ಚಿಕ್ಕಮಗಳೂರು

ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಡ!

Published On :

ಟಿ ಆರ್. ತಾರಾನಾಥ್
ಕ.ಪ್ರ.ವಾರ್ತೆ   ಚಿಕ್ಕಮಗಳೂರು   ಜೂ. 6
ಕಳೆದ ವರ್ಷ ಮುಂಗಾರು ವೈಫಲ್ಯತೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 322.28 ಕೋಟಿ ಈವರೆಗೂ ವಿತರಣೆಯಾಗಿಲ್ಲ.
ಹಣ ಬಿಡುಗಡೆಯಾಗಿ 3 ತಿಂಗಳಾದರೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೈತರಿಗೆ ಪರಿಹಾರದ ಹಣ ಕಂದಾಯ ಇಲಾಖೆ ರೈತರಿಗೆ ತಲುಪಿಸಿಲ್ಲ. ವಿಧಾನಸಭಾ ಚುನಾವಣಾ ಅಧಿಸೂಚನೆಗೂ ಮುನ್ನವೇ ಬಿಡುಗಡೆ ಆದ ಹಣ ಹೊಸ ಸರ್ಕಾರ ರಚನೆಯಾದ ಮೇಲೂ, ಯಾವುದೇ ತಾಂತ್ರಿಕ ಕಾರಣಗಳಿಲ್ಲದೆಯೂ ರೈತರ ಕೈ ಸೇರಿಲ್ಲ. ಜಿಲ್ಲಾಡಳಿತದ ಇಚ್ಛಾಶಕ್ತಿ ಕೊರತೆಯೊಂದರಿಂದಲೇ ರೈತರಿಗೆ ತೊಂದರೆಯಾಗಿದೆ.
157 ತಾಲೂಕುಗಳಲ್ಲಿ ಬರ: ಕಳೆದ ವರ್ಷ ಸಕಾಲದಲ್ಲಿ ಮುಂಗಾರು ಮಳೆಯಾಗದ ಕಾರಣ ರಾಜ್ಯದ 26 ಜಿಲ್ಲೆಗಳ 157 ತಾಲೂಕುಗಳಲ್ಲಿ ಬರಗಾಲ ಬಂದಿತು. ರೈತರು ಬಿತ್ತಿದ ಬೀಜಗಳು ಮಣ್ಣಿನಲ್ಲಿ ಕರಗಿ ಹೋದವು. ಕುಡಿಯುವ ನೀರಿನ ಹಾಹಾಕಾರ ಎದುರಾಯಿತು. ಈ ಕರಾಳ ದಿನಗಳು ಇಂದಿಗೂ ಮುಂದುವರೆದಿವೆ.  ರೈತರ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯ (ವಿಪತ್ತು ನಿರ್ವಹಣಾ ವಿಭಾಗ) 21-1-2013ರಲ್ಲಿ ಮಂಜೂರಾತಿ ನೀಡಿದ್ದು, 10 ದಿನಗಳೊಳಗೆ ಕೇಂದ್ರದ ಆರ್ಥಿಕ ಇಲಾಖೆ ಅನುದಾನ ಬಿಡುಗಡೆಗೆ ಒಪ್ಪಿತ್ತು. ಈ ಹಣ ರಾಜ್ಯ ಸರ್ಕಾರ ಮಾರ್ಚ್ 8ಕ್ಕೇ ಬಿಡುಗಡೆ ಮಾಡಿದೆ.
322.28 ಕೋಟಿ ಬಿಡುಗಡೆ: ಕೇಂದ್ರ ಸರ್ಕಾರ 322.28 ಕೋಟಿಯನ್ನು ಮುಂಗಾರು ವೈಫಲ್ಯತೆಯಿಂದ ಅತಿ ಹೆಚ್ಚು ನಷ್ಟವಾಗಿರುವ ಜಿಲ್ಲೆಗಳಿಗೆ ಅಲ್ಲಿನ ಹಿಡುವಳಿಯ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತುಮಕೂರು ಜಿಲ್ಲೆಗೆ 41.75 ಕೋಟಿ, ಬೆಳಗಾವಿ ಜಿಲ್ಲೆಗೆ 29.36 ಕೋಟಿ, ಗುಲ್ಬರ್ಗ ಜಿಲ್ಲೆಗೆ 20.22 ಕೋಟಿ, ಚಾಮರಾಜನಗರ ಜಿಲ್ಲೆಗೆ 18.26 ಕೋಟಿ ಹೀಗೆ ಎಲ್ಲ 26 ಜಿಲ್ಲೆಗಳ 157 ತಾಲೂಕುಗಳಿಗೆ 322.28 