆ ರೋಗ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ. 2
ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಹಳದಿ ಎಲೆ ರೋಗ ಇದೀಗ ಮೂಡಿಗೆರೆ ತಾಲೂಕಿಗೂ ವ್ಯಾಪಿಸಿದೆ.
ತೋಟಗಾರಿಕೆ ಇಲಾಖೆಯ ಮಾಹಿತಿಯ ಪ್ರಕಾರ ಮೂಡಿಗೆರೆ ತಾಲೂಕಿನಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ.
ಈ ರೋಗ ಕಳೆದ 6 ದಶಕಗಳ ಹಿಂದೆ ಕೊಪ್ಪ ತಾಲೂಕಿನ ಮೇಗುಂದದಲ್ಲಿ ಪ್ರಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದು, ನೆರೆಯ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೂ ತನ್ನ ಬಾವುಗಳನ್ನು ಚಾಚಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಮತ್ತು ಎನ್.ಆರ್. ಪುರ ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದ ಹಳದಿ ಎಲೆ ರೋಗ ದಿನ ದಿನಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಕೊಳ್ಳುತ್ತಿದೆ. ಇದೀಗ ಮೂಡಿಗೆರೆ ತಾಲೂಕಿನಲ್ಲೂ ಕಾಣಿಸಿಕೊಂಡಿದೆ.
 ಜಿಲ್ಲೆಯ 7 ತಾಲೂಕಿನಲ್ಲಿ 40,603 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಈ ಪೈಕಿ ಶೃಂಗೇರಿ ತಾಲೂಕಿನಲ್ಲಿ 2,090 ಹೆಕ್ಟೇರ್, ಕೊಪ್ಪ- 5,030, ಎನ್.ಆರ್.ಪುರ- 2,550, ಮೂಡಿಗೆರೆ- 2,600, ಚಿಕ್ಕಮಗಳೂರು- 1,185, ತರೀಕೆರೆ- 7,194, ಕಡೂರು ತಾಲೂಕಿನಲ್ಲಿ 11,954 ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗುತ್ತಿದೆ.
ಆತಂಕ: ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿರುವ ಅಡಕೆ ತೋಟಗಳಲ್ಲಿ ಹಳದಿ ಎಲೆ ರೋಗ ಕಾಣಿಸಿಕೊಳ್ಳುತ್ತಿದೆ. ಒಮ್ಮೆ ಈ ರೋಗ ತೋಟಕ್ಕೆ ಎಂಟ್ರಿಯಾದರೆ ಸಾಕು ಇಡೀ ತೋಟವನ್ನು ಆವರಿಸಿಕೊಳ್ಳಲಿದೆ. ಇದರಿಂದ ಅಡಕೆ ಮರಗಳಲ್ಲಿನ ಫಸಲಿನ ಇಳುವರಿ ಕಡಿಮೆಯಾಗುವ ಜತೆಗೆ ಮರಗಳು  ಒಣಗಲಿವೆ. ಆಗ ಸಹಜವಾಗಿ ಬೆಳೆಗಾರರಿಗೆ ನಷ್ಟವಾಗಲಿದೆ.
 ಜಿಲ್ಲೆಯ 7  ತಾಲೂಕಿನಲ್ಲಿ 40,603 ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈವರೆಗೆ ಈ ರೋಗ ಮಲೆನಾಡಿನ ನಾಲ್ಕು ತಾಲೂಕುಗಳಲ್ಲಿ ಕಾಣಿಸಿಕೊಂಡಿದೆ. ತೋಟಗಾರಿಕೆ ಇಲಾಖೆ ಸರ್ವೆ ನಡೆಸಿರುವ ಪ್ರಕಾರ ಶೃಂಗೇರಿ ತಾಲೂಕಿನಲ್ಲಿ 1,571 ಹೆಕ್ಟೇರ್, ಕೊಪ್ಪ- 2,030, ಎನ್.ಆರ್. ಪುರ ತಾಲೂಕಿನಲ್ಲಿ 372 ಹೆಕ್ಟೇರ್‌ನಲ್ಲಿ ಹಳದಿ ಎಲೆ ರೋಗ ಬಂದಿದ್ದು, ಇದೀಗ ಮೂಡಿಗೆರೆ ತಾಲೂಕಿನ ಕಳಸ ಭಾಗದಲ್ಲಿರುವ 200 ಹೆಕ್ಟೇರ್ ಅಡಕೆ ತೋಟಗಳಲ್ಲಿ ಈ ರೋಗ ಹೊಸದಾಗಿ ಕಾಣಿಸಿಕೊಂಡಿದೆ. ಇದರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಈ ರೋಗದಿಂದ ತಕ್ಷಣಕ್ಕೆ ಹೊರ ಬರಲು ಈವರೆಗೆ ನಡೆದಿರುವ ಸಂಶೋಧನೆಗಳಿಂದ ಸಾಧ್ಯವಾಗಿಲ್ಲ. ಈ ರೋಗ ಪತ್ತೆ ಹಚ್ಚಲು ಶೃಂಗೇರಿಯಲ್ಲಿ ಹಳದಿ ಎಲೆ ರೋಗ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದ್ದು, ಇದು, ಮೊದಲ ಹಂತದ ಸಂಶೋಧನ ಕಾರ್ಯವನ್ನು ಮುಗಿಸಿದೆ. ಇನ್ನುಳಿದ ಹಂತದ ಸಂಶೋಧನೆಗೆ ಇನ್ನಷ್ಟು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ಈ ರೋಗ ನಿರಂತರವಾಗಿ ತನ್ನ ಹಾವಳಿಯನ್ನು ಮುಂದುವರಿಸಲಿದೆ.
ತಕ್ಷಣಕ್ಕೆ ಪರಿಹಾರ ಇಲ್ಲ: ಈ ರೋಗದ ನಿಯಂತ್ರಣಕ್ಕೆ ತಕ್ಷಣದಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದೇ ಪರಿಹಾರವಿಲ್ಲ. ಈ ರೋಗಕ್ಕೆ ತುತ್ತಾಗಿರುವ ಅಡಕೆ ತೋಟಗಳಿಗೆ ನೆರವು ನೀಡಲು ಗೋರಖಘ್ ಸಿಂಗ್ ನೇತೃತ್ವದ ಸಮಿತಿ ಕೇಂದ್ರಕ್ಕೆ ಕೆಲವು ಶಿಫಾರಸ್ಸು ಮಾಡಿತಾದರೂ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಈಗ ಕೊಟ್ಟಿರುವ ತೋಟಗಳ ಪುನಶ್ಚೇತನದ ಆರ್ಥಿಕ ನೆರವು ಕಷ್ಟದಲ್ಲಿರುವ ರೈತರ ಕಣ್ಣೀರು ಒರೆಸಲು ಸಾಧ್ಯವಿಲ್ಲ. 4 ಹೆಕ್ಟೇರ್‌ವರೆಗಿನ ಸಾಲ ಮನ್ನಾ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಪರಿಶೀಲನೆಯಲ್ಲಿದೆ. ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಕೆ ನಂಬಿ ಜೀವನ ನಡೆಸುತ್ತಿದ್ದ ಬೆಳೆಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.