ಚಿಕ್ಕಮಗಳೂರು

ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಬದಲಾವಣೆ ಬೇಡ

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಜೂ.8
ಸರ್ಕಾರಗಳು ಬದಲಾದಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನು ಬದಲಾವಣೆ ಮಾಡುವುದು ಸರಿಯಲ್ಲ. ಮಂತ್ರಿಗಳ ಮರ್ಜಿಗೆ ಒಳಗಾಗಿ ಅಧ್ಯಕ್ಷರನ್ನು ಆಗಾಗ ಬದಲಾಯಿಸುವುದನ್ನು ಕೈಬಿಡಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಿಗಮ, ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಬದಲಾವಣೆ ಮಾಡಿದಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರನ್ನು ಬದಲಾವಣೆ ಮಾಡಲಾಗುತ್ತಿದೆ. ನೂತನ ಮುಖ್ಯಮಂತ್ರಿಗಳಿಗೆ ಅವರು ಇಷ್ಟವಾದರೆ ಮುಂದುವರೆಸಬಹುದು. ಇಲ್ಲವಾದರೆ ಬದಲಾವಣೆ ಮಾಡಬಹುದು. ಈ ಕ್ರಮ ಸರಿಯಲ್ಲ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನು ಮುಂದುವರೆಸುವಂತೆ ಒತ್ತಾಯಿಸಿದ್ದೇವು. ಅದಕ್ಕೆ ಅವರು ಸ್ಪಂದಿಸಿ ಅಧ್ಯಕ್ಷರನ್ನು ಮುಂದಿನ ಅವಧಿವರೆಗೆ ಮುಂದುವರೆಸಿದ್ದರು.
ಸ್ವಾಯತ್ತತೆ ಸಂಸ್ಥೆಯಾಗಿಸಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಸಂಸ್ಥೆಯಾದರೂ ಇದು, ತನ್ನಪಾಡಿಗೆ ಕೆಲಸ ಮಾಡಲು ಸ್ವಾಯತ್ತತೆ ನೀಡಬೇಕು. ಇದಕ್ಕೆ ಅಧ್ಯಕ್ಷ ಮತ್ತು ಸದಸ್ಯರ ನೇಮಕ, ಅವರ ಮುಂದುವರಿಕೆ ಕ್ರಮ, ಕೇಂದ್ರ ಸಾಹಿತ್ಯ ಅಕಾಡೆಮಿ ರೀತಿಯಲ್ಲಿರಬೇಕು.
ಈ ಸಂಸ್ಥೆಯಲ್ಲಿ ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ ಇರಬೇಕು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ನಂತರ ಕನ್ನಡ ಭಾಷೆಯ ಬೆಳವಣಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ತಕ್ಷಣ ಬುದ್ಧಿವಂತ ಸಂಸ್ಥೆಗಳಾದ ವಿಶ್ವವಿದ್ಯಾನಿಲಯಗಳಿಂದ ಸಲಹೆ ಪಡೆಯಲಾಯಿತು. ಅವುಗಳು ಹೇಳಿದಂತೆ ಕೆಲವು ಪುಸ್ತಕಗಳನ್ನು ಮುದ್ರಣ ಮಾಡಿಸಲಾಯಿತು.
 ಓದುಗಾರರು ಅವುಗಳನ್ನು ಸ್ವೀಕರಿಸುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಯೋಚನೆಯೇ ಮಾಡಿಲ್ಲ. ಕನ್ನಡದ ಅಗತ್ಯತೆಯ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಜನ ಓದುತ್ತಾರೆಂದು ಲದ್ದಿ ತಂದು ಹಾಕುವುದಲ್ಲ, ಅಗತ್ಯಕ್ಕೆ ತಕ್ಕಂತೆ ಪುಸ್ತಕ ಮುದ್ರಣ ಮಾಡಿಸಿಕೊಡಬೇಕು ಎಂದರು.
ಕಂಪ್ಯೂಟರ್‌ನಲ್ಲಿ  ಕನ್ನಡ ಬಳಕೆ ಕಡ್ಡಾಯಗೊಳಿಸಿ: ಕನ್ನಡ ಭಾಷೆ ವಿಜ್ಞಾನ ಶಿಕ್ಷಣದಲ್ಲೂ ಬಳಕೆಯಾಗಬೇಕು. ಕಂಪ್ಯೂಟರ್‌ನಲ್ಲೂ ಕನ್ನಡ ಬಳಕೆಯಾಗಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ.
ಈ ವಿಷಯದಲ್ಲೇ ತೇಜಸ್ವಿ ಅವರು ತುಂಬಾ ಆಸಕ್ತಿ ಹೊಂದಿದ್ದರು. ಹಲವೆಡೆ ಪ್ರಸ್ತಾಪ ಮಾಡಿದ್ದರು. ತಮಿಳುನಾಡಿಗೆ ಹೋಲಿಕೆ ಮಾಡಿದರೆ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಯಲ್ಲಿ ನಾವುಗಳು 5 ಯುಗಗಳ ಹಿಂದೆ (3 ವರ್ಷಗಳಿಗೆ ಒಂದು ಯುಗ) ಇದ್ದೇವೆಂದು ಹೇಳುತ್ತಿದ್ದರು.