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ತೋಟಗಾರಿಕೆ ಬೆಳೆಗಳಿಗೆ 100 ಕೋಟಿ, ಮಳೆಯಾಶ್ರಿತ ಕೃಷಿ ಬೆಳೆಗೆ 21 ಕೋಟಿ, ನೀರಾವರಿ ಕೃಷಿ ಬೆಳೆಗೆ 17 ಕೋಟಿ ಬಿಡುಗಡೆಯಾಗಿದೆ. ಈ ಅನುದಾನವನ್ನು ಆದೇಶ ಹೊರಡಿಸಿದ 15 ದಿನಗಳೊಳಗೆ ವಿತರಿಸಿ, ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ ತಾಲೂಕುಗಳಲ್ಲಿ ಸುವರ್ಣ ಭೂಮಿ ಯೋಜನೆ ಮತ್ತು ಆಲೂಗಡ್ಡೆ ಬೆಳೆ ನಷ್ಟಕ್ಕೆ ಸರ್ಕಾರದಿಂದ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಈ ಅನುದಾನವಿಲ್ಲ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಅವರು ಬಿತ್ತಿರುವ ಕ್ಷೇತ್ರಕ್ಕೆ ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಲೆಕ್ಕಮಾಡಿ, ಕನಿಷ್ಠ ಪರಿಹಾರ 500 ಹಾಗೂ ಗರಿಷ್ಠ 2,000ದಂತೆ, ಬಹು ವಾರ್ಷಿಕ ಹಣ್ಣು ಮತ್ತು ಪ್ಲಾಂಟೇಷನ್ ಬೆಳೆಗಳಿಗೆ ಕನಿಷ್ಠ 1,000 ಹಾಗೂ ಗರಿಷ್ಠ 4,000 ಪರಿಹಾರ ಪಾವತಿಸಬೇಕು.
ವಿತರಣಾ ಕ್ರಮ: ಬೆಳೆ ನಷ್ಟ ಹೊಂದಿರುವ ರೈತರ ಪಟ್ಟಿಯನ್ನು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಪ್ರತ್ಯೇಕವಾಗಿ ಸಿದ್ಧಪಡಿಸಿ, ಅದನ್ನು ತಾಲೂಕು ಕಚೇರಿಗೆ ಕಳುಹಿಸಬೇಕು. ಆದರೆ, ಈ ಹಣದ ಬಗ್ಗೆ ರೈತರಿಗಿರಲಿ ಕೃಷಿ ಅಧಿಕಾರಿಗಳಿಗೂ ಮಾಹಿತಿಯಿಲ್ಲ. ಕೆಲವು ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಾಲೂಕು ಕಚೇರಿಗಳಿಗೇ ಕಳುಹಿಸಿಲ್ಲ.
ರಾಜ್ಯದ ಕೆಲವೆಡೆ ಪ್ರತಿದಿನ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಕೈ ಸೇರಿದರೆ ರೈತರಿಗೆ ತುಸು ಸಮಾಧಾನವಾಗಬಹುದು.


ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ, ರೈತರಿಗೆ ವಿತರಣೆಯಾಗಬೇಕಿದೆ. ಅರ್ಹ ರೈತರ ಪಟ್ಟಿಯನ್ನು ತಾಲೂಕು ಕಚೇರಿಗಳಿಗೆ ಕಳುಹಿಸಲಾಗಿದೆ. ಅಲ್ಲಿಂದ ಬ್ಯಾಂಕ್ಗಳಿಗೆ ಪಟ್ಟಿ ಹೋಗಲಿದೆ. ಅಲ್ಲಿಂದ ರೈತರ ಖಾತೆಗೆ ಹಣ ಜಮಾವಾಗಲಿದೆ.
ಟಿ ರಾಜು.,ಜಂಟಿ ಕೃಷಿ ನಿರ್ದೇಶಕರು, ಚಿಕ್ಕಮಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.