ಇಬ್ಬರು ಕಳ್ಳರ ಬಂಧನ: 60 ಲಕ್ಷ ಮೌಲ್ಯದ ಆಭರಣ ವಶ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.6
ಕಾಫಿ ಎಸ್ಟೇಟ್ನಲ್ಲಿರುವ ಒಂಟಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನಗದು ಸೇರಿದಂತೆ ಸುಮಾರು 60 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲ್ಲುಬೋಬಹಳ್ಳಿಯ ನಿವಾಸಿ ನೀಲಕಂಠ ಅಲಿಯಾಸ್ ಪ್ರಕಾಶ್ ಅಲಿಯಾಸ್ ರಮೇಶ್ ಹಾಗೂ ಹಾಸನದ ಎಚ್.ಎನ್. ನವೀನ್ಕುಮಾರ್ ಆಲಿಯಾಸ್ ದೀಪು ಎಂಬವರನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಆಭರಣಗಳು: ಆರೋಪಿಗಳಿಂದ ಒಂದು ವಜ್ರದ ನೆಕ್ಲೆಸ್ ಹಾಗೂ ಪೆಂಡೆಂಟ್, 4 ಚಿನ್ನದ ನೆಕ್ಲೆಸ್, 6 ಚಿನ್ನದ ಸರಗಳು, 3 ಚಿನ್ನದ ಬಳೆ, ಒಂದು ಚಿನ್ನದ ಸೊಂಟದಪಟ್ಟಿ, 2 ಕೆಜಿ ಬೆಳ್ಳಿ ಗಟ್ಟಿ ಹಾಗೂ ಇತರೆ ಚಿನ್ನಾಭರಣ, 2 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಬೆಲೆ ಬಾಳುವ ವಸ್ತುಗಳು: ಕಾಫಿ ಎಸ್ಟೇಟ್ಗಳಲ್ಲಿ ಮಾಲೀಕರು ಒಂಟಿ ಮನೆಯನ್ನು ಮಾಡಿಕೊಂಡಿ ವಾಸವಾಗಿದ್ದು ಹಾಗೂ ಹಲವಾರು ಕಾಫಿ ಎಸ್ಟೇಟ್ಗಳಲ್ಲಿ ಮಾಲೀಕರು ಚಿಕ್ಕಮಗಳೂರು, ಮಂಗಳೂರು ಮತ್ತಿತರೇ ನಗರಗಳಲ್ಲಿ ವಾಸವಾಗಿ, ಕಾಫಿ ಎಸ್ಟೇಟ್ಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳಲು ಮ್ಯಾನೇಜರ್ ಮತ್ತು ರೈಟರ್ಗಳನ್ನು ನೇಮಿಸಿದ್ದಾರೆ. ಕಾಫಿ ಎಸ್ಟೇಟ್ಗಳಲ್ಲಿರುವ ಬಹಳಷ್ಟು ಮನೆಗಳಲ್ಲಿ ಮಾಲೀಕರು ಯಾವುದೇ ಭದ್ರತೆ ಇಲ್ಲದೆ ನಗದು, ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರುತ್ತಾರೆ ಎಂದರು.
ಠಾಣೆಯಲ್ಲಿ ಪ್ರಕರಣ: ಮೂಡಿಗೆರೆ ತಾಲೂಕಿನ ಉದುವೆ ಗ್ರಾಮದ ಗೋಕುಲ ಎಸ್ಟೇಟ್ನ ಮಾಲೀಕ ಎ.ಪಿ. ರಾಘವೇಂದ್ರ ಅವರು ಮೇ 16 ರಂದು ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣ ಕಳುವುವಾಗಿತ್ತು.
ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮಿತ್ರ ಹೆರಾಜೆ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಸಾಂಧರ್ಬಿಕ ಸಾಕ್ಷಿ ಹಾಗೂ ತಾಂತ್ರಿಕ ಸಾಕ್ಷಾಧಾರಗಳ ಆಧಾರದ ಮೇರೆಗೆ ಇಬ್ಬರು ಆರೋಪಿಗಳನ್ನು ದಸ್ತುಗಿರಿ ಮಾಡಲಾಯಿತು ಎಂದು ಹೇಳಿದರು.
ಸದರಿ ಆರೋಪಿಗಳಲ್ಲಿ ಓರ್ವರಾದ ನೀಲಕಂಠ, ಈ ಹಿಂದೆ ಹಾಸನ ಮತ್ತು ಮೈಸೂರು ಕಾರಾಗೃಹಗಳಲ್ಲಿ 5 ವರ್ಷ ಶಿಕ್ಷೆ ಅನುಭವಿಸಿ 2 ತಿಂಗಳ ಹಿಂದೆ ಬಿಡುಗಡೆಯಾಗಿದ್ದ, ಈತನ ಮೇಲೆ ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಕಳಸ ಹಾಗೂ ಮಡಿಕೇರಿ ಜಿಲ್ಲೆಯ ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈತನು ಈ ಹಿಂದೆ ಸಕಲೇಶಪುರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಹೋಗಿದ್ದ.
