ಚಿಕ್ಕಮಗಳೂರು

ಒತ್ತುವರಿ ಸಮಸ್ಯೆ ಬಗೆಹರಿಸಲು ಸಮೀಕ್ಷೆ ಅಗತ್ಯ

Published On :

ಕ.ಪ್ರ.ವಾರ್ತೆ, ಮೂಡಿಗೆರೆ ,  ಜೂ.9
ರೈತರಿಗೆ ಮರಣ ಶಾಸನವಾಗಿರುವ ಒತ್ತುವರಿ ಸಮಸ್ಯೆಯನ್ನು ಬಗೆಹರಿಸಲು, ವಿಶೇಷ ತಂಡದಿಂದ ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ಅವರು ಒತ್ತಾಯಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಸುಬ್ರಮಣ್ಯಂ ಅವರ ವರದಿಗೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಂಸ್ಥೆಯ ಎ.ಸ್.ಆರ್. ಹಿರೇಮಠ್ ಅವರು ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಅರ್ಜಿ ಸಲ್ಲಿಕೆ: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಸುಬ್ರಮಣ್ಯಂ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದಲ್ಲಿ ಶೇ 98ರಷ್ಟು ಸಣ್ಣ, ಅತಿಸಣ್ಣ, ಭೂಹೀನ ರೈತರು, ದಲಿತರು, ಕೃಷಿ ಕಾರ್ಮಿಕರು ಬೀದಿಗೆ ಬೀಳುವ ಅಪಾಯವಿದೆ. ಒತ್ತುವರಿಯಲ್ಲಿ ಅಮಾಯಕ ರೈತರ ತಪ್ಪಿರದೇ, ಅಧಿಕಾರಿಗಳು ಮತ್ತು ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಒತ್ತುವರಿ ಸಮಸ್ಯೆ ಉದ್ಭವಿಸಿದೆ ಎಂದವರು ಹೇಳಿದರು.
ರೈತರು ಉಳುಮೆ ಮಾಡುತ್ತಿರುವ ಭೂಮಿ ಕಂದಾಯ ಭೂಮಿಯೇ ಅಥವಾ ಅರಣ್ಯ ಭೂಮಿಯೇ ಎಂಬುವುದನ್ನು ವಿಂಗಡಿಸಲು ಸರ್ಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ತಲಾತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯಲ್ಲಿ ವಾಸದ ಮನೆ, ಹತ್ತಾರು ವರ್ಷಗಳ ಮರಗಿಡ, ಜಮೀನಿನ ಇತಿಹಾಸವನ್ನು ತಿಳಿಸುತ್ತವೆಯಾದರೂ, ಸ್ಥಳಕ್ಕೆ ಹೋಗಿ ಪರಿಶೀಲಿಸಿ ವರದಿ ಸಲ್ಲಿಸಿದ ಅಧಿಕಾರಿಗಳು, ಕಚೇರಿಯಲ್ಲಿಯೇ ಕುಳಿತು ಭೂಮಿಯ ವಿಭಾಗೀಕರಣಗೊಳಿಸಿ ಕೃಷಿ ಭೂಮಿಯನ್ನು ಅರಣ್ಯ ಎಂಬಂತೆ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದರು.
ಮನೆ ಕಳಕೊಳ್ಳುವ ಪರಿಸ್ಥಿತಿ: ಇದರ ಪರಿಣಾಮವಾಗಿ ಇಂದು ಒತ್ತುವರಿ ನೆಪದಲ್ಲಿ ಸಾವಿರಾರು ರೈತರು ವಾಸಿಸುವ ಮನೆಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅಂತಹ ಭೀಕರ ಪರಿಣಾಮ ಸೃಷ್ಟಿಸದೇ ಸರ್ಕಾರ ರೈತರ ಪರ ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದವರು ಹೇಳಿದರು.
ಆದಿವಾಸಿಗಳ ಅರಣ್ಯ ಹಕ್ಕುಗಳ ಕಾಯ್ದೆ 2006 ರ ಉಲ್ಲೇಖದಂತೆ ಜೀವನ ನಿರ್ವಹಣೆಗೆ ಕೃಷಿಯಲ್ಲಿ ತೊಡಗುವ ಹಕ್ಕಿನ ಅನ್ವಯ ಒಂದು ಕುಟುಂಬಕ್ಕೆ ಹತ್ತು ಎಕರೆವರೆಗೆ ಅರಣ್ಯ ಭೂಮಿಯನ್ನು ಕೃಷಿಗಾಗಿ ಹೊಂದುವ ಅವಕಾಶ ಕಲ್ಪಿಸಿಕೊವುದರೊಂದಿಗೆ, ಕಂದಾಯ ಜಮೀನಿನಲ್ಲಿ ಜೀವನೋಪಯಕ್ಕಾಗಿ ಸಾಗುವಳಿ ಮಾಡಿರುವ ಸಣ್ಣ ರೈತರಿಗೆ, ಭೂ ರಹಿತ ಕುಟುಂಬಗಳಿಗೆ 10 ಎಕ್ರೆ ಪಟ್ಟಾ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಭೂಮಿ ಮತ್ತು ಒತ್ತುವರಿ ಜಮೀನುಗಳನ್ನು ವಿಶೇಷ ತಂಡದಿಂದ ಸಮೀಕ್ಷೆಯಿಂದ ಗುರುತಿಸಿ ಪೂರ್ಣ ಮಾಹಿತಿ ಪಡೆದುಕೊಂಡು ಒತ್ತುವರಿದಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪಟ್ದೂರಿನ ಪಿ.ಕೆ. ನಾಗೇಶ್, ಬಿ.ಸಿ. ದಯಾಕರ್, ಹಳೇಕೆರೆ ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.