ಚಿಕ್ಕಮಗಳೂರು

ಅವಹೇಳನಕಾರಿ ಪುಸ್ತಕ ಹಿಂಪಡೆಯಲು ಒತ್ತಾಯ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.9
ತಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮುದ್ರಿಸಿ ಚಿಕ್ಕಮಗಳೂರು ಕ್ಯಾಥೋಲಿಕ್ ಧರ್ಮಕ್ಷೇತ್ರ ಇತ್ತೀಚೆಗೆ ಹೊರತಂದಿರುವ ಸುವರ್ಣ ಸಂಪುಟ ಪುಸ್ತಕವನ್ನು ತಕ್ಷಣ ಹಿಂಪಡೆಯುವಂತೆ ಧರ್ಮಾಧ್ಯಕ್ಷರನ್ನು ಸಾಮೂಹಿಕವಾಗಿ ಒತ್ತಾಯಿಸುವ ನಿರ್ಣಯವನ್ನು ನಗರದ ಕ್ಯಾಥೋಲಿಕ್ ಕ್ಲಬ್‌ನಲ್ಲಿ ಶನಿವಾರ ಸಂಜೆ ನಡೆದ ಕ್ಯಾಥೋಲಿಕ್ ಕೊಂಕಣಿ ಭಾಷಿಗರ ಸಭೆ ಕೈಗೊಂಡಿದೆ.
ತಮ್ಮ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಪುಸ್ತಕದಲ್ಲಿ ಆಗಿರುವ ಲೋಪಕ್ಕಾಗಿ ಧರ್ಮಾಧ್ಯಕ್ಷರು ಭೇಷರತ್ತಾಗಿ ಕ್ಯಾಥೋಲಿಕ್ ಕೊಂಕಣಿ ಭಾಷಿಗರ ಕ್ಷಮೆ ಯಾಚಿಸಬೇಕು. ಕೊಂಕಣಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಚರ್ಚ್‌ಗಳಲ್ಲಿ ಪ್ರತಿ ಭಾನುವಾರ ಕೊಂಕಣಿ ಭಾಷೆಯಲ್ಲಿ ಪೂಜೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಆ ಚರ್ಚ್‌ಗಳಲ್ಲಿ ಕೊಂಕಣಿ ಭಾಷೆ ಬಲ್ಲ ಗುರುಗಳನ್ನೇ ನೇಮಿಸಬೇಕು ಎಂದು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು.
ತೀವ್ರ ಆಕ್ರೋಶ: ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಪುಸ್ತಕದಲ್ಲಿ ತಮ್ಮ ಸಮುದಾಯವನ್ನು ಕುರಿತು ಅವಹೇಳನಕಾರಿಯಾಗಿ ಮುದ್ರಿಸಿರುವ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೇ ಪ್ರತಿಭಾವಂತ ಗುರುಗಳನ್ನು ಬಿಟ್ಟು ಬಾಡಿಗೆ ಸಾಹಿತಿಗಳಿಂದ ಪುಸ್ತಕ ಬರೆಸಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಸುವರ್ಣ ಸಂಪುಟ ಪುಸ್ತಕದಲ್ಲಿ ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಬರೆಸುವ ಮೂಲಕ ತಾವು ಕೊಂಕಣಿ ಭಾಷಿಗರ ವಿರೋಧಿ ಎಂಬುದನ್ನು ಧರ್ಮಾಧ್ಯಕ್ಷರು ಸಾಭೀತು ಪಡೆಸಿದ್ದಾರೆ. ಕ್ರೈಸ್ತ ಸಮುದಾಯವನ್ನು ಭಾಷೆಯ ಹೆಸರಿನಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಸಾಮೂಹಿಕ ಖಂಡನೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ್ ಕೊಂಕಣಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎರಿಕ್ ಒಝಾರಿಯೋ ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪುಸ್ತಕದಲ್ಲಿ ಮುದ್ರಿಸಿರುವ ಕ್ರಮವನ್ನು ಕ್ಯಾಥೋಲಿಕ್ ಕೊಂಕಣಿ ಭಾಷಿಗರು ಸಾಮೂಹಿಕವಾಗಿ ಖಂಡಿಸಬೇಕು, ಪುಸ್ತಕವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಪುಸ್ತಕವನ್ನು ಹಿಂಪಡೆಯುವುದರ ಜೊತೆಗೆ ಕೊಂಕಣಿ ಭಾಷಿಗರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ಧರ್ಮಾಧ್ಯಕ್ಷರಿಗೆ ನೀಡುವಂತೆ ಜಿಲ್ಲಾ ಮುಖಂಡರಿಗೆ ಸೂಚಿಸಿದ ಅವರು ಕೊಂಕಣಿ ಭಾಷಿಗರಲ್ಲಿ ಜಾಗೃತಿ ಮೂಡಿಸುವ ಕುರಿತು ಎಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಕೊಂಕಣಿ ರಾಕಣ್ ಸಂಚಾಲನ್ ಅಧ್ಯಕ್ಷ ಪ್ರಮೋದ್ ಪಿಂಟೋ, ಉಪಾಧ್ಯಕ್ಷ ಎರಿಕ್ ಡಿಸಿಲ್ವ ಕಾರ್ಯದರ್ಶಿ ಸಿಲ್ವಸ್ಟರ್ ಸಾಲ್ಡಾನ, ವಕ್ತಾರ ಕಿರಣ್ ಡಿಸೋಜಾ, ಖಜಾಂಚಿ ಸ್ಟ್ಯಾನಿ ಡಿಸಿಲ್ವಾ, ಅರುಣ್ ಸಾಲ್ಡಾನ ಸೇರಿದಂತೆ ವಿವಿಧ ಧರ್ಮ ಕೇಂದ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.