ಈತನಿಗೆ ಜೂಜಾಟ, ವಿಲಾಸಿ ಜೀವನ ನಡೆಸಲು ದೊಡ್ಡ ಪ್ರಮಾಣದ ಕಳ್ಳತನ ಮಾಡುವ ಗುರಿಯನ್ನು ಹೊಂದಿ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದರು.
ಇನ್ನೋರ್ವ ಆರೋಪಿ ಎಚ್.ಎನ್. ನವೀನ್ಕುಮಾರ್, ಹಾಸನ ನಗರದ ಪೆನ್ಷನ್ ಮೊಹಲ್ಲ ಹಾಗೂ ಬಡಾವಣೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲ್ಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದರು.
ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳಲು ಎಸ್ಟೇಟ್ ಮಾಲೀಕರು ಈ ಕೆಳಕಂಡ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿದ್ದಾರೆ.
ಎಸ್ಟೇಟ್ನಲ್ಲಿರುವ ಒಂಟಿ ಮನೆಗಳಲ್ಲಿ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮತ್ತು ನಗದುಗಳನ್ನು ಇಡದೇ, ಬ್ಯಾಂಕ್ ಲಾಕರ್ನಲ್ಲಿ ಮತ್ತು ಬೇರೆ ಯಾವುದಾದರೂ ಸುರಕ್ಷತೆ ಇರುವ ಸ್ಥಳಗಳಲ್ಲಿ ಇಡಬೇಕು. ಎಸ್ಟೇಟ್ನಲ್ಲಿ ಹೊರಗಿನ ಊರುಗಳಿಂದ ಮತ್ತು ಹೊರ ರಾಜ್ಯಗಳಿಂದ ತೋಟದ ಕೆಲಸ ಮತ್ತು ಇತರೇ ಕೆಲಸಗಳಿಗೆ ಬರುವ ಕಾರ್ಮಿಕರ ಹಿನ್ನಲೆಯ ಕುರಿತು ವಿಚಾರಣೆ ನಡೆಸಿ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಎಸ್ಟೇಟ್ಗಳಲ್ಲಿ ಮನೆಯ ಸುತ್ತಮುತ್ತ ಸಿ.ಸಿ. ಟಿವಿ ಕ್ಯಾಮರಗಳನ್ನು, ಅಲಾರ್ಮ್ ಮತ್ತು ಇತರೇ ಸುರಕ್ಷತಾ ಉಪಕರಣಗಳನ್ನು ಅಳವಡಿಸಬೇಕು. ಎಸ್ಟೇಟ್ ಮತ್ತು ಮನೆಯ ಭದ್ರತೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಎಸ್ಟೇಟ್ಗಳ ಸುತ್ತಮುತ್ತ ಯಾವುದೇ ಅಪರಿಚಿತ ವ್ಯಕ್ತಿಗಳು ಅನುಮಾನಸ್ಪದ ರೀತಿಯಲ್ಲಿ ಓಡಾಡುವುದು ಕಂಡು ಬಂದರೇ, ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ಎಸ್ಟೇಟ್ಗಳಲ್ಲಿ ಬಹಳಷ್ಟು ಬಾರಿ ಸಣ್ಣ ಪ್ರಮಾಣದ ಕಳುವುವಾಗಿರುವ ಸಮಯಗಳಲ್ಲಿ ಮಾಲೀಕರು ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಲು ನಿರ್ಲಕ್ಷಿಸುತ್ತಾರೆ. ಇದರಿಂದ ಆರೋಪಿಗಳು ಯಾವುದೇ ಭಯವಿಲ್ಲದೆ ತಮ್ಮ ಕಾರ್ಯವನ್ನು ಮಾಡಿಕೊಳ್ಳುತ್ತಾರೆ.
ಯಾವುದೇ ರೀತಿಯ ಬೆಲೆ ಬಾಳುವ ವಸ್ತುಗಳು, ಕಾಫಿ, ಮೆಣಸು ಮತ್ತಿತರೇ ವಸ್ತುಗಳು ಯಾವುದೇ ಸಣ್ಣ ಪ್ರಮಾಣದಲ್ಲಾದರೂ ಸಹ ಕಳುವಾದಾಗ ಮಾಲೀಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಬಂದು ದೂರನ್ನು ನೀಡಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