   ಕಂಪ್ಯೂಟರ್‌ನಲ್ಲಿ  ಕನ್ನಡ ಬಳಕೆ ಕಡ್ಡಾಯಗೊಳಿಸುವ ಸಂಕಲ್ಪದ ಶಕ್ತಿ ರಾಜ್ಯ ಸರ್ಕಾರಕ್ಕೆ ಬರಬೇಕು. ಆದರೆ, ಈ ಬಲ ಸರ್ಕಾರದಲ್ಲಿ ಕಾಣುತ್ತಿಲ್ಲ. ಶಾಸ್ತ್ರೀಯ ಸ್ಥಾನಮಾನ ಸಿಕ್ಕ ನಂತರ ಕೇಂದ್ರದಿಂದ ರಾಜ್ಯಕ್ಕೆ ಹಣ ಬರುತ್ತಿದೆ. ಆ ಹಣವನ್ನು ವಿಜ್ಞಾನದಲ್ಲಿ ಕನ್ನಡದ ಬಳಕೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಅವುಗಳಲ್ಲಿ ಇಂಗ್ಲೀಷ್ ಸೇರಿದಂತೆ ತಮಿಳು ಮತ್ತು ಇತರೆ ಭಾಷೆಗಳು ಬಳಕೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಕನ್ನಡಕ್ಕೆ ನಿರೀಕ್ಷಿತಮಟ್ಟದಲ್ಲಿ ಸ್ಥಾನ ಈವರೆಗೆ ಸಿಕ್ಕಿಲ್ಲ. ಕನ್ನಡದ ಬೆಳವಣಿಗೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಣ ನೀಡಲಾಗಿತ್ತು.
 ಆದರೆ, ಅಧಿಕಾರಿಗಳು ಅದನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಲಿಲ್ಲ. ಅಂತಹ ಅಧಿಕಾರಿಗಳನ್ನು ಸರ್ಕಾರ ಸಾಕುತ್ತಿದೆ ಎಂದು ಹೇಳಿದರು.
ಶಾಸ್ತ್ರಗಳು ಕನ್ನಡ ಭಾಷೆಯಲ್ಲಿ ಸೃಷ್ಟಿಯಾಗಲಿ: ಸೃಜನಶೀಲತೆಗೆ ಯೋಗ್ಯವಾದ ರೀತಿಯಲ್ಲಿ ಕನ್ನಡ ಬೆಳೆದಿದೆ. ವೈದ್ಯರು, ತಮ್ಮ ವೃತ್ತಿಯ ಅನುಕೂಲಕ್ಕಾಗಿ, ರೋಗಿಗಳಿಗಾಗಿ ಕನ್ನಡ ಕಲಿಯುತ್ತಿದ್ದಾರೆ. ನಮಗೆ ಅಗತ್ಯವಿರುವ ಶಾಸ್ತ್ರಗಳು ಕನ್ನಡ ಭಾಷೆಯಲ್ಲಿ ಸೃಷ್ಟಿಯಾಗಬೇಕು.
ಅದನ್ನು ಕಲಿಸುವ ಕೆಲಸ ಆಗಬೇಕು. ಆ ರೀತಿಯಲ್ಲಿ ಯೋಚಿಸಬೇಕು. ಆದರೆ, ಅದು ಆಗುತ್ತಿಲ್ಲ. ಕನ್ನಡ ಉಪಯುಕ್ತತೆ ಜಾಸ್ತಿ ಆಗಬೇಕು. 1 ರಿಂದ 10ನೇ ತರಗತಿವರೆಗೆ ಕನ್ನಡ ರಾಷ್ಟ್ರೀಕರಣ ಮಾಡಬೇಕು.
ಅಂದರೆ ರಾಜ್ಯ ಭಾಷೆಯ ಮೂಲಕ ಶಿಕ್ಷಣ ನೀಡಬೇಕು. ಈ ಹಂತದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಾರದು. ಆದರೆ, ಪ್ರಭಾವಿಗಳು ಮತ್ತು ಶಾಸಕರು ಕೆಲವು ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಇದೊಂದು ಲಾಭ ತರುವ ಉದ್ಯಮವಾಗಿದೆ.
 ಭಾರತೀಯ ಭಾಷೆ ಉಳಿಯಬೇಕಾದರೆ, ಅವರವರ ರಾಜ್ಯ ಭಾಷೆಯಲ್ಲಿ ಶಿಕ್ಷಣ ನೀಡುವ ಪದ್ಧತಿಯನ್ನು ಜಾರಿಗೆ ತರಬೇಕು. ಬೇರೆ ಭಾಷೆಯನ್ನು ಕಲಿಯಿರಿ, ಅದಕ್ಕೆ ಯಾರೂ ಬೇಡ ಎಂದು ಹೇಳೋದಿಲ್ಲ. ಬೇರೆ ಭಾಷೆ ಕಲಿಯುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ವರ್ಧನೆಯಾಗುತ್ತದೆ ಎಂದರು.
ತೃಪ್ತಿಕರವಾಗಿಲ್ಲ: ಕವಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕೆಲಸ ತೃಪ್ತಿಕರವಾಗಿಲ್ಲ. ಈ ಸಂಸ್ಥೆಯು ಯಾವುದೇ ಹೊಸ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಈ ಹಿಂದೆ ಇರುವ ಕಾರ್ಯಕ್ರಮಗಳನ್ನೇ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು.  ಇದೇ ಸಂದರ್ಭದಲ್ಲಿ ಕವಿ ಬಿ.ಆರ್. ಲಕ್ಷ್ಮಣರಾವ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.