ಗೂಂಡಾಗಿರಿ ಮೂಲಕ ಒತ್ತುವರಿ ತೆರವು ಸರಿಯಲ್ಲ: ದೇವರಾಜ್
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.8
ಕಾನೂನಿನ ನೆಪವೊಡ್ಡಿ ರಾಜಕೀಯ ಒತ್ತಡಕ್ಕೆ ಮಣಿದು ಗೂಂಡಾಗಿರಿ ವರ್ತನೆ ಮೂಲಕ ಒತ್ತುವರಿ ತೆರವು ಮಾಡುವ ಜನ ವಿರೋಧಿ ಚಟುವಟಿಕೆ ಮುಂದುವರೆಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರ ಮತ್ತು ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಎಚ್.ಎಚ್. ದೇವರಾಜ್ ಎಚ್ಚರಿಸಿದ್ದಾರೆ.
ಚಿಕ್ಕೊಳಲೆ ಗ್ರಾಮದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಒತ್ತುವರಿ ಕಾಫಿ ತೋಟವನ್ನು ತೆರವು ಮಾಡಿದ್ದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
ಯಾವ ಕಾನೂನು ಹೇಳಿದೆ: ಒತ್ತುವರಿ ಜಾಗದಲ್ಲಿ ಬೆಳೆದಿರುವ ಗಿಡ, ಮರಗಳನ್ನು ಕಡಿದು ತೆರವು ಮಾಡಿ ಎಂದು ಯಾವ ಕಾನೂನು ಹೇಳಿದೆ ಎಂದು ಪ್ರಶ್ನಿಸಿದ ಅವರು, ನ್ಯಾಯಾಲಯದ ಆದೇಶವಿದ್ದರೆ ಟ್ರಂಚ್ ಮಾಡಿ ಬೇಲಿ ನಿರ್ಮಿಸಬೇಕಿತ್ತು. ಅದನ್ನು ಬಿಟ್ಟು ಮಗುವಿನಂತೆ ಬೆಳೆಗಾರರು ಸಾಕಿ ಪೋಷಿಸಿದ ಕಾಫಿ ಗಿಡಗಳನ್ನು ಕತ್ತರಿಸಿರುವುದು ಅರಣ್ಯ ಇಲಾಖೆಯ ಘೋರ ಅಪರಾಧ. ರಾಜಕೀಯ ಒತ್ತಡಕ್ಕೆ ಮಣಿದು ಈ ಕೃತ್ಯ ಎಸಗಿರುವುದು ಖಂಡನಾರ್ಹ ಎಂದರು.
ಒತ್ತುವರಿ ತೆರವು ನೆಪದಲ್ಲಿ ಸಸ್ಯ ಸಂಕುಲ ನಾಶಮಾಡಿ, ಪ್ರಾಣಿಗಳಿಗೆ ಜೀವ ಭಯ ಮೂಡಿಸಿದ್ದಾರೆ. ಇದನ್ನು ಪರಿಸರವಾದಿಗಳು ಬಂದು ಸ್ಥಳ ಪರಿಶೀಲಿಸಿ ಪರಿಸರನಾಶ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಹಿತಾಸಕ್ತಿ ದಾವೆ: ಒತ್ತುವರಿ ತೆರವು ಪ್ರಕರಣ ಕುರಿತಂತೆ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಡಲು ಒತ್ತಡ ಹೇರುತ್ತೇವೆ ಮತ್ತು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನದಟ್ಟು ಮಾಡುವ ಸಲುವಾಗಿ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ವೈರತ್ವದ ರಾಜಕಾರಣಕ್ಕೆ ತೋಟಗಳು ಬಲಿಯಾಗುತ್ತಿವೆ. ಈ ರೀತಿ ಒತ್ತುವರಿ ಜಾಗ ತೆರವು ಮಾಡುವುದಾದರೆ ಒತ್ತುವರಿ ಜಾಗದಲ್ಲಿರುವ ಕೆಲವು ಸರ್ಕಾರಿ ಕಚೇರಿಗಳು ಸಹ ತೆರವುಗೊಳಿಸಬೇಕು ಎಂದರು.
ಮನುಷ್ಯತ್ವ ಅಗತ್ಯ: ಹೊಲದಗದ್ದೆ ಗಿರೀಶ್ ಮಾತನಾಡಿ, ಪ್ರಜಾಪ್ರಭುತ್ವವನ್ನು ವಿರೋಧಿಸಬಾರೆದೆಂಬ ದೃಷ್ಟಿಯಿಂದ ಬೆಳೆಗಾರರು ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಮುಂದಾಗಿಲ್ಲ. ಯಾವುದೇ ಕಾನೂನಿನಿಂದ ಅರಣ್ಯ ಮತ್ತು ಪರಿಸರ ಉಳಿಸಲು ಸಾಧ್ಯವಿಲ್ಲ, ಮಾನವೀಯತೆ ಮತ್ತು ಮನುಷ್ಯತ್ವದಿಂದ ಮಾತ್ರ ಅರಣ್ಯ ಸಂಪತ್ತು ಉಳಿಯುತ್ತದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಚಂದ್ರಪ್ಪ, ಎಂ.ಡಿ. ರಮೇಶ್, ಲಕ್ಷ್ಮಣ ಗೌಡ, ವಿಕ್ರಾಂತ್, ಶಿವಣ್ಣ, ಶ್ರೀಕಂಠೇ ಗೌಡ, ಈಶ್ವರಗೌಡ, ಸುಧೀಂದ್ರ ಗೌಡ, ಎಚ್.ಎನ್. ಕೃಷ್ಣೇಗೌಡ, ಪುಟ್ಟೇಗೌಡ ಹಾಜರಿದ್ದರು.
ಜೂ. 12 ರಂದು ಪ್ರತಿಭಟನೆ: ಒತ್ತುವರಿ ಕಾಫಿ ತೋಟ ತೆರವು ಕುರಿತಂತೆ ಅರಣ್ಯ ಇಲಾಖೆ ಕ್ರಮ ವಿರೋಧಿಸಿ ಜೂ. 12ರಂದು ಜೆಡಿಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮುಖಂಡ ಎಚ್.ಎಚ್. ದೇವರಾಜ್ ತಿಳಿಸಿದ್ದಾರೆ.
ಜೂ. 12 ರಂದು ನಗರದ ಹಳೇ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ತೆರಳಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಹೇಳಿದ್ದಾರೆ.
ಜೆಡಿಎಸ್ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಬೆಳೆಗಾರರ ಹಿತಾಸಕ್ತಿ ಹೊಂದಿರುವ ಯಾವ ರಾಜಕೀಯ ಪಕ್ಷಗಳು ಭಾಗವಹಿಸಿದರೂ ಸ್ವಾಗತಿಸುವುದಾಗಿ ತಿಳಿಸಿರುವ ಅವರು, ಜಿಲ್ಲೆಯ ವಿವಿಧ ಸಂಘಟನೆಗಳು, ರೈತರು, ಸಾರ್ವಜನಿಕರು ಕೈಜೋಡಿಸಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

